ನಟನೆಯಿಂದ ನಿರ್ದೇಶನದವರೆಗೆ... ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್‌ದಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?
x

'ಟಾಕ್ಸಿಕ್' ನಿರ್ದೇಶಕಿ ಗೀತು ಮೋಹನ್ ದಾಸ್

ನಟನೆಯಿಂದ ನಿರ್ದೇಶನದವರೆಗೆ... 'ಟಾಕ್ಸಿಕ್' ನಿರ್ದೇಶಕಿ ಗೀತು ಮೋಹನ್‌ದಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?

5ನೇ ವಯಸ್ಸಿನಲ್ಲಿ ಬಾಲನಟಿಯಾಗಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿ ಕೇರಳ ರಾಜ್ಯ ಪ್ರಶಸ್ತಿ ಗೆದ್ದ ಗೀತು ಮೋಹನ್‌ದಾಸ್‌, ಇಂದು ಅಂತರರಾಷ್ಟ್ರೀಯ ಮಟ್ಟದ ಪ್ರತಿಭೆಯಾಗಿ ಬೆಳೆದಿದ್ದಾರೆ.


Click the Play button to hear this message in audio format

ಕನ್ನಡ ಚಿತ್ರರಂಗದ ಮೋಸ್ಟ್ ಆವೈಟೆಡ್ ಸಿನಿಮಾ 'ಟಾಕ್ಸಿಕ್' ಟೀಸರ್ ಬಿಡುಗಡೆಯಾದಾಗಿನಿಂದಲೂ ಮಲಯಾಳಂ ಮೂಲದ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಯಶ್ ಅಭಿನಯದ ಈ ಚಿತ್ರದ ಟೀಸರ್ ಅನ್ನು ಜಬರ್ದಸ್ತ್ ಆಗಿ ರೂಪಿಸಿರುವ ಗೀತು ಅವರ ಮೇಕಿಂಗ್ ಶೈಲಿಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯಶ್ ಅವರ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ ಈ ಟೀಸರ್‌ನಲ್ಲಿ 'ರಾಯ' ಎಂಬ ಪಾತ್ರದಲ್ಲಿ ಯಶ್ ಅಬ್ಬರಿಸಿದ್ದಾರೆ. ಟೀಸರ್‌ನಲ್ಲಿನ ತೀವ್ರತೆ ಮತ್ತು ಆಕ್ಷನ್ ದೃಶ್ಯಗಳು ಜಾಗತಿಕ ಮಟ್ಟದ ಚಿತ್ರಗಳ ಗುಣಮಟ್ಟವನ್ನು ನೆನಪಿಸುತ್ತಿವೆ. ಇದರ ಬೆನ್ನಲ್ಲೇ ಈ ಕಲಾತ್ಮಕ ಹಾಗೂ ಮಾಸ್ ದೃಶ್ಯಗಳನ್ನು ಸಮತೋಲನದಲ್ಲಿ ಕಟ್ಟಿಕೊಟ್ಟ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಬಗ್ಗೆ ತಿಳಿಯಲು ಪ್ರೇಕ್ಷಕರು ಹೆಚ್ಚು ಕುತೂಹಲ ತೋರುತ್ತಿದ್ದಾರೆ.

ಗೀತು ಮೋಹನ್‌ ಮೋಹನ್ ಲಾಲ್ ಅಭಿನಯದ 'ಒನ್ನು ಮುತಲ್ ಪೂಜ್ಯಂ ವಾರೆ' ಚಿತ್ರದ ಮೂಲಕ ಬಾಲನಟಿಯಾಗಿ ತೆರೆಗೆ ಬಂದರು.

ಬಾಲನಟಿಯಾಗಿ ಎಂಟ್ರಿ

ಕೇರಳದ ಮೋಹನ್ ದಾಸ್ ಮತ್ತು ಲತಾ ದಂಪತಿಯ ಪುತ್ರಿಯಾಗಿ ಜನಿಸಿದ ಇವರು ಗಾಯತ್ರಿ ದಾಸ್ ಎಂಬ ಹೆಸರನ್ನು ಹೊಂದಿದ್ದರು. ತಮ್ಮ 5ನೇ ವಯಸ್ಸಿನಲ್ಲಿಯೇ ಅಂದರೆ 1986ರಲ್ಲಿ ಮಲಯಾಳಂನ ದಿಗ್ಗಜ ನಟ ಮೋಹನ್ ಲಾಲ್ ಅಭಿನಯದ 'ಒನ್ನು ಮುತಲ್ ಪೂಜ್ಯಂ ವಾರೆ' ಚಿತ್ರದ ಮೂಲಕ ಬಾಲನಟಿಯಾಗಿ ತೆರೆಗೆ ಬಂದರು. ಮೊದಲ ಚಿತ್ರದಲ್ಲೇ ಅಮೋಘ ನಟನೆ ತೋರಿದ ಇವರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅಂದಿನಿಂದ 'ಗೀತು' ಎಂಬ ಎಂಬ ಹೆಸರಿನಿಂದ ಚಿರಪರಿಚಿತರಾದರು.

