ಹೊಸಬರ ಜೊತೆಗೆ ನಿಂತ ‘ದುನಿಯಾ’ ವಿಜಯ್; ಸದ್ಯದಲ್ಲೇ ಹೊಸ ಚಿತ್ರ ಘೋಷಣೆ
ನಟ-ನಿರ್ದೇಶಕ ‘ದುನಿಯಾ’ ವಿಜಯ್ ಅವರಿಗೆ ನಿರ್ಮಾಣ ಹೊಸದೇನಲ್ಲ. ಅವರು ಪುನಃ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಯೋಚನೆ ಮಾಡಿದ್ದು, ಸದ್ಯದಲ್ಲೇ ಒಂದಿಷ್ಟು ಹೊಸಬರ ಚಿತ್ರಗಳನ್ನು ನಿರ್ಮಿಸುವ ಯೋಚನೆಯಲ್ಲಿದ್ದಾರೆ.
ನಟ-ನಿರ್ದೇಶಕ ‘ದುನಿಯಾ’ ವಿಜಯ್ ಅವರಿಗೆ ನಿರ್ಮಾಣ ಹೊಸದೇನಲ್ಲ. 2013ರಲ್ಲಿ ಬಿಡುಗಡೆಯಾದ ‘ಜಯಮ್ಮನ ಮಗ’ ಚಿತ್ರವನ್ನು ದುನಿಯಾ ಟಾಕೀಸ್ ಸಂಸ್ಥೆಯಡಿ ನಿರ್ಮಿಸುವ ಮೂಲಕ ಅವರು ನಿರ್ಮಾಪಕರಾದರು. ನಂತರ ‘ಜಾನಿ ಜಾನಿ ಎಸ್ ಪಾಪ’ ಎಂಬ ಚಿತ್ರವನ್ನೂ ನಿರ್ಮಿಸಿದ್ದರು. ಆ ನಂತರ ಅವರು ಚಿತ್ರ ನಿರ್ಮಾಣದಿಂದ ದೂರವೇ ಇದ್ದಾರೆ. ಇದೀಗ ಅವರು ಪುನಃ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಯೋಚನೆ ಮಾಡಿದ್ದು, ಸದ್ಯದಲ್ಲೇ ಒಂದಿಷ್ಟು ಹೊಸಬರ ಚಿತ್ರಗಳನ್ನು ನಿರ್ಮಿಸುವ ಯೋಚನೆಯಲ್ಲಿದ್ದಾರೆ. ಸದ್ಯದಲ್ಲೇ ಈ ಕುರಿತು ಇನ್ನಷ್ಟು ಮಾಹಿತಿ ನೀಡುವುದಾಗಿ ಹೇಳುತ್ತಾರೆ.
ಸದ್ಯ, ‘ಲವ್ ರೆಡ್ಡಿ’ ಎಂಬ ಚಿತ್ರವನ್ನು ‘ದುನಿಯಾ’ ವಿಜಯ್, ಕನ್ನಡದಲ್ಲಿ ಅರ್ಪಿಸುತ್ತಿದ್ದಾರೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ತೆಲುಗು ಅವತರಣಿಕೆಯು ತೆಲುಗಿನಲ್ಲಿ ಬಿಡುಗಡೆಯಾಗಿದ್ದು, ಪ್ರಭಾಸ್, ರಾಮ್ ಗೋಪಾಲ್ ವರ್ಮ ಮುಂತಾದವರು ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ. ಈಗ ಈ ಚಿತ್ರದ ಕನ್ನಡ ಅವತರಣಿಕೆಯು ನವೆಂಬರ್ 22ರಂದು ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ‘ದುನಿಯಾ’ ವಿಜಯ್ ಅರ್ಪಿಸಿದರೆ, ಹೊಂಬಾಳೆ ಫಿಲಂಸ್ ಸಂಸ್ಥೆಯು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದೆ.
