‘ಡೆವಿಲ್‍’, ‘ಕ್ರಿಮಿನಲ್‍’, ‘ಟಾಕ್ಸಿಕ್‍’... ಹೆಸರಲ್ಲೇ ವಿಲನ್‍ಗಳಾಗುತ್ತಿದ್ದಾರೆ ಹೀರೋಗಳು
x

ಡೆವಿಲ್‍

‘ಡೆವಿಲ್‍’, ‘ಕ್ರಿಮಿನಲ್‍’, ‘ಟಾಕ್ಸಿಕ್‍’... ಹೆಸರಲ್ಲೇ ವಿಲನ್‍ಗಳಾಗುತ್ತಿದ್ದಾರೆ ಹೀರೋಗಳು

70ರ ದಶಕದಲ್ಲಿ ನಾಯಕನ ಪರಿಚಯವನ್ನು ಶೀರ್ಷಿಕೆಯಲ್ಲೇ ಮಾಡುವ ಟ್ರೆಂಡ್‍ ಶುರುವಾಯಿತು. 1975ರಲ್ಲಿ ಬಿಡುಗಡೆಯಾದ ‘ದಾರಿ ತಪ್ಪಿದ ಮಗ’ ಚಿತ್ರದ ಹೆಸರಿನಲ್ಲೇ ನಾಯಕನ ಪಾತ್ರ ಏನಿರಬಹುದು ಎಂದು ಸೂಕ್ಷ್ಮವಾಗಿ ಬಿಟ್ಟುಕೊಡಲಾಯಿತು.


Click the Play button to hear this message in audio format

ಅಂತೂ ಒಂದು ವರ್ಷದ ನಂತರ ಧ್ರುವ ಸರ್ಜಾ ಅಭಿನಯದ ಚಿತ್ರವೊಂದು ಸೆಟ್ಟೇರಿದೆ. ಈ ಚಿತ್ರಕ್ಕೆ ‘ಕ್ರಿಮಿನಲ್‍’ ಎಂಬ ಹೆಸರಿಡಲಾಗಿದ್ದು, ಶೀರ್ಷಿಕೆ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇದು ಉತ್ತರ ಕರ್ನಾಟಕದ ಪ್ರೇಮಿಯ ಕಥೆಯಾಗಿದ್ದು, ಆ ಪ್ರೇಮಿ ಯಾಕೆ ಕ್ರಿಮಿನಲ್‍ ಆಗುತ್ತಾನೆ ಎಂಬುದು ಚಿತ್ರ ಬಿಡುಗಡೆ ಆದ ಮೇಲಷ್ಟೇ ಗೊತ್ತಾಗಬೇಕು.

ಧ್ರುವ ಸರ್ಜಾ ಹೊಸ ಚಿತ್ರ ಒಪ್ಪಿಕೊಂಡಿದ್ದು, ಆ ಚಿತ್ರಕ್ಕೆ ‘ಕ್ರಿಮಿನಲ್‍’ ಎಂದು ಹೆಸರಿಡಲಾಗಿದೆ. ಇತ್ತೀಚಿನ ಹೀರೋಗಳ ಹೊಸ ಚಿತ್ರಗಳನ್ನು ಗಮನಿಬೇಕು. ಕೃಷ್ಣ ಅಭಿನಯದ ‘ಬ್ರ್ಯಾಟ್‍’, ದರ್ಶನ್‍ ಅಭಿನಯದ ‘ದಿ ಡೆವಿಲ್‍’, ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್‍’, ಯಶ್‍ ಅಭಿನಯದ ‘ಟಾಕ್ಸಿಕ್‍’ … ಈ ಎಲ್ಲಾ ಚಿತ್ರಗಳಿಗೆ ಇಂಗ್ಲೀಷ್‍ ಶೀರ್ಷಿಕೆಗಳನ್ನು ಇಟ್ಟಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಇವೆಲ್ಲವೂ ನೆಗೆಟಿವ್‍ ಟೈಟಲ್‍ಗಳು. ಚಿತ್ರ ಬಿಡುಗಡೆ ಆಗದೇ ಇರುವುದರಿಂದ ಇಲ್ಲಿ ಪ್ರಧಾನ ಪಾತ್ರ ಹೀರೋ ಆಗಿರುತ್ತಾನಾ? ಅಥವಾ ಆ್ಯಂಟಿ-ಹೀರೋನಾ? ಎಂಬುದನ್ನು ಈಗಲೇ ಹೇಳುವುದು ಕಷ್ಟ. ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಬೇಕು.

