ಧರ್ಮೇಂದ್ರ ಸಿನಿ ಪಯಣಕ್ಕೆ ತಿರುವು ಕೊಟ್ಟಿದ್ದ ʼಶೋಲೆʼ ; ಹೀ-ಮ್ಯಾನ್‌ ನಂಟು ರಾಮನಗರಕ್ಕೂ ಉಂಟು
x

ರಾಮನಗರ ಬೆಟ್ಟದಲ್ಲಿ ಶೋಲೆ ಚಿತ್ರೀಕರಣ 

ಧರ್ಮೇಂದ್ರ ಸಿನಿ ಪಯಣಕ್ಕೆ ತಿರುವು ಕೊಟ್ಟಿದ್ದ ʼಶೋಲೆʼ ; ಹೀ-ಮ್ಯಾನ್‌ ನಂಟು ರಾಮನಗರಕ್ಕೂ ಉಂಟು

ಧರ್ಮೇಂದ್ರ ಅವರು ಹೇಮಾ ಮಾಲಿನಿ ಅವರೊಂದಿಗೆ ಇನ್ನೂ ಹೆಚ್ಚು ಸಮಯ ಕಳೆಯುವ ಸಲುವಾಗಿ ನಿರ್ದೇಶಕರಿಗೆ ಗೊತ್ತಿಲ್ಲದಂತೆ ಸ್ಪಾಟ್‌ ಬಾಯ್‌ಗಳಿಗೆ ಹಣ ನೀಡುತ್ತಿದ್ದರು ಎನ್ನಲಾಗಿದೆ.


Click the Play button to hear this message in audio format

ಬಾಲಿವುಡ್‌ ಗತ್ತು, ಗಮ್ಮತ್ತು ಮತ್ತು ಸರಳತೆಯ ಪ್ರತಿರೂಪದಂತಿದ್ದ ಹಿರಿಯ ನಟ ಧರ್ಮೇಂದ್ರ (89) ಅವರು ಸೋಮವಾರ ಮುಂಬೈನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಧರ್ಮೇಂದ್ರ ಅವರ ಸಿನಿ ವೃತ್ತಿ ಜೀವನಕ್ಕೆ ದೊಡ್ಡ ತಿರುವುದು ನೀಡಿದ ʼಶೋಲೆʼ ಚಿತ್ರದಿಂದಾಗಿ ಕರ್ನಾಟಕದ ರೇಷ್ಮೆನಾಡು ರಾಮನಗರಕ್ಕೆ ಇರುವ ನಂಟು ಎಂದಿಗೂ ಅಳಿಸಲಾಗದು.

ರಾಮನಗರದ ರಾಮದೇವರ ಬೆಟ್ಟ ಇಂದು ಜಗತ್ತಿನಾದ್ಯಂತ 'ಶೋಲೆ ಬೆಟ್ಟ' ಎಂದೇ ಗುರುತಿಸಿಕೊಂಡಿದೆ. ಈ ಖ್ಯಾತಿಗೆ ಮುಖ್ಯ ಕಾರಣ ಧರ್ಮೇಂದ್ರ ಹಾಗೂ ಅಮಿತಾಬ್‌ ಬಚ್ಚನ್‌. 1970ರ ದಶಕದ ಆರಂಭದಲ್ಲಿ ನಿರ್ದೇಶಕ ರಮೇಶ್ ಸಿಪ್ಪಿ ಅವರು ತಮ್ಮ 'ಶೋಲೆ' ಚಿತ್ರದ ಕಾಲ್ಪನಿಕ ಗ್ರಾಮ 'ರಾಮಗಢ'ವನ್ನು ನಿರ್ಮಿಸಲು ಆರಿಸಿಕೊಂಡಿದ್ದು ಇದೇ ರಾಮದೇವರ ಬೆಟ್ಟವನ್ನು.

