ಉದ್ಯಮಿ ರೋಷನ್ - ಆ್ಯಂಕರ್ ಅನುಶ್ರೀ ಮದುವೆ ಚಿತ್ರಗಳು ಇಲ್ಲಿವೆ
x

ಉದ್ಯಮಿ ರೋಷನ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನುಶ್ರೀ

ಉದ್ಯಮಿ ರೋಷನ್ - ಆ್ಯಂಕರ್ ಅನುಶ್ರೀ ಮದುವೆ ಚಿತ್ರಗಳು ಇಲ್ಲಿವೆ

ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉದ್ಯಮಿ ರೋಷನ್ ಅವರನ್ನು ಅನುಶ್ರೀ ಸಾಂಪ್ರದಾಯಿಕವಾಗಿ ವರಿಸಿದರು.


ಕನ್ನಡದ ಜನಪ್ರಿಯ ಕಿರುತೆರೆ ನಟಿ ಅನುಶ್ರೀ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉದ್ಯಮಿ ರೋಷನ್ ಅವರನ್ನು ಸಾಂಪ್ರದಾಯಿಕವಾಗಿ ವರಿಸಿದರು. ರೋಷನ್ ಅವರು ಕೊಡಗು ಮೂಲದವರಾಗಿದ್ದು, ಐಟಿ ವೃತ್ತಿಪರರು ಹಾಗೂ ಉದ್ಯಮಿಯಾಗಿದ್ದಾರೆ.

ವಿವಾಹ ಪೂರ್ವ ಸಮಾರಂಭ ಹಳದಿ ಶಾಸ್ತ್ರದಲ್ಲಿ ಅನುಶ್ರೀ ಹಾಗೂ ರೋಷನ್ ಇಬ್ಬರೂ ಹಳದಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದರು.

ವಿವಾಹ ಸಮಾರಂಭದಲ್ಲಿ ಅನುಶ್ರೀ ಕಿತ್ತಳೆ ಬಣ್ಣದ ರೇಷ್ಮೆ ಸೀರೆ ಧರಿಸಿದ್ದರೆ, ಅವರ ಪತಿ ಪೀಚ್‌ ಬಣ್ಣದ ಉಡುಗೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನವ ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಉಳಿದಂತೆ ಶಿವರಾಜ್‌ಕುಮಾರ್ ದಂಪತಿ, ಶರಣ್, ಪ್ರೇಮಾ, ಹಂಸಲೇಖ, ಶ್ವೇತಾ ಚಂಗಪ್ಪ, ವಿಜಯ್ ರಾಘವೇಂದ್ರ, ನೆನಪಿರಲಿ ಪ್ರೇಮ್, ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಅನುಶ್ರೀ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿ. ಈ ಹಿನ್ನೆಲೆ ಅನುಶ್ರೀ ಹಾಗೂ ರೋಷನ್ ವಿವಾಹವಾಗುತ್ತಿರುವ ಹಾಲ್​​ನಲ್ಲಿ ಪುನೀತ್ ರಾಜ್​ಕುಮಾರ್ ಅವರ ಚಿತ್ರವನ್ನು ಇರಿಸಿ ಆ ಚಿತ್ರವನ್ನು ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು.

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ನಿರೂಪಕಿಯರಲ್ಲಿ ಒಬ್ಬರಾದ ಅನುಶ್ರೀ, ತಮ್ಮ ಹಾಸ್ಯ ಪ್ರಜ್ಞೆ ಮತ್ತು ಚುರುಕುತನದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಮ್ಮ ಟಿವಿಯ 'ಟೆಲಿ ಅಂತಾಕ್ಷರಿʼ ಕಾರ್ಯಕ್ರಮದ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದ ಅವರು, ಬಳಿಕ ಈಟಿವಿ ಕನ್ನಡದ 'ಡಿಮ್ಯಾಂಡಪ್ಪೋ ಡಿಮ್ಯಾಂಡೂ' ಕಾರ್ಯಕ್ರಮದ ಮೂಲಕ ಮನೆಮಾತಾದರು.

ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯಾಗಿ ಗುರುತಿಸಿಕೊಂಡ ಅನುಶ್ರೀ, ಸುವರ್ಣ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿಗಳು, SIIMA, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಂತಹ ಪ್ರತಿಷ್ಠಿತ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. 'ಬಿಗ್ ಬಾಸ್ ಕನ್ನಡ ಸೀಸನ್ 1' ನಲ್ಲಿ 76 ದಿನಗಳ ಕಾಲ ಇದ್ದು, ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು.

ಚಲನಚಿತ್ರ ಕ್ಷೇತ್ರಕ್ಕೆ ಪದಾರ್ಪಣೆ

ಕಿರುತೆರೆ ಮಾತ್ರವಲ್ಲದೆ ಹಿರಿತೆರೆಗೆ ಪದಾರ್ಪಣೆ ಮಾಡಿರುವ ಅವರು, 'ಬೆಂಕಿಪಟ್ಣ' ಚಿತ್ರದ ಮೂಲಕ ನಟನೆಗೆ ಕಾಲಿಟ್ಟರು. ಈ ಪಾತ್ರಕ್ಕಾಗಿ 'ಅತ್ಯುತ್ತಮ ಚೊಚ್ಚಲ ನಟಿ' ವಿಭಾಗದಲ್ಲಿ ಅವರಿಗೆ NAK ಮಾಧ್ಯಮ ಸಾಧನೆ ಪ್ರಶಸ್ತಿ ದೊರೆಯಿತು. 2011ರಲ್ಲಿ 'ಮುರಳಿ ಮೀಟ್ಸ್ ಮೀರಾ' ಸಿನಿಮಾಕ್ಕಾಗಿ 'ಅತ್ಯುತ್ತಮ ಡಬ್ಬಿಂಗ್ ಕಲಾವಿದೆ' ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದರು. ಇತ್ತೀಚೆಗೆ ಇಮ್ರಾನ್ ಸರ್ಧಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

Read More
Next Story