ಪ್ರಭಾಸ್ ‘ದಿ ರಾಜಾ ಸಾಬ್’ ಪ್ರದರ್ಶನದ ವೇಳೆ  ಚಿತ್ರಮಂದಿರಲ್ಲಿ ಬೆಂಕಿ ಅವಘಡ
x

ಒಡಿಶಾದ ರಾಯಗಡದ ಅಶೋಕ್ ಟಾಕೀಸ್‌ನಲ್ಲಿ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಚಿತ್ರ ಪ್ರದರ್ಶನದ ವೇಳೆ ಬೆಂಕಿ ಅವಘಡ ಸಂಭವಿಸಿದೆ.

ಪ್ರಭಾಸ್ ‘ದಿ ರಾಜಾ ಸಾಬ್’ ಪ್ರದರ್ಶನದ ವೇಳೆ ಚಿತ್ರಮಂದಿರಲ್ಲಿ ಬೆಂಕಿ ಅವಘಡ

‘ದಿ ರಾಜಾ ಸಾಬ್’ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಭರ್ಜರಿ ಆರಂಭ ಪಡೆದಿದ್ದು, ಮೊದಲ ದಿನವೇ ಸುಮಾರು 45 ಕೋಟಿ ರೂ. ಗಳಿಸಿದೆ. ಪ್ರೀ-ರಿಲೀಸ್ ವ್ಯವಹಾರ ಸೇರಿದಂತೆ ಒಟ್ಟು ಕಲೆಕ್ಷನ್ ಈಗ 54.15 ಕೋಟಿ ರೂ. ತಲುಪಿದೆ.


Click the Play button to hear this message in audio format

ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ ಬಿಡುಗಡೆಯಾದ ಮೊದಲ ದಿನವೇ ಒಡಿಶಾದ ರಾಯಗಡದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಭಿಮಾನದ ಭರದಲ್ಲಿ ಪ್ರೇಕ್ಷಕರು ಮಾಡಿದ ಎಡವಟ್ಟಿನಿಂದಾಗಿ ಚಿತ್ರಮಂದಿರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದೆ.

ಇಲ್ಲಿನ ಅಶೋಕ್ ಟಾಕೀಸ್‌ನಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಶುಕ್ರವಾರ ಚಿತ್ರಮಂದಿರ ಹೌಸ್‌ಫುಲ್ ಆಗಿತ್ತು. ಬೆಳ್ಳಿತೆರೆಯ ಮೇಲೆ ನಾಯಕ ನಟ ಪ್ರಭಾಸ್ ಅವರ ಭರ್ಜರಿ ಎಂಟ್ರಿ ಆಗುತ್ತಿದ್ದಂತೆಯೇ, ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಈ ಕ್ಷಣವನ್ನು ಸಂಭ್ರಮಿಸಲು ಮುಂದಾದ ಅಭಿಮಾನಿಗಳ ಗುಂಪೊಂದು, ಪರದೆಯ ಮುಂದೆಯೇ ಆರತಿ ಬೆಳಗಲು ಆರಂಭಿಸಿದೆ. ಅಷ್ಟೇ ಅಲ್ಲದೆ, ಕೆಲವರು ಉತ್ಸಾಹದ ಅತಿರೇಕದಲ್ಲಿ ಚಿತ್ರಮಂದಿರದ ಒಳಗೇ ಪಟಾಕಿಗಳನ್ನು ಸಿಡಿಸಲು ಯತ್ನಿಸಿದ್ದಾರೆ.

ಕ್ಷಣಾರ್ಧದಲ್ಲಿ ಆವರಿಸಿದ ದಟ್ಟ ಹೊಗೆ

ಪಟಾಕಿ ಸಿಡಿಸಿದ ಪರಿಣಾಮ ಕಿಡಿ ತಗುಲಿ ಪರದೆಯ ಸಮೀಪದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಥಿಯೇಟರ್ ಆವರಣದಲ್ಲೆಲ್ಲ ದಟ್ಟವಾದ ಹೊಗೆ ಆವರಿಸಿಕೊಂಡಿದ್ದರಿಂದ, ಪ್ರೇಕ್ಷಕರು ಉಸಿರುಗಟ್ಟಿ ಗಾಬರಿಗೊಂಡರು. ಭಯಭೀತರಾದ ಜನ ದಿಕ್ಕಾಪಾಲಾಗಿ ಓಡಲು ಆರಂಭಿಸಿದಾಗ ಸಣ್ಣಮಟ್ಟದ ಕಾಲ್ತುಳಿತದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಿತ್ರಮಂದಿರದ ಸಿಬ್ಬಂದಿ, ಕೂಡಲೇ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಅಲ್ಪಕಾಲ ಸ್ಥಗಿತಗೊಂಡಿದ್ದ ಪ್ರದರ್ಶನವು ಸುರಕ್ಷತಾ ಕ್ರಮಗಳ ಪರಿಶೀಲನೆಯ ನಂತರ ಪುನಃ ಆರಂಭವಾಯಿತು.

ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಬಾಕ್ಸ್ ಆಫೀಸ್ ಕೊಳ್ಳೆ

ಮಾರುತಿ ನಿರ್ದೇಶನದ ಹಾರರ್-ಕಾಮಿಡಿ ಕಥಾಹಂದರ ಹೊಂದಿರುವ ‘ದಿ ರಾಜಾ ಸಾಬ್’ ಚಿತ್ರವು ಜನವರಿ 9 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಂಜಯ್ ದತ್, ಮಾಳವಿಕಾ ಮೋಹನನ್ ಮತ್ತು ನಿಧಿ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಥೆ ಮತ್ತು ಚಿತ್ರಕಥೆಯಲ್ಲಿನ ಕೆಲವು ನ್ಯೂನತೆಗಳ ಬಗ್ಗೆ ಟೀಕೆಗಳು ಕೇಳಿಬಂದರೂ, ಪ್ರಭಾಸ್ ಅವರ ವಿಭಿನ್ನ ಮ್ಯಾನರಿಸಂ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿಮರ್ಶೆಗಳು ಅಷ್ಟೇನೂ ಪೂರಕವಾಗಿಲ್ಲದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ವಾಣಿಜ್ಯ ವಿಶ್ಲೇಷಕರ ಪ್ರಕಾರ, ಬಿಡುಗಡೆಯಾದ ಮೊದಲ ದಿನವೇ ಭಾರತದಲ್ಲಿ ಸುಮಾರು 45 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಪ್ರೀ-ರಿಲೀಸ್ ಬಿಸಿನೆಸ್ ಮತ್ತು ಪ್ರೀಮಿಯರ್ ಶೋಗಳನ್ನು ಒಳಗೊಂಡಂತೆ ಒಟ್ಟು ಗಳಿಕೆ 54.15 ಕೋಟಿ ರೂ. ದಾಟಿದೆ ಎಂದು ಅಂದಾಜಿಸಲಾಗಿದೆ.

Read More
Next Story