ಸಾಧನೆಯ ನಡುವೆ ಸಂಬಂಧಗಳ ಆವೇದನೆ
x

ಸಾಧನೆಯ ನಡುವೆ ಸಂಬಂಧಗಳ ಆವೇದನೆ

ನಿರ್ದೇಶಕರು ಒಂದೊಳ್ಳೆಯ ಎಳೆಯನ್ನೇ ಕಥೆಯಾಗಿಸಿದ್ದಾರೆ. ಸಾಧನೆಯ ನಡುವೆ ಬದುಕು ನೀಡುವ ವೇದನೆಗೆ ಚಿತ್ರವನ್ನು ಕನ್ನಡಿಯಾಗಿದ್ದಾರೆ. ಒಂದಷ್ಟು ನೈಜ ಘಟನೆಗಳ ಹೋಲಿಕೆಯನ್ನು ತುಂಬಿ ನಮಗೆ ಹತ್ತಿರಗೊಳಿಸಿದ್ದಾರೆ.


Click the Play button to hear this message in audio format

ತೊಂಬತ್ತರ ದಶಕ ಅಥವಾ ಅದಕ್ಕೂ ಮೊದಲು ಜನಿಸಿದವರಿಗೆ ಆಪ್ತವೆನಿಸುವ ಶೀರ್ಷಿಕೆ. ಅದಕ್ಕೆ ಕಾರಣ ಅದು ತಂದೆಗೆ ಪತ್ರ ಬರೆಯುವಾಗ ಬಳಸುವ ಮೊದಲ ವಾಕ್ಯ. ತೀರ್ಥರೂಪರಾದ ತಂದೆಯವರಿಗೆ ಎಂದು ಆರಂಭವಾಗುವ ಪತ್ರ. ಗೌರವದಿಂದ ಶುರುವಾಗುವ ವಾಕ್ಯದಲ್ಲಿ ಸಂಬಂಧದ ಆಳ, ಅಗಲ, ಪರಿಮಿತಿ ಎಲ್ಲವೂ ತುಂಬಿಕೊಂಡಿರುತ್ತದೆ. ಇಂಥ ಭಾವುಕ ಪದಗಳ‌ ಶೀರ್ಷಿಕೆಯಲ್ಲಿ ಭಾವನಾತ್ಮಕ ಚಿತ್ರವನ್ನೇ ನೀಡಿದ್ದಾರೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್.

ಹೊಂದಿಸಿ‌ ಬರೆಯಿರಿ ಎನ್ನುವ ಚಿತ್ರದ ಮೂಲಕ‌ ತನ್ನ ಛಾಪು ಮೂಡಿಸಿರುವ ರಾಮೇನಹಳ್ಳಿ ಜಗನ್ನಾಥ್ ಬಗ್ಗೆ ಇಂದಿನ ತಲೆಮಾರಿಗೆ ನಿರ್ದಿಷ್ಟ ನಿರೀಕ್ಷೆಗಳಿವೆ. ಅದಕ್ಕೆ ಭಂಗವಾಗದ ಹಾಗೆ ಒಂದೊಳ್ಳೆಯ ಕೌಟುಂಬಿಕ ಚಿತ್ರವನ್ನೇ ನೀಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಅವನು ಮೂಡಿಗೆರೆಯಲ್ಲಿರುವ ಒಬ್ಬ ವ್ಲಾಗರ್. ಹೇಗೆ ಒಳ್ಳೆಯ ವಿಡಿಯೋಗಳಿಂದ ಸಮಾಜದಲ್ಲಿ ಹೆಸರು ಮಾಡಬಹುದು ಎನ್ನುವುದಕ್ಕೆ ಮಾದರಿ. ಆದರೆ ಮನೆಯಲ್ಲಿ ಮಾತ್ರ ತಾಯಿಯನ್ನು ಕಂಡರೆ ಮೂಗು ಮುರಿಯುತ್ತಾನೆ. ಇದಕ್ಕೆ ಎರಡು ಕಾರಣಗಳು. ತಾನು ಬಾಲ್ಯದಲ್ಲಿದ್ದಾಗಲೇ ತಂದೆ ತಮ್ಮನ್ನೆಲ್ಲ ತೊರೆದು ಹೋಗಿರುವುದು ಗೊತ್ತು. ಆದರೆ ಯಾಕೆ ಎನ್ನುವುದನ್ನು ತಾಯಿ ಹೇಳುತ್ತಿಲ್ಲ ಎನ್ನುವ ನೋವು. ಮತ್ತೊಂದು ಕಾರಣ ತನ್ನ ತಾಯಿಗೆ ಕಾಫಿ ಪ್ಲಾಂಟರ್ ಒಬ್ಬರೊಂದಿಗೆ ಇರುವ ಆತ್ಮೀಯತೆ. ಊರ ಮಂದಿ ಅಪಹಾಸ್ಯ ಮಾಡುತ್ತಿದ್ದರೂ ಆ ವ್ಯಕ್ತಿಯೊಂದಿಗೆ ಅಮ್ಮ ಬಹಿರಂಗವಾಗಿಯೇ ಸುತ್ತಾಟ ನಡೆಸುವುದನ್ನು ಕಣ್ಣಾರೆ ಕಂಡು‌ ನೋವು.

