
ಕನ್ನಡ ಸಿನೆಮಾ ಮೂಲಕ ಬಣ್ಣ ಹಚ್ಚಿದ ಬಿಜೆಪಿ ನಾಯಕ ಕೆ ಅಣ್ಣಾಮಲೈ
ವಿಶ್ವಾಸ್ ಅವರ ತರಬೇತುದಾರ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದು, ಕೆಲವು ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿರುವ ಕನ್ನಡ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
ಅಂತರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಟ್ ಈಜು ಪಟು ಕೆ ಎಸ್ ವಿಶ್ವಾಸ್ ಅವರ ಜೀವನದ ಕುರಿತು ನಿರ್ಮಿಸಲಾಗಿರುವ ‘ಅರಬ್ಬಿʼ ಚಿತ್ರದಲ್ಲಿ ಅಣ್ಣಾಮಲೈ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
“ಎರಡೂ ಕೈಗಳಿಲ್ಲದ ವಿಶ್ವಾಸ್ ಅವರು ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದು, ಸಿನೆಮಾದಲ್ಲಿ ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದಾರೆ. ಅವರು ಎದುರಿಸಿದ ಸಮಸ್ಯೆ, ಸವಾಲುಗಳನ್ನು ಮೀರಿ ಹೇಗೆ ಮೇಲೆ ಬಂದರು, ಸಾಧನೆ ಮಾಡಿದರು? ಅವರಿಗೆ ಸ್ಪೂರ್ತಿ ಏನು? ಸಹಾಯ ಮಾಡಿದವರು ಯಾರು? ಎಂಬಿತ್ಯಾದಿ ವಿಷಯಗಳನ್ನು ಸಿನೆಮಾದಲ್ಲಿ ತೋರಿಸಲಾಗಿದೆʼ ಎಂದು ಚಿತ್ರತಂಡ ಹೇಳಿಕೊಂಡಿದೆ.
ವಿಶ್ವಾಸ್ ಅವರ ತರಬೇತುದಾರ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದು, ಕೆಲವು ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಚೈತ್ರಾ ರಾವ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ರಾಜ್‌ಕುಮಾರ್ ಆರ್ ನಿರ್ದೇಶನದ ಈ ಚಿತ್ರಕ್ಕೆ, ಚೇತನ್ ಸಿಎಸ್ ಬಂಡವಾಳ ಹೂಡಿದ್ದಾರೆ.