
ನಟ ವಿನಯ್ ರಾಜ್‌ಕುಮಾರ್ ಅಭಿನಯದ 'ಗ್ರಾಮಾಯಣ' ಚಿತ್ರದ 'ಬೆಂಕಿ' ಎಂಬ ಎರಡನೇ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಬಿಡುಗಡೆ ಮಾಡಿದರು.
'ಗ್ರಾಮಾಯಣ' ಚಿತ್ರದ 'ಬೆಂಕಿ' ಹಾಡು ಬಿಡುಗಡೆ: ವಿನಯ್ ರಾಜ್‌ಕುಮಾರ್ ಚಿತ್ರಕ್ಕೆ ಶಿವಣ್ಣ ಸಾಥ್
ಇದು ಶಿವರಾಜ್‌ಕುಮಾರ್ ನಟನೆಯ ಹಳೆಯ ಸೂಪರ್ ಹಿಟ್ ಚಿತ್ರ 'ಮನಮೆಚ್ಚಿದ ಹುಡುಗಿ'ಯ 'ನಿನ್ನಾಣೆ ನಾನು ಬೆಂಕಿಯಲ್ಲೂ...' ಹಾಡಿನ ರಿಮಿಕ್ಸ್ ಆವೃತ್ತಿಯಾಗಿದೆ.
ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ನಟನೆಯ ಬಹುನಿರೀಕ್ಷಿತ 'ಗ್ರಾಮಾಯಣ' ಚಿತ್ರದ 'ಬೆಂಕಿ' ಎಂಬ ಲಿರಿಕಲ್ ಹಾಡು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಈ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಗೀತಾ ಶಿವರಾಜ್‌ಕುಮಾರ್ ಸಹ ಉಪಸ್ಥಿತರಿದ್ದರು.
ದೇವನೂರು ಚಂದ್ರು ನಿರ್ದೇಶನದ ಈ ಚಿತ್ರವು ಅಪ್ಪಟ ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿದ್ದು, ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್ಟೈನರ್ಸ್ ಬ್ಯಾನರ್ ಅಡಿಯಲ್ಲಿ ಜಿ. ಮನೋಹರನ್ ಮತ್ತು ಕೆ.ಪಿ. ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ಈ ಹಾಡಿನ ವಿಶೇಷವೆಂದರೆ, ಇದು ಶಿವರಾಜ್‌ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ 'ಮನ ಮೆಚ್ಚಿದ ಹುಡುಗಿ'ಯ 'ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು' ಹಾಡಿನ ರಿಮಿಕ್ಸ್ ಆವೃತ್ತಿಯಾಗಿದೆ. ಮೂಲ ಹಾಡಿಗೆ ಉಪೇಂದ್ರ ಕುಮಾರ್ ಸಂಗೀತ ನೀಡಿದ್ದರೆ, ಈಗಿನ ಆವೃತ್ತಿಗೆ ಪೂರ್ಣಚಂದ್ರ ತೇಜಸ್ವಿ ಹೊಸ ರೂಪ ನೀಡಿದ್ದಾರೆ. ಕಪಿಲ್ ಕಪಿಲನ್ ಮತ್ತು ಐರಾ ಉಡುಪಿ ಈ ಗೀತೆಯನ್ನು ಹಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಲಹರಿ ವೇಲು, ಇದು ಲಹರಿ ಸಂಸ್ಥೆಯ 9ನೇ ಸಿನಿಮಾ ಎಂದು ಹೆಮ್ಮೆಯಿಂದ ತಿಳಿಸಿದರು. ನಾಯಕ ವಿನಯ್ ರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ 'ಸಿಕ್ಸ್ತ್ ಸೆನ್ಸ್ ಸೀನ' ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿ ಮೇಘಾ ಶೆಟ್ಟಿ ಅವರು 'ಕುಸುಮ' ಎಂಬ ಹಠಮಾರಿ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ತಾಂತ್ರಿಕವಾಗಿ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿ ತಿಂಗಳಿನಲ್ಲಿ 'ಗ್ರಾಮಾಯಣ' ರಾಜ್ಯಾದ್ಯಂತ ತೆರೆಕಾಣಲಿದೆ.