ಇವೆಲ್ಲದರ ಮಧ್ಯೆ ಈ ವ್ಲಾಗರ್ ಪೃಥ್ವಿಗೆ ಅಭಿಮಾನಿಯೊಬ್ಬಳು ಸಿಗುತ್ತಾಳೆ. ಆ ಅಭಿಮಾನಿಯೇ ಪ್ರೇಯಸಿಯಾಗುತ್ತಾಳೆ.‌ ಪ್ರೇಯಸಿಯ ಮೂಲಕ ಅರಿವಾಗುವ ಕಥೆಯಿಂದ ತಾಯಿಯ ಮೇಲಿನ ಭಾವ ಬದಲಾಗುತ್ತದೆ. ತಂದೆಯ ಹುಡುಕಾಟ ಶುರುವಾಗುತ್ತದೆ. ಪ್ರೇಯಸಿಗೂ ವ್ಲಾಗರ್ ಪೃಥ್ವಿಯ ಕುಟುಂಬಕ್ಕೂ ಮಧ್ಯೆ ಹಿನ್ನೆಲೆಯಾಗಿರುವ ಸಂಗತಿ ಏನು? ತಂದೆಯ ಹುಡುಕಾಟದಲ್ಲಿ ಆತನಿಗೆ ಅರಿವಾಗುವ ಸತ್ಯವೇನು? ಇವೆಲ್ಲವನ್ನೂ ಚಿತ್ರದ ಮೂಲಕ ಕುತೂಹಲಕಾರಿಯಾಗಿ ಕಟ್ಟಿಕೊಡಲಾಗಿದೆ.

