
ದಿಗ್ಗಜ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿ, ಸಿನಿಮಾವು ಮೊದಲ ಭಾಗಕ್ಕಿಂತಲೂ ಮಿಗಿಲಾದ ಸ್ಕೇಲ್ ಮತ್ತು ಆತ್ಮವನ್ನು ಹೊಂದಿದೆ ಎಂದು ಹೊಗಳಿದ್ದಾರೆ.
ಇದು ಮಾಸ್ಟರ್ ಕ್ಲಾಸ್ ಸಿನಿಮಾ: ರಣವೀರ್ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಾಜಮೌಳಿ
ರಣವೀರ್ ಸಿಂಗ್ ನಟನೆಯ 'ಧುರಂಧರ್ 2: ದಿ ರಿವೇಂಜ್' ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಆದಿತ್ಯ ಧರ್ ನಿರ್ದೇಶನದ ಈ ಹೈ-ವೋಲ್ಟೇಜ್ ಸ್ಪೈ ಥ್ರಿಲ್ಲರ್ ಬಗ್ಗೆ ಎಸ್‌ಎಸ್ ರಾಜಮೌಳಿ ಅವರು ಹೊಗಳಿದ್ದಾರೆ.
ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ 'ಧುರಂಧರ್ 2: ದಿ ರಿವೇಂಜ್' ಕೇವಲ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಖ್ಯಾತಿ ಪಡೆಯುವ ಜತೆಗೆ ಅಭಿನಯ ಹಾಗೂ ಪಾತ್ರಗಳ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡುತ್ತಿದೆ. ಈ ಚಿತ್ರದ ಯಶಸ್ಸು ಮತ್ತು ಕಥಾವಸ್ತುವಿನ ಬಗ್ಗೆ ಭಾರತೀಯ ಚಿತ್ರರಂಗದ ದಿಗ್ಗಜರು ಹಾಗೂ ರಾಜಕೀಯ ನಾಯಕರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ದಿಗ್ಗಜ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿ, ಸಿನಿಮಾವು ಮೊದಲ ಭಾಗಕ್ಕಿಂತಲೂ ಮಿಗಿಲಾದ ಸ್ಕೇಲ್ ಮತ್ತು ಆತ್ಮವನ್ನು ಹೊಂದಿದೆ ಎಂದು ಹೊಗಳಿದ್ದಾರೆ. ರಣವೀರ್ ಸಿಂಗ್ ಅವರ ನಟನೆಯನ್ನು 'ಮಾಸ್ಟರ್ ಕ್ಲಾಸ್' ಎಂದು ಬಣ್ಣಿಸಿರುವ ಅವರು, ಆರ್. ಮಾಧವನ್ ಅವರ ಅಭಿನಯವು ರಾಷ್ಟ್ರದ ಅಸಹಾಯಕತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿದೆ ಎಂದು ಶ್ಲಾಘಿಸಿದ್ದಾರೆ. ಹಿರಿಯ ನಿರ್ದೇಶಕ ರಾಕೇಶ್ ರೋಷನ್ ಕೂಡ ದನಿಗೂಡಿಸಿದ್ದು, ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ಯುಗದ ಆರಂಭ ಎಂದು ಕರೆದಿದ್ದಾರೆ. ಇತ್ತ ರಾಮ್ ಗೋಪಾಲ್ ವರ್ಮಾ ಅವರು ಸದಾಕಾಲದಂತೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿ, ಇದು ಬಾಲಿವುಡ್‌ನ ಅತಿರಂಜಿತ ಸಿನೆಮಾಗಳಿಗೆ ನೀಡಿದ ದೊಡ್ಡ ಪೆಟ್ಟು ಮತ್ತು ನೈಜ ಕಥೆಗಳಿಗೆ ಸಂದ ಜಯ ಎಂದು ಬಣ್ಣಿಸಿದ್ದಾರೆ.
ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳಾದ ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಕೂಡ ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲು ಅರ್ಜುನ್ ಈ ಚಿತ್ರವನ್ನು 'ದೇಶಭಕ್ತಿಯ ಸ್ವ್ಯಾಗ್' ಎಂದು ಕರೆದರೆ, ಮಹೇಶ್ ಬಾಬು ಅವರು ಚಿತ್ರದ ಮ್ಯೂಸಿಕ್ ಮತ್ತು ರಣವೀರ್ ಅವರ ಪರ್ಫಾರ್ಮೆನ್ಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ನಟಿ ಪ್ರೀತಿ ಜಿಂಟಾ ಕೂಡ ಚಿತ್ರದ ನಿರ್ದೇಶನ ಮತ್ತು ಸಂಕಲನದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
ಈ ಪ್ರಶಂಸೆಯ ನಡುವೆ ನಟ ಪ್ರಕಾಶ್ ರಾಜ್ ಅವರ ವಿಮರ್ಶಾತ್ಮಕ ಮಾತುಗಳು ಸಂಚಲನ ಮೂಡಿಸಿವೆ. ಸಿನಿಮಾ ತಾರೆಯರು ಕೇವಲ 'ಜವಾಬ್ದಾರಿ' ಅಥವಾ 'ಒಪ್ಪಂದ'ಗಳ ಕಾರಣಕ್ಕೆ ಹೊಗಳುತ್ತಿರಬಹುದು ಎಂಬ ಸುಳಿವನ್ನು ನೀಡುವ ಮೂಲಕ ಅವರು ಈ ಅಲೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇವಲ ಚಿತ್ರರಂಗ ಮಾತ್ರವಲ್ಲದೆ, ರಾಜಕೀಯ ವಲಯದಲ್ಲೂ 'ಧುರಂಧರ್ 2' ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲವು ನಾಯಕರು ಇದು ಸಮಾಜದ ನೈಜ ಪ್ರತಿಬಿಂಬ ಎಂದು ಬೆಂಬಲಿಸಿದರೆ, ಮತ್ತೆ ಕೆಲವರು ಈ ಸಿನಿಮಾ ಒಂದು ನಿರ್ದಿಷ್ಟ ನಿರೂಪಣೆಯನ್ನು ಸಮಾಜದ ಮೇಲೆ ಹೇರುತ್ತಿದೆ ಮತ್ತು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ಅಪಾಯ ಹೊಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