ಧರ್ಮೇಂದ್ರ ಅವರು ಚಿತ್ರದಲ್ಲಿ ನಿರ್ವಹಿಸಿದ 'ವೀರು' ಪಾತ್ರ ಮತ್ತು ಅಮಿತಾಬ್‌ ಬಚ್ಚನ್ ಅವರ 'ಜೈ' ಪಾತ್ರಗಳ ಸ್ನೇಹ, ಸಾಹಸಗಳು ಮೂರು ವರ್ಷಗಳ ಕಾಲ ಈ ಮಣ್ಣಿನ ಮೇಲೆ ಚಿತ್ರಿತವಾದವು. ಚಿತ್ರದ ಅನೇಕ ಐಕಾನಿಕ್ ದೃಶ್ಯಗಳು, ವಿಶೇಷವಾಗಿ 'ವೀರು' ಕುದುರೆ ಏರಿ ಓಡುವ ದೃಶ್ಯಗಳು, ಗಬ್ಬರ್ ಸಿಂಗ್‌ನ ದೃಶ್ಯಗಳು ಹಾಗೂ ಕ್ಲೈಮ್ಯಾಕ್ಸ್‌ನ ಕೆಲ ಭಾಗಗಳು ಈ ಬೆಟ್ಟದ ಸುತ್ತಮುತ್ತಲೇ ಮೂಡಿಬಂದಿದ್ದವು. ಆ ಮೂಲಕ, ರಾಮನಗರದ ಹೆಸರು ದೇಶದ ಮನೆಮಾತಾಗಲು ಧರ್ಮೇಂದ್ರರ ವೀರು ಪಾತ್ರವೇ ಮುಖ್ಯ ಕಾರಣವಾಗಿತ್ತು.

ಸ್ಥಳೀಯರೊಂದಿಗೆ ಧರ್ಮೇಂದ್ರ ಒಡನಾಟ

ಬರೀ ಶೂಟಿಂಗ್‌ಗಾಗಿ ಬಂದು ಹೋದ ಕಲಾವಿದರಂತೆ ಧರ್ಮೇಂದ್ರ ಇರಲಿಲ್ಲ. ಆಗಿನ ಕಾಲದಲ್ಲಿಯೇ ಆಧುನಿಕ ಸೌಲಭ್ಯಗಳಿಂದ ದೂರವಿದ್ದ ರಾಮನಗರದ ಹಳ್ಳಿಗಳಲ್ಲಿ, ಇಡೀ ಚಿತ್ರತಂಡ ಹಲವಾರು ದಿನಗಳ ಕಾಲ ವಾಸ್ತವ್ಯ ಹೂಡಿತ್ತು.

ಆಗ ಧರ್ಮೇಂದ್ರ ಅವರು ತೋರಿಸಿದ ಸರಳತೆ ಮತ್ತು ಔದಾರ್ಯವನ್ನು ಸ್ಥಳೀಯ ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಚಿತ್ರೀಕರಣದ ಸಂದರ್ಭದಲ್ಲಿ ಅಲ್ಲಿ ಭಾಗಿಯಾದ ಸ್ಥಳೀಯರಿಗೆ ಉತ್ತಮ ಊಟದ ಜೊತೆಗೆ, ಆಗಿನ ಕಾಲದಲ್ಲಿಯೇ 100 ರೂಪಾಯಿಗಳನ್ನು ಧರ್ಮೇಂದ್ರ ನೀಡಿದ್ದರು ಎಂದು ʻದ ಫೆಡರಲ್‌ ಕರ್ನಾಟಕʼಕ್ಕೆ ಸ್ಥಳೀಯ ಮಹಿಳೆ ದೇವರಾಳಮ್ಮ ತಿಳಿಸಿದ್ದಾರೆ.

