
ಗುಲ್ಶನ್ ದೇವಯ್ಯ, ಇದೀಗ ಸಮಂತಾ ರುತ್ ಪ್ರಭು ನಟನೆಯ ಬಹುನಿರೀಕ್ಷಿತ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಮೂಲಕ ತೆಲುಗಿಗೆ ಗುಲ್ಶನ್ ದೇವಯ್ಯ ಎಂಟ್ರಿ
ನಟ ಗುಲ್ಶನ್ ದೇವಯ್ಯ ಅವರು ನಟಿ ಸಮಂತಾ ರುತ್ ಪ್ರಭು ಮುಖ್ಯಭೂಮಿಕೆಯಲ್ಲಿರುವ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಅಧಿಕೃತವಾಗಿ ಕಾಲಿಡುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕಾಂತಾರ - ಚಾಪ್ಟರ್ 1ರಮೂಲಕ ಗುರುತಿಸಿಕೊಂಡಿರುವ ನಟ ಗುಲ್ಶನ್ ದೇವಯ್ಯ, ಇದೀಗ ಸಮಂತಾ ರುತ್ ಪ್ರಭು ನಟನೆಯ ಬಹುನಿರೀಕ್ಷಿತ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕಿ ನಂದಿನಿ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ರಾಜ್ ನಿಡಿಮೋರು ಸಹ-ನಿರ್ಮಾಪಕರಾಗಿದ್ದಾರೆ.
ಸಿನಿಮಾದ ಕುರಿತು ಮಾತನಾಡಿರುವ ಗುಲ್ಶನ್ ದೇವಯ್ಯ, ಸಮಂತಾ, ರಾಜ್ ಮತ್ತು ನಂದಿನಿ ಅವರೊಂದಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ ಎಂದು ಹಂಚಿಕೊಂಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ತಂಡ ನೀಡಿದ ಪ್ರೀತಿ ಮತ್ತು ಸೃಜನಶೀಲ ಸ್ವಾತಂತ್ರ್ಯವು ಅವರ ಈ ಹೊಸ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಿದೆಯಂತೆ. ತೆಲುಗಿನಲ್ಲಿ ತಮ್ಮ ಮೊದಲ ಚಿತ್ರವಾಗಿದ್ದರೂ, ತಂಡವು ತೋರಿದ ಬೆಂಬಲದಿಂದ ತಮಗೆ ಅತ್ಯಂತ ಗೌರವ ಮತ್ತು ಭರವಸೆ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಸಮಂತಾ ಅವರು ಸಾಧಾರಣ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆಕ್ಷನ್ ಅವತಾರದಲ್ಲೂ ಮಿಂಚಲಿದ್ದಾರೆ. ವಿಶೇಷವೆಂದರೆ ಕನ್ನಡದ ನಟ ದಿಗಂತ್ ಮಂಚಾಲೆ ಈ ಚಿತ್ರದಲ್ಲಿ ಸಮಂತಾ ಅವರಿಗೆ ಪತಿಯಾಗಿ ನಟಿಸುತ್ತಿದ್ದಾರೆ. ಗೌತಮಿ ಮತ್ತು ಮಂಜುಷಾ ಅವರಂತಹ ಹಿರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನವಿರುವ ಈ ಸಿನಿಮಾ ಎಪ್ರಿಲ್‌ನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.
'ಮಾ ಇಂಟಿ ಬಂಗಾರಂ' ಟೀಸರ್ ಇಲ್ಲಿದೆ..
ತೆಲುಗು ಚಿತ್ರರಂಗಕ್ಕೆ ದಿಗಂತ್
ದಿಗಂತ್ ಈ ಹಿಂದೆ ವಾನ ಎಂಬ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈಗ ದಶಕಗಳ ನಂತರ ಸಮಂತಾ ಅವರಂತಹ ಸ್ಟಾರ್ ನಟಿಯ ಜೊತೆ ತೆಲುಗಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಸಮಂತಾ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಮಂತಾ ಮತ್ತು ದಿಗಂತ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಸೊಸೆ ಈಗ ಸಾಹಸಿ
ಈ ಚಿತ್ರವು ಒಂದು ಫ್ಯಾಮಿಲಿ ಆಕ್ಷನ್ ಥ್ರಿಲ್ಲರ್ ಆಗಿದ್ದು, ಟೀಸರ್‌ನಲ್ಲಿ ಸಮಂತಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಸೀರೆ ಉಟ್ಟು, ಕೈಯಲ್ಲಿ ಗನ್ ಹಿಡಿದು ಎದುರಾಳಿಗಳನ್ನು ಸದೆಬಡಿಯುವ ಅವರ ರಗಡ್ ಲುಕ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಮದುವೆಯಾಗಿ ಅತ್ತೆ ಮನೆಗೆ ಬರುವ ನವವಧು ಅಲ್ಲಿನ ಸನ್ನಿವೇಶಗಳಿಗೆ ಹೇಗೆ ಸ್ಪಂದಿಸುತ್ತಾಳೆ ಮತ್ತು ಅವಳ ಹಿಂದಿರುವ ರಹಸ್ಯವೇನು ಎಂಬುದು ಕಥೆಯ ಮುಖ್ಯ ಎಳೆಯಾಗಿದೆ.