ನಟನೆಯಿಂದ ನಿರ್ದೇಶನದತ್ತ ಪಯಣ

ಬಾಲನಟಿಯಾಗಿ ಮಾತ್ರವಲ್ಲದೆ ನಾಯಕಿಯಾಗಿಯೂ ಮಲಯಾಳಂ ಚಿತ್ರರಂಗದಲ್ಲಿ ಗೀತು ಮೋಹನ್ ದಾಸ್ ಸಾಕಷ್ಟು ಯಶಸ್ಸು ಕಂಡಿದ್ದಾರೆ. 'ಲೈಫ್ ಈಸ್ ಬ್ಯೂಟಿಫುಲ್', 'ತೆಂಕಸಿ ಪಟ್ಟಿನಂ', 'ಅಕಲೆ' ಮುಂತಾದ ಚಿತ್ರಗಳಲ್ಲಿ ಇವರ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 'ಅಕಲೆ' ಚಿತ್ರದ ಅಭಿನಯಕ್ಕಾಗಿ ಇವರು ಅತ್ಯುತ್ತಮ ನಟಿ ಎಂಬ ಕೇರಳ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಗೀತು ಮೋಹನ್‌ದಾಸ್‌'ಅಕಲೆ' ಚಿತ್ರದ ಅಭಿನಯಕ್ಕಾಗಿ ಇವರು ಅತ್ಯುತ್ತಮ ನಟಿ ಎಂಬ ಕೇರಳ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ

ನಿರ್ದೇಶಕಿಯಾಗಿಯೂ ಗೀತು ಅವರ ಸಾಧನೆ ಅಪಾರ. 2009ರಲ್ಲಿ 'ಕೇಲ್ಕುನ್ನುಡೋ' ಎಂಬ ಕಿರುಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ಇವರು, ಬಳಿಕ 'ಲೈಯರ್ಸ್ ಡೈಸ್' ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರವು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆಲ್ಲುವುದರ ಜೊತೆಗೆ, 87ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದ್ದು ಇವರ ವೃತ್ತಿಜೀವನದ ದೊಡ್ಡ ಮೈಲಿಗಲ್ಲು.

ನಿರ್ದೇಶಕಿ ಗೀತು ಮೋಹನ್ ದಾಸ್‌ಗೆ ಆರ್‌ಜಿವಿ ಪ್ರಶಂಸೆ

ಟಾಕ್ಸಿಕ್‌ ಟೀಸರ್ ನೋಡಿ ಬೆರಗಾಗಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಮ್ಮ 'ಎಕ್ಸ್' ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, "ಯಶ್ ನಟನೆಯ ಟಾಕ್ಸಿಕ್ ಟೀಸರ್ ನೋಡಿದ ಮೇಲೆ ಗೀತು ಮೋಹನ್ ದಾಸ್ ಅವರು ಮಹಿಳಾ ಸಬಲೀಕರಣದ ಪರಮೋಚ್ಚ ಸಂಕೇತ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಈ ಮಹಿಳೆಗೆ ಹೋಲಿಸಿದರೆ ಯಾವೊಬ್ಬ ಪುರುಷ ನಿರ್ದೇಶಕನೂ ಸಾಟಿಯಿಲ್ಲ. ಆಕೆಯೇ ಈ ಚಿತ್ರವನ್ನು ಇಷ್ಟು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ ಎಂಬುದನ್ನು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.

ತಾರೆಯರ ಮೆಚ್ಚುಗೆಯ ಸುರಿಮಳೆ

ಕೇವಲ ಆರ್‌ಜಿವಿ ಮಾತ್ರವಲ್ಲದೆ, ಬಾಲಿವುಡ್ ನಟಿ ಆಲಿಯಾ ಭಟ್, ನಿರ್ಮಾಪಕ ಕರಣ್ ಜೋಹರ್ ಮತ್ತು ರಿಷಬ್ ಶೆಟ್ಟಿ ಕೂಡ ಟೀಸರ್ ನೋಡಿ ಫಿದಾ ಆಗಿದ್ದಾರೆ. ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಟೀಸರ್ ಹಂಚಿಕೊಂಡು 'ಡೈನಮೈಟ್' ಎಂದು ಬಣ್ಣಿಸಿದ್ದಾರೆ. ಇನ್ನು ಕರಣ್ ಜೋಹರ್, "ವಾಹ್! ಹುಟ್ಟುಹಬ್ಬಕ್ಕೆ ಎಂತಹ ಗಿಫ್ಟ್‌! ನಿಜಕ್ಕೂ ರಾಕಿಂಗ್ ಆಗಿದೆ" ಎಂದು ಪ್ರಶಂಸಿಸಿದ್ದಾರೆ.

