
ಕಾಂತಾರ ಸಿನಿತಂಡದೊಂದಿಗೆ ಗಾಯಕ ದಿಲ್ಜಿತ್ ಸಿಂಗ್
‘ಕಾಂತಾರ: ಚಾಪ್ಟರ್ 1’ ಸಿನಿ ತಂಡದೊಂದಿಗೆ ಕೈಜೋಡಿಸಿದ ದಿಲ್ಜಿತ್ ದೊಸಾಂಜ್
ದಿಲ್ಜಿತ್ ದೋಸಾಂಜ್ ಮತ್ತು ರಿಷಬ್ ಶೆಟ್ಟಿ ಅವರ ಈ ಮೈತ್ರಿ, ಹೋಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ-ಅಧ್ಯಾಯ 1' ಚಿತ್ರಕ್ಕೆ ಹೊಸ ಸಂಗೀತದ ಸ್ಪರ್ಶ ನೀಡುವುದು ಖಚಿತ.
ರಾಷ್ಟ್ರಪ್ರಶಸ್ತಿ ವಿಜೇತ ನಟ-ಗಾಯಕ ದಿಲ್ಜಿತ್ ದೋಸಾಂಜ್, ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರೊಂದಿಗೆ 'ಕಾಂತಾರ-ಅಧ್ಯಾಯ 1'ರ ಸಂಗೀತ ಆಲ್ಬಂನಲ್ಲಿ ಕೈಜೋಡಿಸಿದ್ದಾರೆ.
ಈ ವಿಷಯವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದಿಲ್ಜಿತ್, 'ಕಾಂತಾರ' ಸಿನಿಮಾ ತಮ್ಮ ಮೇಲೆ ಮಾಡಿದ ಪರಿಣಾಮವನ್ನು ಸ್ಮರಿಸಿದ್ದಾರೆ. "ದೊಡ್ಡಣ್ಣ ರಿಷಬ್ ಶೆಟ್ಟಿ ಅವರಿಗೆ ನನ್ನ ಸಲಾಂ. ಅವರು ನಿಜಕ್ಕೂ ಒಂದು ಮಾಸ್ಟರ್‌ಪೀಸ್ ಚಿತ್ರವನ್ನು ನಿರ್ಮಿಸಿದ್ದಾರೆ. ಆ ಸಿನಿಮಾದೊಂದಿಗೆ ನನಗೆ ವೈಯಕ್ತಿಕ ನಂಟಿದೆ, ಅದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಚಿತ್ರಮಂದಿರದಲ್ಲಿ 'ವರಾಹ ರೂಪಂ' ಹಾಡು ಬಂದಾಗ, ಆನಂದ ಭಾಷ್ಪದಿಂದ ಕಣ್ಣು ತುಂಬಿಕೊಂಡಿದ್ದೆʼʼ ಎಂದು ಭಾವುಕರಾಗಿ ಬರೆದಿದ್ದಾರೆ.
ಅಕ್ಟೋಬರ್ 2 ರಂದು ಬಿಡುಗಡೆಯಾಗಲಿರುವ ಈ ಬಹು ನಿರೀಕ್ಷಿತ ಚಿತ್ರಕ್ಕಾಗಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೊಂದಿಗೆ ಕೆಲಸ ಮಾಡಿದ ಬಗ್ಗೆಯೂ ದಿಲ್ಜಿತ್ ಸಂತಸ ವ್ಯಕ್ತಪಡಿಸಿದ್ದಾರೆ. ಕೇವಲ ಒಂದೇ ದಿನದಲ್ಲಿ ಅವರಿಂದ ಸಾಕಷ್ಟು ಕಲಿತುಕೊಂಡೆ ಎಂದು ತಿಳಿಸಿದ್ದಾರೆ.
ದಿಲ್ಜಿತ್ ದೋಸಂಜ್ ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ದಿಲ್ಜಿತ್ ದೋಸಾಂಜ್ ಮತ್ತು ರಿಷಬ್ ಶೆಟ್ಟಿ ಅವರ ಈ ಮೈತ್ರಿ, ಹೋಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ-ಅಧ್ಯಾಯ 1' ಚಿತ್ರಕ್ಕೆ ಹೊಸ ಸಂಗೀತದ ಸ್ಪರ್ಶ ನೀಡುವುದು ಖಚಿತ.
'ಕಾಂತಾರ ಚಾಪ್ಟರ್ 1' ಅನ್ನು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. 2022ರಲ್ಲಿ ಬಿಡುಗಡೆಯಾದ 'ಕಾಂತಾರ' ಸಿನಿಮಾದ ಮುಂದುವರಿದ ಭಾಗ ಇದಾಗಿದೆ. ʻಕಾಂತಾರʼ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ದಾಖಲಿಸಿತು. ಹೀಗಾಗಿ 'ಕಾಂತಾರ ಚಾಪ್ಟರ್ 1' ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. 'ಕಾಂತಾರ-ಅಧ್ಯಾಯ 1' ಅಕ್ಟೋಬರ್ 2, 2025 ರಂದು ವಿಶ್ವಾದ್ಯಂತ ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.