
ಪುಷ್ಪ 2 ದಾಖಲೆಯೂ ಬ್ರೇಕ್... ರಣವೀರ್ ಸಿಂಗ್ ನಟನೆಯ ಧುರಂಧರ್ ಅಬ್ಬರ ಮತ್ತಷ್ಟು ಜೋರು
ಧುರಂಧರ್ ಸಿನಿಮಾ ಪುಷ್ಪ 2 ದಾಖಲೆ ಬ್ರೇಕ್ ಮಾಡಿದ ಧುರಂಧರ್ ಈಗ RRR ಮೈಲಿಗಲ್ಲಿನತ್ತ ದಾಪುಗಾಲು ಹಾಕುತ್ತಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ಹಾಗೂ ಆದಿತ್ಯ ಧಾರ್ ನಿರ್ದೇಶನದ ಸ್ಪೈ ಥ್ರಿಲ್ಲರ್ 'ಧುರಂಧರ್' ಬಾಕ್ಸ್ ಆಫೀಸ್‌ನಲ್ಲಿ ತನ್ನ ಜಯಭೇರಿ ಮುಂದುವರಿಸಿದೆ. ಬಿಡುಗಡೆಯಾಗಿ 32 ದಿನಗಳನ್ನು ಪೂರೈಸಿರುವ ಈ ಚಿತ್ರ, ಭಾರತದ ಸಾರ್ವಕಾಲಿಕ 5ನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆನ್ನಲ್ಲೇ ಇದೀಗ ವಿದೇಶಿ ಮಾರುಕಟ್ಟೆಯಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗದಿದ್ದರೂ ಸಹ, ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಟಾಪ್ 15 ಪಟ್ಟಿಗೆ ಧುರಂಧರ್ ಲಗ್ಗೆ ಇಟ್ಟಿದೆ.
ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ತನ್ನ ಐದನೇ ಸೋಮವಾರ ಅಂದರೆ 32ನೇ ದಿನದಂದು ಚಿತ್ರದ ಗಳಿಕೆಯಲ್ಲಿ ಮೊದಲ ಬಾರಿಗೆ ಭಾರಿ ಕುಸಿತ ಕಂಡುಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಶೇ. 65 ಹಾಗೂ ವಿದೇಶಗಳಲ್ಲಿ ಶೇ. 60 ರಷ್ಟು ಕುಸಿತ ಕಂಡ ಪರಿಣಾಮ, ಬಿಡುಗಡೆಯಾದ ನಂತರ ಮೊದಲ ಬಾರಿಗೆ ಚಿತ್ರದ ದಿನದ ಗಳಿಕೆ 10 ರೂ.ಕೋಟಿಗಿಂತ ಕೆಳಕ್ಕೆ ಇಳಿದಿದೆ. ಆದರೂ ಸಹ ಚಿತ್ರದ ಒಟ್ಟು ಮೊತ್ತ ಎಲ್ಲರನ್ನೂ ಅಚ್ಚರಿಗೊಳಪಡಿಸಿದೆ. ವಾಣಿಜ್ಯ ಮೂಲಗಳ ಪ್ರಕಾರ ಭಾರತದಲ್ಲಿ ಈವರೆಗೆ 776.75 ಕೋಟಿ ರೂ.ನೆಟ್ (932 ರೂ.ಕೋಟಿ ಗ್ರಾಸ್) ಗಳಿಕೆಯಾಗಿದೆ. ಆದರೆ ಚಿತ್ರದ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ಪ್ರಕಾರ, ಧುರಂಧರ್ ಈಗಾಗಲೇ ಭಾರತದಲ್ಲಿ 800 ಕೋಟಿ ರೂ. ನೆಟ್ ಗಳಿಕೆ ಮಾಡಿದ ಮೊದಲ ಬಾಲಿವುಡ್ ಚಿತ್ರ ಎಂಬ ಇತಿಹಾಸ ನಿರ್ಮಿಸಿದೆ.
RRR ದಾಖಲೆ ಮುರಿಯುವತ್ತ ಹೆಜ್ಜೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ 31 ಮಿಲಿಯನ್ ಡಾಲರ್ ಅಧಿಕ ಮೊತ್ತವನ್ನು ಬಾಚಿಕೊಂಡಿರುವ ಈ ಚಿತ್ರದ ಒಟ್ಟು ವಿಶ್ವದಾದ್ಯಂತದ ಗಳಿಕೆ 1215 ಕೋಟಿ ರೂ.ತಲುಪಿದೆ. ಈ ಮೂಲಕ ಎಸ್.ಎಸ್. ರಾಜಮೌಳಿ ಅವರ 'RRR' ಚಿತ್ರದ 1230 ಕೋಟಿ ರೂ.ದಾಖಲೆಯನ್ನು ಮುರಿಯಲು ಧುರಂಧರ್ ಸಜ್ಜಾಗಿದೆ. ಬುಧವಾರದ ವೇಳೆಗೆ ಈ ದಾಖಲೆಯನ್ನು ಚಿತ್ರ ಮೀರಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪುಷ್ಪ 2 ಮತ್ತು ಸುಲ್ತಾನ್ ದಾಖಲೆ ಧೂಳಿಪಟ
ವಿದೇಶಿ ಗಳಿಕೆಯಲ್ಲಿ ಈ ಚಿತ್ರವು ಅಲ್ಲು ಅರ್ಜುನ್ ಅವರ 'ಪುಷ್ಪ 2: ದಿ ರೂಲ್' (31 ಮಿಲಿಯನ್ ಡಾಲರ್) ಮತ್ತು ಸಲ್ಮಾನ್ ಖಾನ್ ಅವರ 'ಸುಲ್ತಾನ್' (29.8 ಮಿಲಿಯನ್ ಡಾಲರ್) ಚಿತ್ರಗಳ ಜೀವಿತಾವಧಿಯ ವಿದೇಶಿ ಗಳಿಕೆಯನ್ನು ಹಿಂದಿಕ್ಕಿದೆ. ಒಂದು ವೇಳೆ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದರೆ ಈ ಗಳಿಕೆ 40 ಮಿಲಿಯನ್ ಡಾಲರ್ ದಾಟುತ್ತಿತ್ತು ಎಂದು ವಿತರಕರು ಅಂದಾಜಿಸಿದ್ದಾರೆ. ರಣವೀರ್ ಸಿಂಗ್ ಅವರು 'ಹಮ್ಜಾ' ಎಂಬ ಭಾರತೀಯ ಏಜೆಂಟ್ ಪಾತ್ರದಲ್ಲಿ ಮಿಂಚಿರುವ ಈ ಚಿತ್ರದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಆರ್. ಮಾಧವನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ರೋಚಕ ಕಥೆಯ ಮುಂದುವರಿದ ಭಾಗ 'ಧುರಂಧರ್ 2' ಮಾರ್ಚ್ 2026 ರಲ್ಲಿ ತೆರೆಗೆ ಬರಲಿದೆ.

