ಡಾ.ರಾಜ್‌ಕುಮಾರ್‌ ಪ್ರಶಸ್ತಿ| ಸಾ.ರಾ. ಗೋವಿಂದು, ಡಾ. ಜಯಮಾಲಾಗೆ ನಿರ್ಮಾಣ ನಿರ್ವಾಹಕರ ಸಂಘದಿಂದ ಸನ್ಮಾನ
x

ಡಾ. ರಾಜಕುಮಾರ್ ಪ್ರಶಸ್ತಿ ಪುರಸ್ಕೃತರಿಗೆ ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘದಿಂದ ವಿಶೇಷ ಗೌರವ ಸಮರ್ಪಣೆ

ಡಾ.ರಾಜ್‌ಕುಮಾರ್‌ ಪ್ರಶಸ್ತಿ| ಸಾ.ರಾ. ಗೋವಿಂದು, ಡಾ. ಜಯಮಾಲಾಗೆ ನಿರ್ಮಾಣ ನಿರ್ವಾಹಕರ ಸಂಘದಿಂದ ಸನ್ಮಾನ

ಹಿರಿಯ ನಿರ್ಮಾಪಕರು ಮಾತ್ರವಲ್ಲದೆ, ಕನ್ನಡ ಚಳವಳಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಕನ್ನಡ ನಾಡು ನುಡಿ ಜಲದ ರಕ್ಷಣೆಗೆ ದಶಕಗಳಿಂದ ಹೋರಾಡುತ್ತಾ ಬಂದಿದ್ದಾರೆ.


Click the Play button to hear this message in audio format

ಕನ್ನಡ ಚಲನಚಿತ್ರರಂಗಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು ಹಿರಿಯ ಚಲನಚಿತ್ರ ನಿರ್ಮಾಪಕ ಹಾಗೂ ಕನ್ನಡ ಪರ ಹೋರಾಟಗಾರ ಸಾ.ರಾ. ಗೋವಿಂದು ಮತ್ತು ಖ್ಯಾತ ನಟಿ, ಮಾಜಿ ಸಚಿವೆ ಡಾ. ಜಯಮಾಲಾ ಅವರಿಗೆ ಪ್ರತಿಷ್ಠಿತ ‘ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿʼ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ಮಾಣ ನಿರ್ವಾಹಕ ಸಂಘವು ವಿಶೇಷ ಸಮಾರಂಭವನ್ನು ಆಯೋಜಿಸಿತ್ತು. ಕನ್ನಡ ಚಿತ್ರರಂಗದ ಬೆನ್ನೆಲುಬಾಗಿ ಕೆಲಸ ಮಾಡುವ ನಿರ್ಮಾಣ ನಿರ್ವಾಹಕರ ಸಂಘದ ವತಿಯಿಂದ ಸಾ.ರಾ. ಗೋವಿಂದು ಮತ್ತು ಡಾ. ಜಯಮಾಲಾ ಸಲ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಸಂಘದ ಪದಾಧಿಕಾರಿಗಳು ಸಾಧಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ರಂಗದ ಗಣ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು, ಪ್ರಶಸ್ತಿ ವಿಜೇತರಿಗೆ ಶುಭ ಹಾರೈಸಿದರು.

2020ನೇ ಸಾಲಿನ ಡಾ.ರಾಜ್​ಕುಮಾರ್ ಪ್ರಶಸ್ತಿಯನ್ನು ಹಿರಿಯ ನಟಿ ಡಾ.ಜಯಮಾಲಾ ಅವರಿಗೆ ಮತ್ತು 2021ನೇ ಸಾಲಿನ ಡಾ.ರಾಜ್​​ಕುಮಾರ್ ಪ್ರಶಸ್ತಿಯನ್ನು ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಅವರಿಗೆ ಘೋಷಿಸಲಾಗಿದ್ದು, ಇಬ್ಬರಿಗೂ 5 ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಪದಕವನ್ನು ನೀಡಲಾಗುತ್ತದೆ.

