ಬಿಸಿನೆಸ್‌ ತೊರೆದು ಬಣ್ಣದ ಲೋಕಕ್ಕೆ ಕಾಲಿಟ್ಟ ದ್ವಾರಕೀಶ್‌ ಸ್ಯಾಂಡಲ್‌ವುಡ್‌ ಸಾಧನೆಯ ಇತಿಹಾಸ!
x
ನಟ ದ್ವಾರಕೀಶ್‌

ಬಿಸಿನೆಸ್‌ ತೊರೆದು ಬಣ್ಣದ ಲೋಕಕ್ಕೆ ಕಾಲಿಟ್ಟ ದ್ವಾರಕೀಶ್‌ ಸ್ಯಾಂಡಲ್‌ವುಡ್‌ ಸಾಧನೆಯ ಇತಿಹಾಸ!

ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ʼಕರ್ನಾಟಕದ ಕುಳ್ಳʼ ಎಂದೇ ಜನಪ್ರಿಯರಾಗಿದ್ದ ದ್ವಾರಕೀಶ್‌, ಇಂದು ಇಹಲೋಕ ತ್ಯಜಿಸಿದ್ದಾರೆ.


ಚಂದನವನದ ಮೇರು ಪ್ರತಿಭೆ, ಹಿರಿನಟ, ನಿರ್ದೇಶಕ ನಿರ್ಮಾಪಕ, ನೂರಾರು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿರಸಿಕರನ್ನು ಹಾಸ್ಯದಲ್ಲಿ ಮಿಂದೇಳಿಸಿದ ನಟ ದ್ವಾರಕೀಶ್‌ ಇಂದು ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಅವರ ಮಗ ಯೋಗೇಶ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದಂತೆ “ಅವರಿಗೆ ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇಡೀ ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಎದ್ದು ಕಾಫಿ ಕುಡಿದು, ಸ್ವಲ್ಪ ಹೊತ್ತು ಮಲಗುವುದಾಗಿ ಹೇಳಿದರು. ಆದರೆ, ಅವರು ಮಾತುಕೊಟ್ಟಂತೆ ಅವರು ಏಳಲಿಲ್ಲ, ಮಾತನಾಡಲಿಲ್ಲ”.. ಹೀಗೆ ಅಂತ್ಯಗೊಂಡದ್ದು ಕನ್ನಡದ ಹಾಸ್ಯ ನಟ ದ್ವಾರಕೀಶ್‌ ಅವರ ಬದುಕು.

ನಿರ್ದೇಶಕರಾಗಿ, ನಿರ್ಮಾಪಕರಾಗಿ ಅನೇಕ ಸೋಲು ಗೆಲುವನ್ನು ಕಂಡವರು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ಕರ್ನಾಟಕದ ಕುಳ್ಳ ಎಂದೇ ಜನಪ್ರಿಯರಾಗಿದ್ದ ದ್ವಾರಕೀಶ್ ಇನ್ನಿಲ್ಲ ಎಂಬುವುದು ಸ್ಯಾಂಡಲ್‌ವುಡ್‌ಗೆ ತುಂಬಲಾಗದ ನಷ್ಟ.

1942 ಆಗಸ್ಟ್ 19 ರಂದು ಹುಣಸೂರಿನಲ್ಲಿ ಶಾಮರಾವ್ ಮತ್ತು ಜಯಮ್ಮ ದಂಪತಿಗೆ ಜನಿಸಿದ ದ್ವಾರಕೀಶ್‌, ಅವರ ಮೂಲ ಹೆಸರು ಬಂಗ್ಲೆ ಶಾಮರಾವ್‌ ದ್ವಾರಕನಾಥ್. ಮೈಸೂರಿನ ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು, ಸಿಪಿಸಿ ಪಾಲಿಟೆಕ್ನಿಕ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ಬಳಿಕ ಅವರ ಸೋದರನ ಜೊತೆ ಸೇರಿ ಗಾಂಧಿ ಚೌಕದಲ್ಲಿ ʼಭಾರತ್ ಆಟೋ ಸ್ಪೇರ್ ಸ್ಟೋರ್ʼ ಬಿಸಿನೆಸ್ ಆರಂಭಿಸಿದರು. ಆದರೆ ಅವರ ಒಲವು ಮಾತ್ರ ಸಿನಿಮಾಗಳತ್ತಲೇ ಇತ್ತು.

