
ʻAʼ ಸಿನಿಮಾ ಮರು ಬಿಡುಗಡೆ ಬೆನ್ನಲ್ಲೇ ನಟಿ ಚಾಂದಿನಿ ಪ್ರತಿಕ್ರಿಯೆ
‘A’ ಚಿತ್ರದ ಮುಂದುವರೆದ ಭಾಗ ಮಾಡುವುದಕ್ಕೆ ತೀರ್ಮಾನ ಮಾಡಿದ್ದೇನೆ. ಕಥೆ ಮತ್ತು ಚಿತ್ರಕಥೆಯನ್ನು ನಾನೇ ಬರದಿದ್ದೇನೆ.
ಉಪೇಂದ್ರ ನಾಯಕರಾಗಿ ನಟಿಸಿ, ನಿರ್ದೇಶಿಸಿದ್ದ "A" ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ತೆರೆಕಂಡು 26 ವರ್ಷಗಳಾಗಿದೆ. ಕಳೆದವಾರ ಈ ಚಿತ್ರ ಕರ್ನಾಟಕದಾದ್ಯಂತ ರೀ ರಿಲೀಸ್ ಕೂಡ ಆಗಿ ಜನರ ಮನ ಗೆಲ್ಲುತ್ತಿದೆ. ಈ ಸಂತಸವನ್ನು ನಾಯಕಿ ಚಾಂದಿನಿ ಸೇರಿದಂತೆ "A" ಚಿತ್ರತಂಡದ ಸದಸ್ಯರು ಮಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
26 ವರ್ಷಗಳ ಹಿಂದೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಚಿತ್ರ ಉಪೇಂದ್ರ ನಿರ್ದೇಶನದ "A" ಎಂದು ಮಾತನಾಡಿದ ನಾಯಕಿ ಚಾಂದಿನಿ, ಈ ಚಿತ್ರ ಇತ್ತೀಚೆಗೆ ರೀ ರಿಲೀಸ್ ಆಗಿ ಯಶಸ್ಚಿ ಪ್ರದರ್ಶನ ಕಾಣುತ್ತಿದೆ. ಬಹಳ ಸಂತೋಷವಾಗಿದೆ. ಈ ಚಿತ್ರಕ್ಕೆ ನಾನು ನಾಯಕಿಯಾಗಿ ಆಯ್ಕೆಯಾಗಿದ್ದು ನಿಜಕ್ಕೂ ಆಶ್ಚರ್ಯ. ನಾನು ಆಗ ಓದುತ್ತದೆ. ನ್ಯೂಯಾರ್ಕ್ ನಲ್ಲಿದೆ. ನನ್ನ ಫೋಟೊ ನೋಡಿದ ಉಪೇಂದ್ರ ಅವರು ನಾಯಕಿಯಾಗಿ ಆಯ್ಕೆ ಮಾಡಿದರು. ನಿಜವಾಗಲೂ ಉಪೇಂದ್ರ ಅವರು ಬರೀ ಕರ್ನಾಟಕ ಅಷ್ಟೇ ಅಲ್ಲ. ಇಡೀ ದೇಶ ಕಂಡ ಅತ್ಯಂತ ಪ್ರತಿಭಾವಂತ ನಿರ್ದೇಶಕ. ಅವರಿಂದ ಮೊದಲ ಚಿತ್ರದಲ್ಲೇ ನಾನು ಸಾಕಷ್ಟು ಕಲಿತಿದ್ದೇನೆ. ಮೊದಲ ಚಿತ್ರದ ಚಿತ್ರೀಕರಣದ ಅನುಭವ ಈಗಲೂ ಕಣ್ಣ ಮುಂದೆ ಇದೆ. ನಾನು "A" ಚಿತ್ರದ ನಂತರ ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನನ್ನನ್ನು ಎಲ್ಲರೂ ಗುರುತಿಸುವುದು "A" ಚಿತ್ರದ ನಾಯಕಿ ಅಂತ. ಅಷ್ಟು ಹೆಸರು ತಂದುಕೊಟ್ಟಿದೆ ನನಗೆ ಈ ಚಿತ್ರ. ಈ ಸಂದರ್ಭದಲ್ಲಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಮಾತು ಮುಂದುವರಿಸಿದ ಚಾಂದಿನಿ, ಮತ್ತೊಂದು ಮುಖ್ಯವಾದ ವಿಷಯವೆಂದರೆ ಈ ಜನಪ್ರಿಯ ಚಿತ್ರವನ್ನು ಇನ್ನಷ್ಟು ಮುಂದುವರೆಸುವುದು ನನ್ನ ಹಂಬಲ. ಹಾಗಾಗಿ ‘A’ ಚಿತ್ರದ ಮುಂದುವರೆದ ಭಾಗ ಮಾಡುವುದಕ್ಕೆ ತೀರ್ಮಾನ ಮಾಡಿದ್ದೇನೆ. ಕಥೆ ಮತ್ತು ಚಿತ್ರಕಥೆಯನ್ನು ನಾನೇ ಬರದಿದ್ದೇನೆ. ನಿರ್ಮಾಪಕ ಮಂಜುನಾಥ್, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದವರು ಜೊತೆಗಿದ್ದಾರೆ. ಇನ್ನೊಂದು ವಿಷಯ ಬಾಕಿ ಇದೆ. ನಾವೆಲ್ಲರೂ ಹೋಗಿ ಉಪೇಂದ್ರ ಅವರ ಬಳಿ ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಹಾಗೂ ನಾಯಕರಾಗೂ ನಟಿಸಬೇಕು ಎಂದು ಮನವಿ ಮಾಡುವುದು. ಸದ್ಯದಲ್ಲೇ ಅವರನ್ನು ಭೇಟಿ ಮಾಡುತ್ತೇವೆ. ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಿನಿಮಾ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರ ಪ್ರಾರಂಭವಾಗಲಿದೆ. ಆ ಚಿತ್ರದಲ್ಲಿದ್ದ ಬಹುತೇಕ ಚಿತ್ರತಂಡದ ಸದಸ್ಯರು ಈ ಚಿತ್ರದಲ್ಲೂ ಇರುತ್ತಾರೆ ಎಂದರು.
ಚಿತ್ರ ಆರಂಭವಾದಗಿನಿಂದ ಹಿಡಿದು ಬಿಡುಗಡೆಯಾಗುವವರೆಗಿನ ಮಾಹಿತಿಯನ್ನು ನಿರ್ಮಾಪಕ ಮಂಜುನಾಥ್ ನೀಡಿದರು. ಹಾಡುಗಳ ಕುರಿತು ಗುರುಕಿರಣ್ ಮಾತನಾಡಿದರು. ವಿ.ಮನೋಹರ್, ಗುರುದತ್ತ್, ಲೋಕಿ, ರಾಜಾರಾಮ್, ಜೋಶಿ ಮುಂತಾದ ಚಿತ್ರತಂಡದ ಸದಸ್ಯರು ಹಾಗೂ ವಿತರಕ ಶಂಕರ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಉಪೇಂದ್ರ ಅವರು ವಿದೇಶದಲ್ಲಿರುವುದರಿಂದ ವಿಡಿಯೋ ಮೂಲಕ ಖುಷಿ ಹಂಚಿಕೊಂಡರು.