
ನಿರ್ದೇಶಕ ಅನುರಾಗ್ ಕಶ್ಯಪ್
ಅನುರಾಗ್ ಕಶ್ಯಪ್ ಹೊಸ ಚಿತ್ರ 'ನಿಶಾಂಚಿ' ಸೆಪ್ಟೆಂಬರ್ 19ರಂದು ಬಿಡುಗಡೆ
ಜಾರ್ ಪಿಕ್ಚರ್ಸ್, ಫ್ಲಿಪ್ ಫಿಲ್ಮ್ಸ್ ಮತ್ತು ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಇಂಡಿಯಾ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರ, ಸಿನೆಮಾ ಪ್ರೇಕ್ಷಕರ ಗಮನ ಸೆಳೆದಿದೆ.
ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುನಿರೀಕ್ಷಿತ ಚಿತ್ರ 'ನಿಶಾಂಚಿ' ಸೆಪ್ಟೆಂಬರ್ 19,ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಜಾರ್ ಪಿಕ್ಚರ್ಸ್, ಫ್ಲಿಪ್ ಫಿಲ್ಮ್ಸ್ ಮತ್ತು ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಇಂಡಿಯಾ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರ, ಸಿನೆಮಾ ಪ್ರೇಕ್ಷಕರ ಗಮನ ಸೆಳೆದಿದೆ.
ಈ ಚಿತ್ರದ ಮೂಲಕ, ನಟಿ ಐಶ್ವರ್ಯಾ ಠಾಕ್ರೆ ಅವರು ನಾಯಕಿಯಾಗಿ ಚಲನಚಿತ್ರ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅವರು ಬಬ್ಲು ಮತ್ತು ದಬ್ಲೂ ಎಂಬ ಅವಳಿ ಸಹೋದರಿಯರ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ವಿಭಿನ್ನ ಪಾತ್ರ ಮತ್ತು ಆಕರ್ಷಕ ನಟನೆಗೆ ಟ್ರೇಲರ್ ಬಿಡುಗಡೆಯಾದಂದಿನಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಐಶ್ವರ್ಯಾ ಪಾತ್ರದ ಕುರಿತು ಅನುರಾಗ್ ಕಶ್ಯಪ್ ಮೆಚ್ಚುಗೆ
ಇತ್ತೀಚೆಗೆ ಸಂದರ್ಶನವೊಂದರಲ್ಲಿ, ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಐಶ್ವರ್ಯಾ ಅವರ ಆಯ್ಕೆಯ ಬಗ್ಗೆ ಮತ್ತು ಅವರ ಕೆಲಸದ ಬಗ್ಗೆ ಮಾತನಾಡಿದರು. ಐಶ್ವರ್ಯಾ ಅವರ ಸಮರ್ಪಣೆ ಮತ್ತು ಬದ್ಧತೆ ತಮ್ಮನ್ನು ಅಚ್ಚರಿಗೊಳಿಸಿದೆ. ಐಶ್ವರ್ಯಾ ಪಾತ್ರಕ್ಕೆ ಬಂದ ತಕ್ಷಣ, ಅವರು ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರು ಕಾನ್ಪುರಕ್ಕೆ ಹೋಗಿ, ಅಲ್ಲಿನ ಭಾಷೆ ಮತ್ತು ಸಂಭಾಷಣೆಗಳನ್ನು ಕಲಿತುಕೊಂಡರು. ನಾನು ಕಲ್ಪಿಸಿಕೊಂಡ ಜಗತ್ತನ್ನು ಅವರು ನಿಜವಾಗಿಯೂ ಸ್ವೀಕರಿಸಿದರು ಎಂದು ಕಶ್ಯಪ್ ತಿಳಿಸಿದ್ದರು.
ಕಶ್ಯಪ್ ಅವರು ಐಶ್ವರ್ಯಾ ಅವರ ಕಠಿಣ ಪರಿಶ್ರಮದ ಬಗ್ಗೆಯೂ ವಿವರಿಸಿದರು. ಅವರು ಹಲವಾರು ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಸನ್ನಿವೇಶ, ಭಾಷೆ ಮತ್ತು ಪಾತ್ರಗಳ ನಡುವಿನ ಸಂಬಂಧಗಳ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ. ಬಬ್ಲು ಮತ್ತು ಡಬ್ಲೂ ಪಾತ್ರಗಳನ್ನು ಇಬ್ಬರು ಬೇರೆ ಬೇರೆ ನಟರು ನಿರ್ವಹಿಸಬೇಕೇ ಅಥವಾ ಒಬ್ಬರೇ ನಿರ್ವಹಿಸಬೇಕೇ ಎಂದು ನನಗೆ ಬಹಳ ದಿನಗಳ ಕಾಲ ಗೊಂದಲವಿತ್ತು. ಆದರೆ ಐಶ್ವರ್ಯಾ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ನೋಡಿದಾಗ, ಅವರೇ ಈ ಪಾತ್ರಕ್ಕೆ ಸೂಕ್ತ ಎಂದು ನನಗೆ ತಕ್ಷಣ ತಿಳಿದಿತ್ತು ಎಂದು ಕಶ್ಯಪ್ ಹಂಚಿಕೊಂಡಿದ್ದರು.
ಚಿತ್ರದ ಬಗ್ಗೆ
'ನಿಶಾಂಚಿ' ಚಿತ್ರವು ಎರಡು ವಿಭಿನ್ನ ಹಾದಿಯಲ್ಲಿರುವ ಸಹೋದರರ ಕಥೆಯನ್ನು ಹೇಳುತ್ತದೆ. ಅವರ ನಿರ್ಧಾರಗಳು ಅವರ ಭವಿಷ್ಯವನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ಚಿತ್ರ ವಿವರಿಸುತ್ತದೆ. ಈ ಚಿತ್ರದಲ್ಲಿ ಐಶ್ವರ್ಯಾ ಠಾಕ್ರೆ ಜೊತೆಗೆ ವೇದಿಕಾ ಪಿಂಟೊ, ಮೋನಿಕಾ ಪನ್ವರ್, ಮೊಹಮ್ಮದ್ ಜೀಶನ್ ಅಯ್ಯೂಬ್ ಮತ್ತು ಕುಮುದ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಹಳ್ಳಿ ಸೊಗಡಿನ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾ, ಆಕ್ಷನ್, ಹಾಸ್ಯ ಮತ್ತು ಡ್ರಾಮಾ ಮಿಶ್ರಿತವಾಗಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಅಜಯ್ ರೈ ಮತ್ತು ರಂಜನ್ ಸಿಂಗ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಪ್ರಸೂನ್ ಮಿಶ್ರಾ, ರಂಜನ್ ಚಂದೇಲ್ ಮತ್ತು ಅನುರಾಗ್ ಕಶ್ಯಪ್ ಜಂಟಿಯಾಗಿ ಬರೆದಿದ್ದಾರೆ.