ವ್ಲಾಗರ್ ಪೃಥ್ವಿಯಾಗಿ ನಿಹಾರ್ ಮುಕೇಶ್ ನಟಿಸಿದ್ದಾರೆ. ಚಿತ್ರದ ಕೊನೆಯವರೆಗೂ ಈ ಪಾತ್ರ ಪ್ರೇಕ್ಷಕರಿಗೆ ಆಪ್ತವಾಗುವ ಸಂದರ್ಭವೇ ಸೃಷ್ಟಿಯಾಗಿಲ್ಲ.‌ ಹಾಗಾಗಿ ನಿಹಾರ್ ಮುಕೇಶ್ ನಿಜವಾದ ಪ್ರತಿಭೆಯ ಅನಾವರಣಕ್ಕೆ ಅವಕಾಶವಾಗಿಲ್ಲ ಎನ್ನಬಹುದು.‌ ಪೃಥ್ವಿಯ ಅಭಿಮಾನಿ ಅಕ್ಷರಾ ಎನ್ನುವ ಪಾತ್ರವನ್ನು ರಚನಾ ಇಂದರ್ ನಿಭಾಯಿಸಿದ್ದಾರೆ. ಈ ಎರಡು ಪಾತ್ರಗಳಿಗಿಂತ ಹೆಚ್ಚಿನ ಅವಕಾಶವನ್ನು ಸಿತಾರಾ ಪಾತ್ರಕ್ಕೆ ನೀಡಲಾಗಿದೆ. ಪೃಥ್ವಿಯ ತಾಯಿ ಜಾನಕಿಯಾಗಿ ನೋವು, ನಿರಾಶೆ, ದೈನ್ಯತೆ, ನಿರೀಕ್ಷೆ ಹೀಗೆ ವಿವಿಧ ಭಾವಗಳ ಸಂಗಮವಾದ ಪಾತ್ರ ಅದು. ಆದರೆ ಹೆಚ್ಚಿನ ಸಂದರ್ಭದಲ್ಲಿ ಭಾವವನ್ನೇ ತೋರದೆ,ಕಡುಬು ಬಾಯಲ್ಲಿಟ್ಟುಕೊಂಡಂತೆ ಕಾಣಿಸಿದ್ದಾರೆ. ಈ ರೀತಿ ನಟಿಸಲು ಸಿತಾರ ಬರಬೇಕಿತ್ತೇ ಎಂದು ಅನಿಸದಿರದು. ಆದರೆ ಮಧ್ಯಂತರದ ಹೊತ್ತಿಗೆ ಇಡೀ ಚಿತ್ರವನ್ನು ತನ್ನ ಹೆಗಲಲ್ಲಿ ಎತ್ತಿಕೊಂಡಂತೆ ನಟಿಸಿದ ಕೀರ್ತಿ ನಟ ರವೀಂದ್ರ ವಿಜಯ್ ಗೆ ಸಲ್ಲುತ್ತದೆ. ಪ್ರತಿಭೆ ಮತ್ತು ಪಾತ್ರದ ನೋಟದಿಂದ ಅಗಲಿರುವ ಬಹುಭಾಷಾ ನಟ ರಘುವರನ್ ಅವರನ್ನು ನೆನಪಿಸುತ್ತಾರೆ.

ನಿರ್ದೇಶಕರು ಒಂದೊಳ್ಳೆಯ ಎಳೆಯನ್ನೇ ಕಥೆಯಾಗಿಸಿದ್ದಾರೆ. ಸಾಧನೆಯ ನಡುವೆ ಬದುಕು ನೀಡುವ ವೇದನೆಗೆ ಚಿತ್ರವನ್ನು ಕನ್ನಡಿಯಾಗಿದ್ದಾರೆ. ಒಂದಷ್ಟು ನೈಜ ಘಟನೆಗಳ ಹೋಲಿಕೆಯನ್ನು ತುಂಬಿ ನಮಗೆ ಹತ್ತಿರಗೊಳಿಸಿದ್ದಾರೆ. ಆದರೆ ವಾಕ್ ಮ್ಯಾನ್ ಎನ್ನುವ ಪಾತ್ರವನ್ನು ಅನಗತ್ಯವಾಗಿ ತುರುಕಿ ಸಹನೆ ಪರೀಕ್ಷಿಸುವಂತೆ ಮಾಡಿದ್ದಾರೆ. ಮತ್ತೊಂದೆಡೆ ನಿರೀಕ್ಷೆ ಸೃಷ್ಟಿಸಿದ್ದ ನಟರಂಗ ರಾಜೇಶ್ ಅವರ ಕಾಫಿ‌ ಪ್ಲಾಂಟರ್ ಪಾತ್ರ ಹೆಚ್ಚು ಮಾತಾಡದೆ ಕೊನೆಯಾಗುತ್ತದೆ.

