ಮೊದಲ ಬಾರಿಗೆ ತುಳು ಚಿತ್ರ ಕನ್ನಡಕ್ಕೆ ಡಬ್‍ ಆಗಿ ಬಿಡುಗಡೆ; ಮೇ 9ರಂದು ‘ದಸ್ಕತ್‍’
x

ಮೊದಲ ಬಾರಿಗೆ ತುಳು ಚಿತ್ರ ಕನ್ನಡಕ್ಕೆ ಡಬ್‍ ಆಗಿ ಬಿಡುಗಡೆ; ಮೇ 9ರಂದು ‘ದಸ್ಕತ್‍’

‘ದಸ್ಕತ್‍’ ತುಳು ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ಯಶಸ್ವಿ 70 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ವಿಶೇಷವಾಗಿ, ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮೂರನೇ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿಯನ್ನು ಗೆದ್ದಿತ್ತು.


ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರ ‘ಕಾಂತಾರ’, ತುಳು ಭಾಷೆಗೆ ಡಬ್‍ ಆಗಿ ಬಿಡುಗಡೆ ಆಗಿತ್ತು. ಕರಾವಳಿ ಭಾಗದ ಚಿತ್ರವಾದ್ದರಿಂದ, ತುಳು ಭಾಷೆಗೂ ಡಬ್‍ ಆಗಬೇಕು ಎಂದು ಬೇಡಿಕೆ ಹೆಚ್ಚಾದಾಗ, ‘ಕಾಂತಾರ’ ಚಿತ್ರವನ್ನು ತುಳು ಭಾಷೆಗೆ ಡಬ್‍ ಮಾಡಿ ಬಿಡುಗಡೆ ಮಾಡಲಾಗಿತ್ತು. ಅದಾದ ನಂತರ ಯಾವೊಂದು ಕನ್ನಡ ಚಿತ್ರವೂ ತುಳು ಭಾಷೆಗೆ ಡಬ್‍ ಆಗಿರಲಿಲ್ಲ. ಇದೀಗ ಮೊಟ್ಟ ಮೊದಲ ಬಾರಿಗೆ ತುಳು ಚಿತ್ರವೊಂದು ಕನ್ನಡಕ್ಕೆ ಡಬ್‍ ಆಗಿ ಬಿಡುಗಡೆಯಾಗುತ್ತಿದೆ. ಅದೇ ‘ದಸ್ಕತ್‍’.

‘ದಸ್ಕತ್‍’ ಚಿತ್ರವು ಕಳೆದ ವರ್ಷ ಬಿಡುಗಡೆಯಾಗಿ ಯಶಸ್ವಿ 70 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಕರಾವಳಿ ಪ್ರದೇಶವಲ್ಲದೆ, ದುಬೈ, ಮಸ್ಕತ್‍, ಕೆನಡಾ, ನೈಜೀರಿಯಾ ಮುಂತಾದ ಕಡೆ ಸಹ ಬಿಡುಗಡೆಯಾಗಿ ಜನಪ್ರಿಯವಾಗಿತ್ತು. ವಿಶೇಷವಾಗಿ, ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನವಾಗುವುದರ ಜೊತೆಗೆ, ಮೂರನೇ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿಯನ್ನು ಗೆದ್ದಿತ್ತು. ಈಗ ಈ ಚಿತ್ರವು ಕನ್ನಡದಲ್ಲಿ ಮೂಡಿಬರುವುದರ ಜೊತೆಗೆ ಮೇ 9ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.


‘ದಸ್ಕತ್‍’ ಸೆವೆನ್ ಸ್ಟುಡಿಯೋಸ್ ಅಡಿ ರಾಘವೇಂದ್ರ ಕುಡ್ವ ನಿರ್ಮಿಸಿದ್ದು, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಶೇಣಿ, ಭವ್ಯ ಪೂಜಾರಿ, ದೀಪಕ್ ರೈ ಪಾಣಾಜೆ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ ಹಾಗೂ ಸಮರ್ಥನ್ ಎಸ್. ರಾವ್ ಸಂಗೀತವಿದೆ.


ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಅನೀಶ್ ಪೂಜಾರಿ ವೇಣೂರು, ‘ನಾನು ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಿಂದ ಗುರುತಿಸಿಕೊಂಡವನು. ನನ್ನದೇ ಒಂದಷ್ಟು ಗೆಳೆಯರ ಬಳಗ ಸೇರಿಕೊಂಡು ಕಿರುಚಿತ್ರ ಹಾಗೂ ವೆಬ್ ಸರಣಿಗಳನ್ನು ಮಾಡುತ್ತಿದ್ದೆವು. ತದನಂತರ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಬಹಳಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡು ಈ ‘ದಸ್ಕತ್’ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ.

‘ದಸ್ಕತ್’ ಎಂದರೇನು ಎಂದು ವಿವರಿಸುವ ಅವರು, ‘’ದಸ್ಕತ್‍’ ಎಂದರೆ ಸಹಿ ಎಂದರ್ಥ. ಒಂದು ಹಳ್ಳಿಯಲ್ಲಿ ಜನ ಸಹಿಗಾಗಿ ಎಷ್ಟು ಕಷ್ಟ ಪಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಒಂದು ಸಹಿಯಿಂದ ಏನೆಲ್ಲಾ ಅವಾಂತರ ಸೃಷ್ಟಿಯಾಗುತ್ತದೆ, ಶ್ರೀಮಂತರು, ಬಡವರು ಹಾಗೂ ಅಧಿಕಾರಿಗಳ ನಡುವಿನ ತಳಮಳದ ಜೊತೆಗೆ ಬದುಕು ಹೇಗೆಲ್ಲಾ ಸಾಗುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇಂತಹ ಘಟನೆಗಳು ಪ್ರತಿಯೊಬ್ಬರ ಬದುಕಿನಲ್ಲಿ ನಡೆಯುವಂತಹ ಸಾಧ್ಯತೆ ಇದ್ದೇ ಇರುತ್ತದೆ. ಕರಾವಳಿ ಭಾಗದ ಸುತ್ತ ಚಿತ್ರೀಕರಿಸಿರುವ ಈ ಚಿತ್ರ 70 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ’ ಎನ್ನುತ್ತಾರೆ.


ಈ ಚಿತ್ರವನ್ನು ಕನ್ನಡಕ್ಕೆ ಡಬ್‍ ಮಾಡಿ ಬಿಡುಗಡೆ ಮಾಡುತ್ತಿರುವವರು ಜಗದೀಶ್ ಎನ್. ಅರೇಬನ್ನಿಮಂಗಲ. ‘ನಾನು ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಗ್ರಾಮದ ಕಷ್ಟ ಸುಖಗಳನ್ನ ತಿಳಿದುಕೊಂಡು ಪರಿಹಾರ ಕೂಡ ಮಾಡಿದ್ದೇನೆ. ಈ ಚಿತ್ರ ನೋಡುವ ಅವಕಾಶ ಸಿಕ್ಕಿತು. ನನಗೆ ತುಳು ಬರದಿದ್ದರೂ ಅದರ ಭಾವನೆಗಳ ತುಂಬಾ ಇಷ್ಟವಾಯಿತು. ಗ್ರಾ ಪಂಚಾಯ್ತಿ ಅಧಿಕಾರಿಯಿಂದ ಆ ಹಳ್ಳಿಯ ಮುಗ್ಧ ಜನ ಹೇಗೆಲ್ಕಾ ಕಷ್ಟಪಡುತ್ತಿದ್ದಾರೆ ಎಂಬುವುದನ್ನು ಬಹಳ ಸೊಗಸಾಗಿ ತೋರಿಸಿದ್ದಾರೆ. ಹಾಗಾಗಿ ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿ ಹೊರ ತರುತ್ತಿದ್ದೇವೆ’ ಎನ್ನುತ್ತಾರೆ.


ಈಗಾಗಲೇ ‘ದಸ್ಕತ್‍’ ಕನ್ನಡ ಚಿತ್ರದ ಟ್ರೇಲರನ್ನು ಶಿವರಾಜಕುಮಾರ್, ಶ್ರೀಮುರಳಿ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಮತ್ತು ತಂತ್ರಜ್ಞರು ನೋಡಿ ಮೆಚ್ಚಿದ್ದಾರಂತೆ.

Read More
Next Story