‘ಲವ್ ರೆಡ್ಡಿ’ ಚಿತ್ರವನ್ನು ಅರ್ಪಿಸುತ್ತಿರುವುದಕ್ಕೆ ಕಾರಣ ನೀಡಿದ ‘ದುನಿಯಾ’ ವಿಜಯ್’, ‘ನನಗೆ ‘ಸಲಗ’ ಮತ್ತು ‘ಭೀಮ’ ಚಿತ್ರಗಳನ್ನು ಮಾಡಿದ ನಂತರ ನನ್ನ ಮೇಲೆ ನಂಬಿಕೆ ಬಂತು. ಈಗ ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ಹೊಸಬರ ಚಿತ್ರಗಳನ್ನು ನಿರ್ಮಿಸುವ ಯೋಚನೆ ಇದೆ. ಮೊದಲ ಹಂತವಾಗಿ ಈ ಚಿತ್ರವನ್ನು ಅರ್ಪಿಸುತ್ತಿದೇನೆ. ಮಗಳ ಚಿತ್ರವನ್ನೂ ನಿರ್ಮಿಸುವ ಯೋಚನೆಯೂ ಇದೆ’ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ತಮ್ಮ ಮಗಳು ಮೊನಿಷಾ ಅಭಿನಯದಲ್ಲಿ ‘ಸಿಟಿ ಲೈಟ್ಸ್’ ಎಂಬ ಚಿತ್ರ ಘೋಷಿಸಿದ್ದರು ‘ದುನಿಯಾ’ ವಿಜಯ್. ಈ ಚಿತ್ರಕ್ಕೆ ವಿನಯ್ ರಾಜಕುಮಾರ್ ನಾಯಕರಾಗಿ ಆಯ್ಕೆಯಾಗಿದ್ದರು. ಈ ಚಿತ್ರವನ್ನು ಯಾರು ನಿರ್ಮಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ. ಈಗ ಈ ಚಿತ್ರವನ್ನು ‘ದುನಿಯಾ’ ವಿಜಯ್ ತಮ್ಮ ನಿರ್‍ಮಾಣ ಸಂಸ್ಥೆಯಡಿ ನಿರ್ಮಿಸುವ ಸಾಧ್ಯತೆ ಇದೆಯಂತೆ. ಇದಲ್ಲದೆ ಹೊಸಬರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್ನಷ್ಟು ಚಿತ್ರಗಳನ್ನು ಅವರು ಕಡಿಮೆ ಬಜೆಟ್ ಚಿತ್ರಗಳನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಲವ್ ರೆಡ್ಡಿ’ ಗಡಿನಾಡ ಕನ್ನಡಿಗರು ಸೇರಿ ನಿರ್ಮಿಸಿರುವ ಚಿತ್ರ. ಈ ಚಿತ್ರವನ್ನು ಹೈದರಾಬಾದ್‍ನ ಸ್ಮರಣ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಿಕ್ಕಂತೆ ನಾಯಕ ಅಂಜನ್ ರೆಡ್ಡಿ, ನಾಯಕಿ ಶ್ರಾವಣಿ, ನಾಯಕಿಯ ತಂದೆ ಪಾತ್ರ ಮಾಡಿರುವ ರಾಮಸ್ವಾಮಿ ಎಲ್ಲರೂ ಕನ್ನಡದವರೇ. ಅಂಜನ್ ಕುಟುಂಬದವರು ಮತ್ತು ಸ್ನೇಹಿತರು ಸೇರಿ, ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಗೇಪಲ್ಲಿಯಲ್ಲಿ ನಡೆದ ನೈಜ ಘಟನೆಯೊಂದನ್ನಾಧರಿಸಿ ಚಿತ್ರ ಮಾಡಲಾಗಿದೆ.
‘ಲವ್ ರೆಡ್ಡಿ’ ಚಿತ್ರ ನೋಡಿ ಅದರ ಗುಂಗಿನಿಂದ ಇನ್ನೂ ಹೊರಬರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದ ವಿಜಯ್, ‘ಇಂಥದ್ದೊಂದು ಕಥೆ ನನ್ನ ನಿರ್ಮಾಣ ಸಂಸ್ಥೆಗೆ ಸಿಗಬಾರದಿತ್ತಾ ಎಂದನಿಸುತ್ತದೆ. ಇದು ಪ್ರತಿಯೊಬ್ಬರ ಮನೆಯಲ್ಲೂ ನಡೆಯುವ ಕಥೆ. ಇಂಥ ಚಿತ್ರಗಳು ಗೆಲ್ಲಬೇಕು. ಇನ್ನು ಮುಂದೆ ಹೊಸ ತಂಡಗಳ ಚಿತ್ರಗಳನ್ನು ನಿರ್ಮಿಸುವ ಯೋಚನೆ ಇದೆ. ಹೊಸಬರು ಯಾರೇ ಬರಲಿ, ಅರ್ಹರಿಗೆ ನ್ಯಾಯ ಸಿಗಬೇಕು’ ಎಂದರು.
‘ಲವ್ ರೆಡ್ಡಿ’ ಚಿತ್ರಕ್ಕೆ ಪ್ರಿನ್ಸ್ ಹೆನ್ರಿ ಸಂಗೀತ ಸಂಯೋಜಿಸಿದ್ದು, ವರದರಾಜ್ ಚಿಕ್ಕಬಳ್ಳಾಪುರ ಸಂಭಾಷಣೆ ಮತ್ತು ಸಾಹಿತ್ಯವನ್ನು ರಚಿಸಿದ್ದಾರೆ.