ರಾಮನಗರದಲ್ಲಿಅರಳಿದ 'ಡ್ರೀಮ್‌ ಗರ್ಲ್‌', 'ಹೀಮ್ಯಾನ್‌' ಪ್ರೇಮಕಥೆ

1970ರ ದಶಕದ ಆರಂಭದಲ್ಲಿಯೇ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರು ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರೂ, 'ಶೋಲೆ' ಚಿತ್ರೀಕರಣದ ಸುದೀರ್ಘ ಅವಧಿಯಲ್ಲಿ ಅವರ ಸ್ನೇಹ ಪ್ರೀತಿಗೆ ತಿರುಗಿತು. ರಾಮನಗರದ ಆ ಪ್ರತ್ಯೇಕ ವಾತಾವರಣದಲ್ಲಿ, ಇಬ್ಬರೂ ಹೊರಜಗತ್ತಿನ ಗದ್ದಲದಿಂದ ದೂರವಿರಬೇಕಾಗಿತ್ತು. ಇದು ಅವರ ವೈಯಕ್ತಿಕ ಬಾಂಧವ್ಯ ಗಟ್ಟಿಯಾಗಲು ಸಹಾಯ ಮಾಡಿತು. ಹೇಮಾ ಮಾಲಿನಿ ಅವರೇ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿರುವಂತೆ, ಧರ್ಮೇಂದ್ರ ಅವರು ಅವರನ್ನು ತುಂಬಾ ಇಷ್ಟಪಡುತ್ತಿದ್ದರು. ಅವರ ಸ್ನೇಹವು ಇಬ್ಬರ ನಡುವೆ ಪ್ರೀತಿ ಮತ್ತು ಪರಸ್ಪರ ಕಾಳಜಿಯ ರೂಪ ಪಡೆಯಿತು. ಈ ಅಂತರಂಗದ ಬಾಂಧವ್ಯವೇ 'ಶೋಲೆ'ಯ ತೆರೆಯ ಮೇಲೆ ವೀರು ಮತ್ತು ಬಸಂತಿ ಪಾತ್ರಗಳ ನಡುವಿನ ಉತ್ತಮ ಕೆಮಿಸ್ಟ್ರಿಗೆ ಕಾರಣವಾಗಿತ್ತು.

ರೀಟೇಕ್‌ಗಳ ರಹಸ್ಯ

ಶೋಲೆ ಚಿತ್ರದ ಅತ್ಯಂತ ಕುತೂಹಲದ ಸಂಗತಿ ಎಂದರೆ, ಕುದುರೆ ಗಾಡಿ ಓಡಿಸುವ 'ಬಸಂತಿ'ಯನ್ನು 'ವೀರು' ಗೋಡೆಯ ಮೇಲೆ ಕುಳಿತು ಕೆಣಕುವ ದೃಶ್ಯಗಳು. ಈ ದೃಶ್ಯಗಳ ಚಿತ್ರೀಕರಣದ ಹಿಂದೆ ಒಂದು ಮಧುರವಾದ ಪ್ರೇಮ ರಹಸ್ಯ ಅಡಗಿದೆ.

ಧರ್ಮೇಂದ್ರ ಅವರು ಹೇಮಾ ಮಾಲಿನಿ ಅವರನ್ನು ಇನ್ನೂ ಹೆಚ್ಚು ಸಮಯ ತಮ್ಮೊಂದಿಗೆ ಕಳೆಯುವ ಸಲುವಾಗಿ, ನಿರ್ದೇಶಕರಿಗೆ ಗೊತ್ತಿಲ್ಲದಂತೆ ಸ್ಪಾಟ್‌ಬಾಯ್‌ಗಳಿಗೆ ಹಣ ನೀಡುತ್ತಿದ್ದರು ಎನ್ನಲಾಗಿದೆ. ವೀರು-ಬಸಂತಿ ನಡುವಿನ ರೋಮ್ಯಾಂಟಿಕ್ ದೃಶ್ಯಗಳ ಸಮಯದಲ್ಲಿ, ಸ್ಪಾಟ್‌ಬಾಯ್‌ಗಳು ಉದ್ದೇಶಪೂರ್ವಕವಾಗಿ ಕ್ಯಾಮೆರಾದಲ್ಲಿ ತಪ್ಪುಗಳನ್ನು ಮಾಡಿ ಅಥವಾ ಬೇರೆ ಗೊಂದಲ ಸೃಷ್ಟಿಸಿ ರೀಟೇಕ್‌ ತೆಗೆದುಕೊಳ್ಳುವಂತೆ ಮಾಡುತ್ತಿದ್ದರು.