ದಶಕಗಳ ಹಿಂದಿನ ಕಥೆಯನ್ನು ತೆಗೆದುಕೊಂಡಾಗ ನಾಪತ್ತೆ ಪ್ರಕರಣಗಳು ಹೆಚ್ಚು ಲಾಜಿಕ್ ನಲ್ಲಿರುವಂತೆ ಕಾಣಿಸುತ್ತದೆ. ಆದರೆ ಈ ಕಾಲಘಟ್ಟದಲ್ಲಿ ಒಬ್ಬ ಶ್ರೀಮಂತ ತನಿಖಾ‌ ಪತ್ರಕರ್ತ ನಾಪತ್ತೆಯಾದ ವ್ಯಕ್ತಿಯನ್ನು ಹುಡುಕುವ ಸಾಧ್ಯತೆ ಇಷ್ಟೇನಾ ಅನಿಸದಿರದು. ಅದೇ ರೀತಿ ಜನಪ್ರಿಯ ವ್ಲಾಗರ್ ತನ್ನ ತಂದೆಯನ್ನು ಹುಡುಕುವ ರೀತಿ ಇದೇನಾ ಎನ್ನುವ ಪ್ರಶ್ನೆ ಮೂಡಿದರೆ ತಪ್ಪೇನಿಲ್ಲ.

ಪ್ರತಿಭಾವಂತ ಹಾಸ್ಯನಟ ಗಿರೀಶ್ ಶಿವಣ್ಣನ ಟೀ ಅಂಗಡಿ ಅಶೋಕಣ್ಣನ ಪಾತ್ರ ನಗು ತರಿಸುವುದಿಲ್ಲ. ಅಜಿತ್ ಹಂಡೆ ನಟನೆಯ ಪತ್ರಕರ್ತ ರವಿ ರಾಮನಾಥಪುರ ಎನ್ನುವ ಪಾತ್ರ ರವಿ ಬೆಳಗೆರೆಯವರನ್ನು ಹೋಲುತ್ತದೆ ಎಂದು ಹೇಳಿಕೊಡಬೇಕಾಗಿಲ್ಲ. ಕೆಲವೇ ದೃಶ್ಯಗಳಲ್ಲಿ ಬಂದರೂ ಅಶ್ವಿತಾ ಆರ್ ಹೆಗ್ಡೆ ಮತ್ತು ಬಾಲನಟಿ ಬೇಬಿ ಮೈರಾ ಪಾತ್ರಗಳು ಮನದೊಳಗೆ ಸ್ಥಾನ ಪಡೆಯುತ್ತವೆ.

ಜೋ ಕಾಸ್ಟ ಸಂಗೀತದಲ್ಲಿ "ನನದೇ ಜಗದಲ್ಲಿ.." ಹಾಡು ಸುಂದರವಾದ ಘಜಲ್ ನಂತೆ ಮೂಡಿ ಬಂದಿದೆ. ದೀಪಕ್ ಯರಗೇರ ಛಾಯಾಗ್ರಹಣ ದೃಶ್ಯಗಳನ್ನು ಕಾವ್ಯವಾಗಿಸಿದೆ. ವರ್ಷಾರಂಭದಲ್ಲಿ‌ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ಭಾವುಕಗೊಳ್ಳಬೇಕಾದರೆ ಈ ಸಿನಿಮಾವನ್ನು ವೀಕ್ಷಿಸಬಹುದು.

ಚಿತ್ರ: ತೀರ್ಥರೂಪ ತಂದೆಯವರಿಗೆ

ನಿರ್ದೇಶನ: ರಾಮೇನಹಳ್ಳಿ ಜಗನ್ನಾಥ

ನಿರ್ಮಾಣ: ಜೈ ಚಾಮುಂಡೇಶ್ವರಿ ಸಂಸ್ಥೆ

ತಾರಾಗಣ: ನಿಹಾರ್ ಮುಕೇಶ್, ರಚನಾ ಇಂದರ್, ರವೀಂದ್ರ ವಿಜಯ್ ಮೊದಲಾದವರು.

Read More
Next Story