
ಡಾ. ರಾಜಕುಮಾರ್ ಹುಟ್ಟುಹಬ್ಬಕ್ಕೆ ಮೊಮ್ಮಗಳ ಗಿಫ್ಟ್ ...
ಡಾ. ರಾಜಕುಮಾರ್ ಮೊಮ್ಮಗಳು ಮತ್ತು ಶಿವರಾಜಕುಮಾರ್ ಮಗಳು ನಿವೇದಿತಾ ನಿರ್ಮಾಪಕಿಯಾಗಿ ಕೆಲವು ವರ್ಷಗಳೇ ಆಗಿವೆ. ನಿವೇದಿತಾ ನಿರ್ಮಾಣದ ‘ಮಾನಸ ಸರೋವರ’ ಧಾರಾವಾಹಿಯು ಈ ಹಿಂದೆ ಉದಯ ಟಿ.ವಿಯಲ್ಲಿ ಪ್ರಸಾರವಾಗಿತ್ತು. ಆ ನಂತರ ಕೆಲವು ವೆಬ್ ಸರಣಿಗಳನ್ನು ನಿವೇದಿತಾ ನಿರ್ಮಿಸಿದರು. ಎರಡು ವರ್ಷಗಳ ಹಿಂದೆ ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಸೆಟ್ಟೇರಿತ್ತು. ಇದೀಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ತಾತನ ಹುಟ್ಟುಹಬ್ಬವಾದ ಏಪ್ರಿಲ್ 24ರಂದು ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ನಿವೇದಿತಾ ತಯಾರಿ ನಡೆಸಿದ್ದಾರೆ.
‘ಫೈರ್ ಫ್ಲೈ’ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಮುಗಿದಿತ್ತು. ದೀಪಾವಳಿಗೆ ಬಿಡುಗಡೆಯಾಗುತ್ತದೆ ಎಂದು ಸುದ್ದಿಯೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ತಡವಾಗಿ, ಇದೀಗ ಏಪ್ರಿಲ್ 24ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ನಿವೇದಿತಾ ತಮ್ಮ ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿರುವ ‘ಫೈರ್ ಫ್ಲೈ’ ಚಿತ್ರಕ್ಕೆ ವಂಶಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಮಡಿದ್ದಾರೆ. ಅವರಿಗೆ ನಾಯಕಿಯಾಗಿ ರಚನಾ ಇಂದರ್ ಇದ್ದಾರೆ.
ತಮ್ಮ ಮಗಳು ನಿರ್ಮಿಸುತ್ತಿರುವ ಮೊದಲ ಚಿತ್ರದ ಬಗ್ಗೆ ಮಾತನಾಡಿರುವ ಶಿವರಾಜಕುಮಾರ್, ‘ಅಪ್ಪಾಜಿಯವರ ಹುಟ್ಟುಹಬ್ಬದಂದು ನನ್ನ ಮಗಳ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ವಿಶೇಷವಾದ ಕ್ಷಣ. ನಮ್ಮ ಕುಟುಂಬದ ಮೇಲೆ ಜನರು ತೋರಿಸಿರುವ ಎಲ್ಲಾ ಪ್ರೀತಿ ಅಪ್ಪಾಜಿಯವರಿಂದ ಬಂದಿದೆ. ‘ಫೈರ್ ಫ್ಲೈ’ ಚಿತ್ರವು ಸಾವು, ನೋವು, ಮತ್ತು ಜೀವನ ಸ್ಫೂರ್ತಿಯ ಮರು ಚಿಗುರುವಿಕೆಯ ಬಗ್ಗೆ ಮಾತನಾಡುವ ಚಿತ್ರ. ಈ ರೀತಿ ಗಾಢವಾದ ವಿಷಯವನ್ನು ಸರಳವಾಗಿ, ಹಾಸ್ಯದ ಮೂಲಕ ಹೇಳುವುದು ನನಗೆ ತುಂಬಾ ಹತ್ತಿರವಾಯ್ತು. ಎಲ್ಲರೂ ಈ ಚಿತ್ರವನ್ನು ಮೆಚ್ಚುತ್ತಾರೆ ಎಂದು ನನಗೆ ನಂಬಿಕೆ ಇದೆʼ ಎಂದು ಹೇಳಿದ್ದಾರೆ.
‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಜೊತೆಗೆ ಆಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದರ್, ಮೂಗು ಸುರೇಶ್ ಮುಂತದವರು ಪ್ರಮುಖ ಪಾತ್ರಗಳಲ್ಲಿ ಕಾಣಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ ಇದೆ.