ಸಿನಿಮಾ ಆಗಲಿದೆಯಂತೆ ಅನಂತ್‍ ಕುಮಾರ್ ಜೀವನ ಚರಿತ್ರೆ
x

ಸಿನಿಮಾ ಆಗಲಿದೆಯಂತೆ ಅನಂತ್‍ ಕುಮಾರ್ ಜೀವನ ಚರಿತ್ರೆ

ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್‍.ಡಿ. ಕುಮಾರಸ್ವಾಮಿ ಅವರ ಕುರಿತ ‘ಭೂಮಿಪುತ್ರ’ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರಿತು ‘ಲೀಡರ್ ರಾಮಯ್ಯ’ ಎಂಬ ಚಿತ್ರ ನಿರ್ಮಾಣದ ಸುದ್ದಿಇತ್ತು.


ಭಾರತದ ಜನಪ್ರಿಯ ರಾಜಕಾರಣಿಗಳ ಕುರಿತು ಬೇರೆಬೇರೆ ಭಾಷೆಗಳಲ್ಲಿ ಹಲವು ಸಿನಿಮಾಗಳು ಬಂದಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ, ಎನ್.ಟಿ. ರಾಮರಾವ್, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ, ಕಾಮರಾಜ್ ಮುಂತಾದವರ ಜೀವನವನ್ನಧರಿಸಿದ ಸಿನಿಮಾಗಳು ಮತ್ತು ವೆಬ್ಸರಣಿಗಳು ಈಗಾಗಲೇ ಬಿಡುಗಡೆಯಾಗಿವೆ. ಇನ್ನು, ಜನಪ್ರಿಯ ರಾಜಕಾರಣಿಗಳನ್ನು ಹೋಲುವ ಪಾತ್ರಗಳು ಭಾರತೀಯ ಚಿತ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಂದಿವೆ.

ಆದರೆ, ಕರ್ನಾಟಕದ ವಿಷಯಕ್ಕೆ ಬಂದರೆ ಮಾತ್ರ ಯಾರೊಬ್ಬರ ಜೀವನ ಸಹ ತೆರೆಯ ಮೇಲೆ ಬಂದ ಉದಾಹರಣೆಗಲಿಲ್ಲ. ಹಾಗಂತ ಪ್ರಯತ್ನಗಳು ನಡೆದಿಲ್ಲ ಎಂದರ್ಥವಲ್ಲ. ಕರ್ನಾಟಕದ ಜನಪ್ರಿಯ ರಾಜಕಾರಣಿಗಳ ಕುರಿತು ಚಿತ್ರ ಮಾಡುವ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ.

ಕೆಲವು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್‍.ಡಿ. ಕುಮಾರಸ್ವಾಮಿ ಅವರ ಕುರಿತು ಎಸ್‍. ನಾರಾಯಣ್‍ ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಚಿತ್ರಕ್ಕೆ ‘ಭೂಮಿಪುತ್ರ’ ಎಂಬ ಹೆಸರಿಡುವುದರ ಜೊತೆಗೆ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಚಿತ್ರ ಮುಂದುವರೆಯಲಿಲ್ಲ. ಆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರಿತು ‘ಲೀಡರ್ ರಾಮಯ್ಯ’ ಎಂಬ ಚಿತ್ರ ನಿರ್ಮಾಣವಾಗುತ್ತಿರುವ ಸುದ್ದಿ ಬಂತು. ತಮಿಳಿನ ಖ್ಯಾತ ನಟ ವಿಜಯ್‍ ಸೇತುಪತಿ, ಸಿದ್ದರಾಮಯ್ಯನವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದ್ದಿಯೂ ಇತ್ತು. ಈ ಚಿತ್ರವೂ ಬರೀ ಸುದ್ದಿಯಾಗಿಯೇ ಉಳಿದಿದೆ ಹೊರತು, ಚಿತ್ರ ಮಾತ್ರ ಪ್ರಾರಂಭವಾಗಿಲ್ಲ.

ಹೀಗಿರುವಾಗಲೇ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಅನಂತ್ ಕುಮಾರ್ ಕುರಿತು ಒಂದು ಚಿತ್ರ ಮಾಡುವ ಚರ್ಚೆ ಶುರುವಾಗಿದೆ. ಇತ್ತೀಚೆಗೆ ‘ದಾಸವರೇಣ್ಯ ಶ್ರೀ ವಿಜಯದಾಸರು ಭಾಗ 32’ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಅನಂತ್‍ ಕುಮಾರ್‌ ಕುರಿತು ಚಿತ್ರ ಮಾಡುವ ಪ್ರಸ್ತಾವನೆ ಕೇಳಿ ಬಂದಿದೆ. ಅದಕ್ಕೆ ಕಾರಣವೂ ಇದೆ. ನಿರ್ಮಾಪಕ ಮತ್ತು ಚಿತ್ರದಲ್ಲಿ ವಿಜಯದಾಸರ ಪಾತ್ರವನ್ನು ನಿರ್ವಹಿಸುತ್ತಿರುವ ತ್ರಿವಿಕ್ರಮ ಜೋಷಿ, ಅನಂತ್‍ ಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡುವುದರ ಜೊತೆಗೆ, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವವರು. ಈಗ ಅವರು ನಿರ್ಮಾಪಕರಾಗಿ ಒಂದಿಷ್ಟು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಹೀಗಿರುವಾಗ, ಅನಂತ್ ಕುಮಾರ್ ಕುರಿತು ಚಿತ್ರ ನಿರ್ಮಿಸುವ ಯೋಚನೆಯೂ ತಮಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ʼಶ್ರೀ ವಿಜಯದಾಸರುʼ ಚಿತ್ರದ ಮುಹೂರ್ತದ ನಂತರ ಮಾತನಾಡಿದ ನಟ-ನಿರ್ಮಾಪಕ ತ್ರಿವಿಕ್ರಮ ಜೋಷಿ, ‘ನಾನು 10ನೇ ಕ್ಲಾಸು ಓಡುವವಾಗಿನಿಂದಲೂ ಅನಂತ್ ಕುಮಾರ್ ಅವರ ಪರಿಚಯವಿತ್ತು. ನನ್ನನ್ನು ಅವರ ಶಿಷ್ಯನನ್ನಾಗಿಯೇ ಹಲವರು ಗುರುತಿಸುತ್ತಾರೆ. ಅವರ ರಾಜಕೀಯ ಕಾರ್ಯದರ್ಶಿಯಾಗಿಯೂ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಕಳೆದ ಒಂದು ವರ್ಷದಿಂದ ಅವರ ಕುರಿತು ಚಿತ್ರ ಮಾಡುವ ಚರ್ಚೆ ನಡೆಯುತ್ತಲೇ ಇದೆ. ಆದಷ್ಟು ಬೇಗ ಅನಂತ್‍ ಕುಮಾರ್ ಅವರ ಜೀವನವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಸಹ ಹಾಜರಿದ್ದರು.

ಅನಂತ್‍ ಕುಮಾರ್ ಕುರಿತು ಬಯೋಪಿಕ್‍ ನಿರ್ಮಾಣ ಮಾಡುವ ಘೋಷಣೆಯಂತೂ ಆಗಿದೆ. ಈ ಚಿತ್ರವಾದರೂ ಮುಂದುವರೆಯುತ್ತದೋ ಅಥವಾ ಮಾತುಕತೆಯ ಹಂತದಲ್ಲೇ ನಿಲ್ಲುತ್ತದೋ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

Read More
Next Story