ಎರಡೂ ವರ್ಷಗಳ ಪುಟ್ಟಣ್ಣ ಕಣಗಾಲ್‍ ಮತ್ತು ಡಾ.ವಿಷ್ಣುವರ್ಧನ್‍ ಪ್ರಶಸ್ತಿಗಳನ್ನೂ ಸಹ ಘೋಷಿಸಲಾಗಿದೆ. 2020 ಮತ್ತು 2021ನೇ ಸಾಲಿನ ಪುಟ್ಟಣ್ಣ ಕಣಗಾಲ್‍ ಪ್ರಶಸ್ತಿಯನ್ನು ಕ್ರಮವಾಗಿ ಹಿರಿಯ ನಿರ್ದೇಶಕ ಎಂ.ಎಸ್‍.ಸತ್ಯು ಮತ್ತು ಶಿವರುದ್ರಯ್ಯ ಅವರಿಗೆ, ಡಾ.ವಿಷ್ಣುವರ್ಧನ್‍ ‍ಪ್ರಶಸ್ತಿಯನ್ನು ಪ್ರಗತಿ ಅಶ್ವತ್ಥನಾರಾಯಣ್‍ ಮತ್ತು ಹಿರಿಯ ನಟ ಎಂ.ಕೆ.ಸುಂದರ್ ರಾಜ್‍ ಅವರಿಗೆ ನೀಡಲಾಗಿದೆ.

ಡಾ.ಜಯಮಾಲಾ ಅವರು ಡಾ.ರಾಜ್​​ಕುಮಾರ್ ಜೊತೆಗೆ ಪ್ರೇಮದ ಕಾಣಿಕೆ, ಬಡವರ ಬಂಧು, ಶಂಕರ್ ಗುರು ಸೇರಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ತೆರೆಹಂಚಿಕೊಂಡಿದ್ದರು. ಇನ್ನೂ, ಸಾ.ರಾ.ಗೋವಿಂದು ಅವರು ಡಾ.ರಾಜ್​ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದರು.

ಕನ್ನಡ ಚಲನಚಿತ್ರರಂಗಕ್ಕೆ ಸಮಗ್ರ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಪ್ರತಿ ವರ್ಷ 'ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ'ಯನ್ನು ಪ್ರದಾನ ಮಾಡುತ್ತಿದೆ. ಇದು ಸ್ಯಾಂಡಲ್‌ವುಡ್‌ನ ಅತ್ಯಂತ ಪ್ರತಿಷ್ಠಿತ ಗೌರವಗಳಲ್ಲಿ ಒಂದಾಗಿದ್ದು, ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿದ ಹಿರಿಯ ಸಾಧಕರಿಗೆ ಇದನ್ನು ನೀಡಲಾಗುತ್ತದೆ.

ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು 1993ರಲ್ಲಿ ಸ್ಥಾಪಿಸಲಾಯಿತು. ಚಿತ್ರರಂಗದ ಏಳಿಗೆಗಾಗಿ ಶ್ರಮಿಸಿದ ನಟರು, ನಿರ್ಮಾಪಕರು ಅಥವಾ ತಾಂತ್ರಿಕ ವರ್ಗದವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಗೌರವಕ್ಕೆ ಪಾತ್ರರಾದ ಮೊದಲ ವ್ಯಕ್ತಿ ಹಿರಿಯ ನಟ ಕೆ.ಎಸ್. ಅಶ್ವತ್ಥ್ ಅವರು. ಅಂದಿನಿಂದ ಇಂದಿನವರೆಗೆ ಚಿತ್ರರಂಗದ ಅನೇಕ ಮಹನೀಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಪ್ರಶಸ್ತಿಯು ಅತ್ಯಂತ ಮೌಲ್ಯಯುತವಾಗಿದ್ದು, ಪುರಸ್ಕೃತರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ 50 ಗ್ರಾಂ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುತ್ತದೆ.

ಇತ್ತೀಚೆಗೆ ರಾಜ್ಯ ಸರ್ಕಾರವು ಬಾಕಿ ಉಳಿದಿದ್ದ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದ್ದು, 2020ನೇ ಸಾಲಿನ ಪ್ರಶಸ್ತಿಗೆ ಹಿರಿಯ ನಟಿ ಡಾ. ಜಯಮಾಲಾ ಹಾಗೂ 2021ನೇ ಸಾಲಿನ ಪ್ರಶಸ್ತಿಗೆ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಅವರು ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ 2019ನೇ ಸಾಲಿನಲ್ಲಿ ಹಿರಿಯ ನಟಿ ಉಮಾಶ್ರೀ ಅವರಿಗೆ ಈ ಗೌರವ ಸಂದಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ.

Read More
Next Story