Gen-Z ಸಿನಿ ಅಭಿಯಾನ: 35 ವರ್ಷಗಳ ಬಳಿಕ ‘ಶಾಂತಿ ಕ್ರಾಂತಿ’ ರೀ-ರಿಲೀಸ್!
35 ವರ್ಷಗಳ ಹಿಂದೆ ಸೋತಿದ್ದ ರವಿಚಂದ್ರನ್ ಅಭಿನಯದ 'ಶಾಂತಿ ಕ್ರಾಂತಿ' ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಮರುಬಿಡುಗಡೆಯ ಚರ್ಚೆ ಕಾವೇರಿದೆ.
ಇಂದು 'ಪ್ಯಾನ್ ಇಂಡಿಯಾ' ಎನ್ನುವ ಪರಿಕಲ್ಪನೆ ಭರತೀಯ ಚಿತ್ರರಂಗದಲ್ಲಿ ಸಾಮಾನ್ಯವಾಗಿದೆ. ಆದರೆ ಸುಮಾರು ಮೂರುವರೆ ದಶಕಗಳ ಹಿಂದೆಯೇ ಭಾರತೀಯ ಸಿನಿಮಾರಂಗವೇ ಬೆರಗುಗೊಳ್ಳುವಂತಹ ಸಾಹಸಕ್ಕೆ ಕೈಹಾಕಿದ್ದವರು ಕ್ರೇಜಿಸ್ಟಾರ್ ವಿ. ರವಿಚಂದ್ರನ್. 1991ರಲ್ಲಿ ತೆರೆಕಂಡ 'ಶಾಂತಿ ಕ್ರಾಂತಿ' ಸಿನಿಮಾ ಕನ್ನಡ ಚಿತ್ರರಂಗದ ಮೊದಲ ಬಹುಭಾಷಾ ಸಾಹಸವಾಗಿತ್ತು.
ಅಂದು ಬಿಗ್ ಬಜೆಟ್, ಇಂದು ಕಲ್ಟ್ ಕ್ಲಾಸಿಕ್
ಒಂದೇ ಕಥೆಯನ್ನು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿತ್ತು. ಕನ್ನಡದಲ್ಲಿ ರವಿಚಂದ್ರನ್, ತೆಲುಗಿನಲ್ಲಿ ನಾಗಾರ್ಜುನ ಹಾಗೂ ತಮಿಳು-ಹಿಂದಿಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಜೂಹಿ ಚಾವ್ಲಾ, ಖುಷ್ಬೂ ಮತ್ತು ಅನಂತ್ ನಾಗ್ ಅವರನ್ನೊಳಗೊಂಡ ಬೃಹತ್ ತಾರಾಗಣವಿತ್ತು. ಆಗಿನ ಕಾಲದಲ್ಲೇ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು. ಆದರೆ, ಅತಿಯಾದ ನಿರೀಕ್ಷೆ ಮತ್ತು ನಿರ್ಮಾಣದ ವೆಚ್ಚದಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಸೋಲು ಕಂಡಿತು. ರವಿಚಂದ್ರನ್ ಅವರ ವೃತ್ತಿಜೀವನದಲ್ಲಿ ಇದು ದೊಡ್ಡ ಆರ್ಥಿಕ ಹಿನ್ನಡೆ ಉಂಟುಮಾಡಿತು.
ರೀ-ರಿಲೀಸ್ ಮೋಡಿ ಮಾಡುತ್ತಾ?
ಕಾಲ ಬದಲಾಗಿದೆ. ಅಂದು 'ಫ್ಲಾಪ್' ಎಂದು ಬದಿಗೊತ್ತಲ್ಪಟ್ಟ ಈ ಸಿನಿಮಾ ಇಂದು ಸೋಶಿಯಲ್ ಮೀಡಿಯಾದಲ್ಲಿ 'ಕಾಲಕ್ಕಿಂತ ಮುಂಚಿತವಾಗಿ ಬಂದ ಸಿನಿಮಾ' ಎಂದು ಪ್ರಶಂಸೆ ಪಡೆಯುತ್ತಿದೆ. ಹಂಸಲೇಖ ಅವರ ಸಂಗೀತ ಸಂಯೋಜನೆಯ ಹಾಡುಗಳು ಪ್ರೇಕ್ಷಕರ ನೆಚ್ಚಿನ ಆಯ್ಕೆಯಾಗಿವೆ. ಇದೀಗ Gen-Z ಪ್ರೇಕ್ಷಕರು ಮತ್ತು ಅಭಿಮಾನಿಗಳು ಈ ಬಿಗ್ ಡ್ರೀಮ್ ಸಿನಿಮಾವನ್ನು ಮತ್ತೆ ದೊಡ್ಡ ಪರದೆಯಲ್ಲಿ ಮರುಬಿಡುಗಡೆ ಮಾಡಬೇಕೆಂದು ಅಭಿಯಾನ ನಡೆಸುತ್ತಿದ್ದಾರೆ. ಚಿತ್ರದ ಮರುಬಿಡುಗಡೆಗೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನಲ್ಲಿ ಮಾತುಕತೆಗಳು ನಡೆಯುತ್ತಿದ್ದು, ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾದರೆ ಇಂದಿನ ಪ್ರೇಕ್ಷಕರು ಖಂಡಿತ ಸ್ವೀಕರಿಸಲಿದ್ದಾರೆ ಎಂಬ ಭರವಸೆ ವ್ಯಕ್ತವಾಗಿದೆ.