ಟೀಸರ್‌ ಬಿಡುಗಡೆ ಬಳಿಕ ಟ್ರೋಲ್‌ ಆದ ಗೀತು

ಬಿಡುಗಡೆಯಾಗಿರುವ ಪ್ರೋಮೋ ವಿಡಿಯೋದಲ್ಲಿ ಯಶ್ ಅಭಿನಯದ ರಾಯ ಪಾತ್ರವು ಶತ್ರುಗಳನ್ನು ಎದುರಿಸುವ ಮೊದಲು ಕಾರಿನೊಳಗೆ ಮಹಿಳೆಯೊಬ್ಬಳ ಜೊತೆ ಶಾರೀರಿಕ ಸಂಬಂಧ ಬೆಳೆಸುವ ದೃಶ್ಯವನ್ನು ತೋರಿಸಲಾಗಿದೆ. ಈ ದೃಶ್ಯದಲ್ಲಿ ಕಾರು ಅಲುಗಾಡುವುದನ್ನು ತೋರಿಸುವ ಮೂಲಕ ನಾಯಕನ ಇಮೇಜ್ ಅನ್ನು ವೈಭವೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಗೀತು ಮೋಹನ್ ದಾಸ್ ಅವರು ಮಲಯಾಳಂ ಚಿತ್ರರಂಗದ 'ವಿಮೆನ್ ಇನ್ ಸಿನಿಮಾ ಕಲೆಕ್ಟಿವ್'ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಸಿನಿಮಾಗಳಲ್ಲಿ ಮಹಿಳೆಯರನ್ನು ಭೋಗದ ವಸ್ತುವಾಗಿ ಬಿಂಬಿಸುವುದನ್ನು ಮತ್ತು ಸ್ತ್ರೀದ್ವೇಷವನ್ನು ಸದಾ ವಿರೋಧಿಸುತ್ತಾ ಬಂದವರು. ಆದರೆ ಈಗ ದೊಡ್ಡ ಬಜೆಟ್‌ನ ವಾಣಿಜ್ಯ ಸಿನಿಮಾಗೆ ಬಂದಾಗ ಅವರು ತಮ್ಮ ಸಿದ್ಧಾಂತಗಳನ್ನು ಬದಿಗಿಟ್ಟು ಮಹಿಳೆಯನ್ನು ಕೇವಲ ದೇಹವಾಗಿ ಪ್ರದರ್ಶಿಸಿದ್ದಾರೆ ಎಂದು ನೆಟ್ಟಿಗರು ಮತ್ತು ವಿಮರ್ಶಕರ ವಾದ ಮಾಡುತ್ತಿದ್ದಾರೆ.

ನಿತಿನ್ ರೆಂಜಿ ಪಣಿಕರ್ ವಾಗ್ದಾಳಿ

ಮಲಯಾಳಂನ 'ಕಸಬಾ' ಚಿತ್ರದ ನಿರ್ದೇಶಕ ನಿತಿನ್ ರೆಂಜಿ ಪಣಿಕರ್ ಅವರು ಈ ವಿಚಾರವಾಗಿ ಗೀತು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ 'ಕಸಬಾ' ಚಿತ್ರದಲ್ಲಿ ನಾಯಕ ಮಮ್ಮುಟ್ಟಿ ಅವರು ಮಹಿಳಾ ಪೊಲೀಸ್ ಅಧಿಕಾರಿಯ ಬೆಲ್ಟ್ ಎಳೆದು ಅವಮಾನಿಸುವ ದೃಶ್ಯವನ್ನು ಗೀತು ಹಾಗೂ ನಟಿ ಪಾರ್ವತಿ ತಿರುವೋತು ತೀವ್ರವಾಗಿ ಟೀಕಿಸಿದ್ದರು. ಆ ಸಮಯದಲ್ಲಿ 'ವಿಷಕಾರಿ ಪುರುಷತ್ವ' ಬಗ್ಗೆ ಮಾತನಾಡಿದ್ದ ಗೀತು, ಈಗ ತಮ್ಮ ಸಿನಿಮಾದಲ್ಲಿ ಅದೇ ರೀತಿಯ ಅಂಶಗಳನ್ನು ಬಳಸುತ್ತಿರುವುದು ದ್ವಂದ್ವ ನಿಲುವು ಎಂದು ನಿತಿನ್ ಟೀಕಿಸಿದ್ದಾರೆ. ರಾಜ್ಯದ ಗಡಿ ದಾಟಿದಾಗ ಸ್ತ್ರೀದ್ವೇಷದ ವ್ಯಾಖ್ಯಾನ ಬದಲಾಗುತ್ತದೆಯೇ? ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

ಇದೀಗ ಯಶ್ ಅವರ ಜೊತೆಗೂಡಿ 'ಟಾಕ್ಸಿಕ್' ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ದೇಶಿಸುತ್ತಿರುವ ಗೀತು ಮೋಹನ್ ದಾಸ್, ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಈ ಸಿನಿಮಾ ಮಾರ್ಚ್‌ 19ರಂದು ತೆರೆಕಾಣಲಿದೆ. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Read More
Next Story