ವೀರಸಂಕಲ್ಪದಿಂದ ಸಿನಿಮಾರಂಗಕ್ಕೆ ಎಂಟ್ರಿ

1964ರಲ್ಲಿ ದ್ವಾರಕೀಶ್ ಬಿಸಿನೆಸ್ ಬಿಟ್ಟು ಸಿನೆಮಾ ಇಂಡಸ್ಟ್ರೀಗೆ ಕಾಲಿಟ್ಟರು. 1964ರಲ್ಲಿ ತಮ್ಮ ಮಾವ ಹುಣಸೂರು ಕೃಷ್ಣಮೂರ್ತಿ ನಿರ್ಮಿಸಿ, ನಿರ್ದೇಶಿಸಿ ಮುಖ್ಯಪಾತ್ರದಲ್ಲಿ ನಟಿಸಿದ ʼವೀರಸಂಕಲ್ಪʼ ಸಿನಿಮಾದ ಚಿತ್ರದಲ್ಲಿ ಪುಟ್ಟ ಪಾತ್ರವೊಂದರ ಮೂಲಕ ಕನ್ನಡನಾಡಿನ ಚಿತ್ರ ರಸಿಕರಿಗೆ ದ್ವಾರಕೀಶ್‌ ಪರಿಚಯವಾಗುತ್ತಾರೆ.

ಅಲ್ಲಿಂದ ಆಚೆ ತಿರುಗಿ ನೋಡದ ಅವರು, ಡಾ.ರಾಜಕುಮಾರ್ ಸೇರಿ ಹಲವು ಗಣ್ಯರೊಂದಿಗೆ ನಟಿಸಿ ಅವರು ಸೈ ಎನಿಸಿಕೊಂಡರು. 'ವೀರ ಸಂಕಲ್ಪ', 'ಪರೋಪಕಾರಿ', 'ಸತ್ಯ ಹರಿಶ್ಚಂದ್ರ', 'ಕ್ರಾಂತಿ ವೀರ', 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', 'ಗಾಂಧಿನಗರ', 'ಬಾಳು ಬೆಳಗಿತು', 'ಬಂಗಾರದ ಮನುಷ್ಯ', 'ಬಹದ್ದೂರ್ ಗಂಡು' ಹೀಗೆ ಹಲವು ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಜೊತೆ ದ್ವಾರಕೀಶ್ ನಟಿಸಿದ್ದರು.

ನಿರ್ದೇಶಕರಾಗಿ ಯಶಸ್ಸು ಕಂಡಿದ್ದ ದ್ವಾರಕೀಶ್

ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ದ್ವಾರಕೀಶ್ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು. 1985ರಲ್ಲಿ ಸಿನಿಮಾ ನಿರ್ದೇಶನಕ್ಕೆ ಕಾಲಿಟ್ಟ ದ್ವಾರಕೀಶ್ ಅವರು ಅಲ್ಲೂ ಯಶಸ್ವಿಯಾದರು. ಡಾ.ವಿಷ್ಣುವರ್ಧನ್ ಅಭಿನಯದ ʼನೀ ಬರೆದ ಕಾದಂಬರಿʼ ಸೂಪರ್ ಹಿಟ್ ಆಯಿತು. ಕಿಟ್ಟು-ಪುಟ್ಟು, ಸಿಂಗಾಪುರದಲ್ಲಿ ರಾಜಕುಳ್ಳ, ಭಾಗ್ಯವಂತರು, ಗುರು ಶಿಷ್ಯರು, ಪೆದ್ದ-ಗೆದ್ದ, ಆಪ್ತಮಿತ್ರ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ದ್ವಾರಕೀಶ್ ಅವರದ್ದಾಗಿದೆ. ʼಚೌಕʼ ಇವರ ಕೊನೆಯ ಸಿನಿಮಾ ಆಗಿದೆ. ಇವರು ಸುಮಾರು 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ʼದ್ವಾರಕೀಶ್ʼ ನಿರ್ಮಾಣ ಸಂಸ್ಥೆಯ ಹುಟ್ಟು

ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಲೇ ಎರಡೇ ವರ್ಷಗಳಲ್ಲಿ ಸಿನಿಮಾ ನಿರ್ಮಾಣದತ್ತ ಮುಖ ಮಾಡಿದರು. ಗೆಳೆಯರ ಜೊತೆ ಸೇರಿ ʼಮಮತೆಯ ಬಂಧನʼ ಸಿನಿಮಾವನ್ನು ನಿರ್ಮಿಸಿದರು. ಬಳಿಕ ತಮ್ಮದೇ ʼದ್ವಾರಕೀಶ್ʼ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ತಮ್ದದೇ ಬ್ಯಾನರ್ನಡಿ ʼಮೇಯರ್‌ ಮತ್ತಣ್ಣʼ ಚಿತ್ರವನ್ನು ನಿರ್ಮಾಣ ಮಾಡಿದರು. ರಾಜ್‌ಕುಮಾರ್‌ ಅಭಿನಯದ ಈ ಚಿತ್ರದ ಮೂಲಕ ಸಿದ್ದಲಿಂಗಯ್ಯ ಅವರನ್ನು ನಿರ್ದೇಶಕರಾಗಿ ಪರಿಚಯಿಸಿದರು.

ವಿನೋದ್‌ರಾಜ್‌, ಶ್ರುತಿ, ಸುನಿಲ್ ಮತ್ತು ತಮ್ಮ ಮಕ್ಕಳಾದ ಗಿರಿ, ಅಭಿಲಾಷ್‌ ಸೇರಿದಂತೆ ಹಲವು ಮಂದಿ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ದ್ವಾರಕೀಶ್‌ ಅವರದ್ದು. ದಿಗ್ಗಜ ಗಾಯಕ ಕಿಶೋರ್ ಕುಮಾರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದ ಕನ್ನಡದ ಮೊದಲ ನಿರ್ಮಾಪಕ ದ್ವಾರಕೀಶ್ ಮತ್ತು ಕಿಶೋರ್ ಹಾಡಿರುವ ʼಆಡು ಆಟ ಆಡು..ʼ ಹಾಡು ಇಂದಿಗೂ ಕನ್ನಡ ಪ್ರೇಕ್ಷಕರ ಮೆಚ್ಚಿನ ಗೀತೆಯಾಗಿದೆ.

ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು. ಇನ್ನು ದ್ವಾರಕೀಶ್-ವಿಷ್ಣುವರ್ಧನ್ ಸ್ನೇಹಿತರಾಗಿದ್ದೂ, ದ್ವಾರಕೀಶ್ ನಿರ್ಮಿಸಿ, ನಿರ್ದೇಶಿಸಿದ ಸಿನಿಮಾಗಳಲ್ಲಿ ವಿಷ್ಣುವರ್ಧನ್ ಇರಲೇ ಬೇಕಿತ್ತು. ವಿಷ್ಣುವರ್ಧನ್-ದ್ವಾರಕೀಶ್ ಜೊತೆಯಾಗಿದ್ದ ಬಹುತೇಕ ಸಿನಿಮಾಗಳು ಗೆದ್ದಿವೆ. ಪತ್ರಿಕೆಯೊಂದರಲ್ಲಿ ಪ್ರಕಟವಾಗದ ವಿಷ್ಣವರ್ಧನ್ ಅವರ ಸಂದರ್ಶನವೊಂದು ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ನಡುವೆ ಕೆಲಕಾಲ ಬಿರುಕು ತಂದಿತ್ತು. ಮುಂದೆ ದ್ವಾರಕೀಶ್ ನಿರ್ದೇಶಿಸಿದ ಮೊದಲ ಚಿತ್ರ ʼನೀ ಬರೆದ ಕಾದಂಬರಿʼ ವೇಳೆ ಸರಿಹೋಯಿತು.