ಒಂದೇ ದೃಶ್ಯವನ್ನು ಹತ್ತಾರು ಬಾರಿ ಪುನಃ ಚಿತ್ರೀಕರಿಸಬೇಕಾದಾಗ, ಧರ್ಮೇಂದ್ರ ಅವರು ಮತ್ತೆ ಮತ್ತೆ ಹೇಮಾ ಮಾಲಿನಿ ಅವರನ್ನು ತಬ್ಬಿಕೊಳ್ಳಲು ಅಥವಾ ಅವರೊಂದಿಗೆ ಹಾಸ್ಯಭರಿತವಾಗಿ ಇರಲು ಅವಕಾಶ ಸಿಗುತ್ತಿತ್ತು. ಈ ರೀಟೇಕ್‌ಗಳ ರಹಸ್ಯವನ್ನು ಧರ್ಮೇಂದ್ರ ಅವರೇ ನಂತರದ ದಿನಗಳಲ್ಲಿ ಬಹಿರಂಗಪಡಿಸಿದ್ದರು.

ಪ್ರೇಮದ ದೀರ್ಘ ಪಯಣ

ನಟ ಧರ್ಮೇಂದ್ರ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲೇ ಪ್ರಕಾಶ್ ಕೌರ್ ಎಂಬವರನ್ನು ಮದುವೆಯಾಗಿದ್ದರು. ಅದಾಗಲೇ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮಕ್ಕಳು ಹುಟ್ಟಿದ್ದರು. ಅಜೀತಾ, ವಿಜೇತಾ ಎಂಬ ಇನ್ನೂ ಇಬ್ಬರು ಹೆಣ್ಣುಮಕ್ಕಳು ಇದ್ದರು. ಆದರೆ ಹೇಮಾ ಮಾಲಿನಿ ಅವರು ತಮ್ಮ ಪ್ರೀತಿಯ ಮುಂದೆ ಎಂದಿಗೂ ಅಳುಕಲಿಲ್ಲ. ಧರ್ಮೇಂದ್ರ ಅವರಿದ್ದಲ್ಲಿ ತಮಗೆ ಸಂತೋಷ ಸಿಗುತ್ತದೆ ಎಂದು ನಂಬಿದ್ದ ಹೇಮಾ ಎಲ್ಲಾ ಅಡೆತಡೆಗಳನ್ನು ಮೀರಿ 'ಶೋಲೆ' ಚಿತ್ರೀಕರಣ ಮುಗಿದ ನಂತರ, 1980ರಲ್ಲಿ ಧರ್ಮೇಂದ್ರ ಅವರ ಕೈ ಹಿಡಿದರು. ಹೇಮಾ ಅವರಿಗೆ ಇಶಾ ಡಿಯೋಲ್, ಅಹಾನಾ ಡಿಯೋಲ್ ಎಂಬಿಬ್ಬರು ಹೆಣ್ಣುಮಕ್ಕಳು ಹುಟ್ಟಿದರು.

ರಾಮನಗರದ ಬೆಟ್ಟಗಳು ಮತ್ತು ಒರಟಾದ ಮಣ್ಣಿನ ಮೇಲೆ ಅರಳಿದ 'ವೀರು' ಮತ್ತು 'ಬಸಂತಿ'ಯ ಪ್ರೇಮಗಾಥೆ, ಬೆಳ್ಳಿತೆರೆಯ ಯಶಸ್ಸಿನ ಜೊತೆಜೊತೆಗೇ ನಿಜಜೀವನದಲ್ಲಿಯೂ ಭಾರತೀಯ ಚಿತ್ರರಂಗದ ಇತಿಹಾಸದ ಒಂದು ಪ್ರಮುಖ ಮತ್ತು ಶಾಶ್ವತ ಪ್ರೇಮ ಕಥೆಯಾಗಿ ಉಳಿದಿದೆ.

Read More
Next Story