‘X&Y ಸಿನಿಮಾ | ಸಾರ್ವಜನಿಕರ ಸಹಾಯಕ್ಕೆ ಆಟೋದಲ್ಲೊಂದು ಆಂಬ್ಯುಲೆನ್ಸ್
ಈ 'ಆಂಬು ಆಟೋ’ ನೋಡಿರುವ ಕೆಲವು ಆಟೋ ಡ್ರೈವರ್‌ಗಳು, ತಾವೂ ತಮ್ಮಆಟೋಗಳನ್ನು 'ಆಂಬು ಆಟೋ' ಆಗಿ ಮಾಡಿ ಸಾರ್ವಜನಿಕ ಸಹಾಯಕ್ಕಾಗಿ ಬಳಸುವುದಕ್ಕೆ ಮುಂದಾಗಿದ್ದಾರಂತೆ. ಈ ಆಟೋದಲ್ಲಿ ECG ತಪಾಸಣೆ ಕೂಡಾ ಮಾಡಲಾಗುತ್ತಿದೆ.
‘ರಾಮ ರಾಮಾ ರೇ’ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ಇದೀಗ ಸದ್ದಿಲ್ಲದೆ ತಮ್ಮ ಹೊಸ ಚಿತ್ರವನ್ನು ಮುಗಿಸಿದ್ದಾರೆ. ‘X&Y’ ಹೆಸರಿನ ಈ ಚಿತ್ರಕ್ಕೆ ಅವರು ನಿರ್ದೇಶಕರಷ್ಟೇ ಅಲ್ಲ, ಹೀರೋ ಸಹ ಹೌದು. ಆದರೆ, ಈ ಚಿತ್ರದ ನಿಜವಾದ ಹೀರೋ ಎಂದರೆ ಅದು ‘ಆಂಬು ಆಟೋ’ ಎನ್ನುತ್ತಾರೆ ಸತ್ಯಪ್ರಕಾಶ್.
‘X&Y’ ಚಿತ್ರದಲ್ಲಿ ಸತ್ಯಪ್ರಕಾಶ್, ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಟೋ ಎಂದರೆ ಅದು ಬರೀ ಆಟೋ ಅಲ್ಲ, ಆಂಬ್ಯುಲೆನ್ಸ್ ಸೌಲಭ್ಯಗಳಿರುವ ಆಟೋ ಅದು. ಈ ಆಟೋವನ್ನು ಚಿತ್ರದಲ್ಲಿ ಒಬ್ಬ ಕಲಾವಿದನಂತೆ ಕಲಾತ್ಮಕವಾಗಿ ಬಳಸಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ಈ 'ಆಂಬು ಆಟೋ' ಪ್ರಮುಖ ಪಾತ್ರವಹಿಸುತ್ತದಂತೆ.
ಈ 'ಆಂಬು ಆಟೋ’ ನೋಡಿರುವ ಕೆಲವು ಆಟೋ ಡ್ರೈವರ್‌ಗಳು, ತಾವೂ ತಮ್ಮಆಟೋಗಳನ್ನು 'ಆಂಬು ಆಟೋ' ಆಗಿ ಮಾಡಿ ಸಾರ್ವಜನಿಕ ಸಹಾಯಕ್ಕಾಗಿ ಬಳಸುವುದಕ್ಕೆ ಮುಂದಾಗಿದ್ದಾರಂತೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಬೆಂಗಳೂರಿನ ಜಯನಗರದ ಬೆಂಗಳೂರು ಸಾರಥಿ ಸೇನೆ ಆಟೋ ಚಾಲಕರ ಸಂಘ ಸಂಘಟಿಸಿದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಈ ‘ಆoಬು ಆಟೋ’ವನ್ನು ಪ್ರದರ್ಶನಕ್ಕಿಡಲಾಗಿದೆ. ಹಾಗೆಯೇ ಈ ಆಟೋದಲ್ಲಿ ECG ತಪಾಸಣೆ ಮಾಡುವ ಮೂಲಕ ಚಾಲಕರೆಲ್ಲರಿಗೂ ಪ್ರಾತ್ಯಕ್ಷಿತೆ ನೀಡಲಾಗಿದೆ.
‘X&Y’, ಸತ್ಯಪ್ರಕಾಶ್ ನಿರ್ದೇಶನದ ನಾಲ್ಕನೇ ಚಿತ್ರ. ‘ರಾಮ ರಾಮಾ ರೇ’ ನಂತರ ‘ಒಂದಲ್ಲಾ ಎರಡಲ್ಲಾ’ ಮತ್ತು ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಗಳನ್ನು ನಿರ್ದೇಶಿಸಿದ್ದ ಸತ್ಯ, ‘X&Y’ ಚಿತ್ರವನ್ನು ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರವನ್ನು ತಾವೇ ತಮ್ಮ ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣ ಮಾಡಿ, ಅದರಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
‘X&Y’ ಚಿತ್ರದ ಮೂಲಕ ತಂದೆ-ತಾಯಿ ಆಗಲು ಹೊರಟಿರುವ ಇವತ್ತಿನ ತಲೆಮಾರಿನವರ ಕಥೆ ಹೇಳುವುದಕ್ಕೆ ಹೊರಟಿದ್ದಾರೆ ಸತ್ಯಪ್ರಕಾಶ್. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ. ತಮ್ಮ ಹಿಂದಿನ ಚಿತ್ರಗಳಂತೆ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ.
ಚಿತ್ರದಲ್ಲಿ ಸತ್ಯಪ್ರಕಾಶ್ ಜೊತೆಗೆ ಅಥರ್ವ ಪ್ರಕಾಶ್, ಬೃಂದಾ ಆಚಾರ್ಯ, ಸುಂದರ್ ವೀಣಾ, ದೊಡ್ಡಣ್ಣ ಮುಂತಾದವರು ನಟಿಸಿದ್ದು, ವಾಸುಕಿ ವೈಭವ್ ಸಂಗೀತ ಮತ್ತು ಲವಿತ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.