ರಾಜ ಕುಳ್ಳ ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಸಿನಿಮಾ

ದ್ವಾರಕೀಶ್ ತಮ್ಮ ಸಿನಿಮಾಗಳಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದ್ದರು. ಮೊದಲ ಬಾರಿಗೆ ಸಿಂಗಾಪೂರದಲ್ಲಿ ರಾಜ ಕುಳ್ಳ ಸಿನಿಮಾವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಿದರು. ಈ ಚಲನಚಿತ್ರ ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ಬಾರಿಗೆ ವಿದೇಶದಲ್ಲಿ ಚಿತ್ರಿಸಿದ ಕನ್ನಡ ಚಿತ್ರ ʼಸಿಂಗಾಪುರದಲ್ಲಿ ರಾಜಾಕುಳ್ಳ, ಮೊದಲ ಬಾರಿ ಲಂಡನ್‌ನಲ್ಲಿ ಹಾಡುಗಳ ರೆಕಾರ್ಡ್‌ ಹೀಗೆ ಹಲವು ದಾಖಲೆಗಳನ್ನು ದ್ವಾರಕೀಶ್ ತಮ್ಮ ಜೋಳಿಗೆಗೆ ತುಂಬಿಕೊಂಡಿದ್ದಾರೆ.

ಹಿಂದಿ, ತಮಿಳು, ತೆಲುಗು ಸಿನಿಮಾ ನಿರ್ಮಾಣ

ಕನ್ನಡದ ಜತೆಗೆ ಹಿಂದಿ, ತಮಿಳು, ತೆಲುಗು ಸಿನಿಮಾಗಳನ್ನೂ ನಿರ್ಮಾಣ ಮಾಡಿದ ಕೀರ್ತಿ ಇವರದ್ದು. ʼಆಪ್ರೀಕಾದಲ್ಲಿ ಶೀಲಾʼ ಸಿನಿಮಾ ಸೋಲಿನ ಬಳಿಕ ದ್ವಾರಕೀಶ್ ಹಲವು ವರ್ಷಗಳ ನಂತರ ಬಂದ ʼಆಪ್ತಮಿತ್ರʼ ಚಿತ್ರದಲ್ಲಿ ಗೆಲುವು ಕಂಡರು. ಆದರೆ ತಮ್ಮ ಬ್ಯಾನರಡಿಯಲ್ಲಿ ನಿರ್ಮಾಣವಾದ ಶಿವಣ್ಣ ಅಭಿನಯದ ʼಆಯುಷ್ಮಾನ್ ಭವʼ ಚಿತ್ರದ ಸೋಲು ಅವರನ್ನು ಬೆಂಗಳೂರಿನ ಮನೆಯನ್ನು ಮಾರುವಂತೆ ಮಾಡಿತ್ತು. ಚೆನ್ನೈ, ಬೆಂಗಳೂರಿನ ಎನ್ ಆರ್ ಕಾಲೋನಿ, ಸದಾಶಿವನಗರ, ಎಚ್ ಎಸ್ ಆರ್ ಬಡಾವಣೆಗಳ ಮನೆಗಳನ್ನು ಸಿನಿಮಾ ಕಾರಣಕ್ಕಾಗಿ ದ್ವಾರಕೀಶ್ ಮಾರಾಟ ಮಾಡಿದ್ದರು.

ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದ ದ್ವಾರಕೀಶ್ ಎಲ್ಲಾ ಮನೆಗಳನ್ನೂ ಮಾರಿದರೂ ಮಾರಲಾಗದ ಮನೆ ಮಂತ್ರಾಲಯದಲ್ಲಿದೆ ಎನ್ನುತ್ತಿದ್ದವರು ಇಂದು ಎಲ್ಲವನ ತೊರೆದು ಇಹಲೋಕಕ್ಕೆ ತೆರಳಿದ್ದಾರೆ.

ತೊಂಬ್ಬತ್ತರ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕನ್ನಡ ಚಿತ್ರರಂಗದಲ್ಲಿ ಈಗ ಸೂತಕದ ಛಾಯೆ. ಸುಮಾರು ಆರು ದಶಕಗಳ ಕಾಲ ಕನ್ನಡಕಷ್ಟೇ ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ದ್ವಾರಕೀಶ್ ಇನ್ನು ಕೇವಲ ನೆನಪು ಮಾತ್ರ…

Read More
Next Story