
ತಮಿಳಿಗೆ ಹೊರಟ ‘ದುನಿಯಾ’ ವಿಜಯ್; ನಯನತಾರಾ ಎದುರು ವಿಲನ್
ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಹೋಗಿದ್ದರು ‘ದುನಿಯಾ’ ವಿಜಯ್. ಇದೀಗ ಅವರು ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್ 2’ ಚಿತ್ರದಲ್ಲಿ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
2020ರಲ್ಲಿ ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್’ ಚಿತ್ರವು ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಈಗ ‘ಮೂಕುತಿ ಅಮ್ಮನ್ 2’ ಚಿತ್ರವನ್ನು ಸಿ. ಸುಂದರ್ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ನಯನತಾರಾ ಮುಂದುವರೆಯುವುದರ ಜೊತೆಗೆ ರೆಜಿನಾ ಕಸಾಂಡ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಎದುರು ನೆಗೆಟಿವ್ ಪಾತ್ರದಲ್ಲಿ ವಿಜಯ್ ನಟಿಸುತ್ತಿರುವುದು ವಿಶೇಷ. ಮೊದಲ ಚಿತ್ರವನ್ನು ನಿರ್ಮಿಸಿದ್ದ ಐಶಾರಿ ಗಣೇಶ್, ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ.

ಶುಕ್ರವಾರ, ಚೆನ್ನೈನಲ್ಲಿ ಚಿತ್ರದ ಮುಹೂರ್ತ ನಡೆದಿದ್ದು, ಈ ಮುಹೂರ್ತದಲ್ಲಿ ವಿಜಯ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಯನತಾರಾ, ಖುಷ್ಬೂ, ಮೀನಾ, ರೆಜಿನಾ, ಯೋಗಿ ಬಾಬು, ಸುಂದರ್ ಸಿ ಮುಂತಾದವರು ಭಾಗವಹಿಸಿದ್ದರು. ಚಿತ್ರದ ಮುಹೂರ್ತವಾಗಿದ್ದು, ಚಿತ್ರೀಕರಣ ಯಾವಾಗಿನಿಂದ ಪ್ರಾರಂಭವಾಗುತ್ತದೆ, ಚಿತ್ರದಲ್ಲಿ ವಿಜಯ್ ಪಾತ್ರ ಏನಾಗಿರುತ್ತದೆ ಎಂಬ ವಿಷಯಗಳು ಇನ್ನಷ್ಟು ಗೊತ್ತಾಗಬೇಕಿದೆ.

ವಿಜಯ್ ಸದ್ಯ ‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ ನಟಿಸುತ್ತಿದ್ದು, ಇದರ ಜೊತೆಗೆ ‘ಸಿಟಿ ಲೈಟ್ಸ್’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಮತ್ತು ವಿಜಯ್ ಮಗಳು ಮೊನೀಷಾ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, ಎಸ್. ನಾರಾಯಣ್ ನಿರ್ದೇಶನದ ‘ಮಾರುತ’ ಚಿತ್ರದಲ್ಲೂ ವಿಜಯ್ ನಟಿಸಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.