ಹಾಗೆ ನೋಡಿದರೆ, ಆ್ಯಂಟಿ-ಹೀರೋ ಚಿತ್ರಗಳು ಅಥವಾ ನಾಯಕ ನಗೆಟಿವ್‍ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಹೊಸದೂ ಅಲ್ಲ, ವಿಶೇಷವೂ ಅಲ್ಲ, ‘ಕರುಣೆಯೇ ಕುಟುಂಬದ ಕಣ್ಣು’, ‘ಸಾಕು ಮಗಳು’ ಮುಂತಾದ ಚಿತ್ರಗಳಲ್ಲಿ ಡಾ. ರಾಜಕುಮಾರ್‌ ನಾಯಕನಾಗಿ ಅಭಿನಯಿಸಿದ್ದರೂ, ಆ ಪಾತ್ರದಲ್ಲಿ ನೆಗೆಟಿವ್‍ ಅಂಶಗಳಿದ್ದವು. ‘ಗಾಳಿ ಗೋಪುರ’, ‘ಸುಬ್ಬಾಶಾಸ್ತ್ರಿ’ ಚಿತ್ರದಲ್ಲಿ ಕಲ್ಯಾಣ್‍ ಕುಮಾರ್‌ ಅವರಿಗೆ ಸಹ ನೆಗೆಟಿವ್‍ ಎನ್ನುವಂತಹ ಪಾತ್ರಗಳು ಇದ್ದವು. ನಾಯಕ ಆರಂಭದಲ್ಲಿ ಕೆಟ್ಟವನಾದರೂ, ಚಿತ್ರ ಮುಗಿಯುವ ಹೊತ್ತಿಗೆ ಮನಸ್ಸು ಬದಲಾಗಿ ಒಳ್ಳೆಯವನಾಗಿರುತ್ತಾನೆ. ಪಾತ್ರಗಳು ಹೇಗೆ ಇರಲಿ, ಆ ನಂತರ ಎಷ್ಟೇ ಬದಲಾಗಲಿ, ಶೀರ್ಷಿಕೆಗಳಲ್ಲಿ ಮಾತ್ರ ಅವನು ಎಂಥವನು ಎಂದು ಗೊತ್ತಾಗುತ್ತಿರಲಿಲ್ಲ.

70ರ ದಶಕದಲ್ಲಿ ನಾಯಕನ ಪರಿಚಯವನ್ನು ಶೀರ್ಷಿಕೆಯಲ್ಲೇ ಮಾಡುವ ಟ್ರೆಂಡ್‍ ಶುರುವಾಯಿತು. 1975ರಲ್ಲಿ ಬಿಡುಗಡೆಯಾದ ‘ದಾರಿ ತಪ್ಪಿದ ಮಗ’ ಚಿತ್ರದ ಹೆಸರಿನಲ್ಲೇ ನಾಯಕನ ಪಾತ್ರ ಏನಿರಬಹುದು ಎಂದು ಸೂಕ್ಷ್ಮವಾಗಿ ಬಿಟ್ಟುಕೊಡಲಾಯಿತು. ಆ ನಂತರ ಬಂದ ‘ನಾನೊಬ್ಬ ಕಳ್ಳ’ ಚಿತ್ರದ ಹೆಸರಿನಲ್ಲೂ, ನಾಯಕನ ಪರಿಚಯ ಸಿಗುತ್ತದೆ. ಕ್ರಮೇಣ ಇಂಥ ಪಾತ್ರಗಳು ಹೆಚ್ಚಾಗುವುದರ ಜೊತೆಗೆ, ಇಂತಹ ಶೀರ್ಷಿಕೆ ಸಹ ಹೆಚ್ಚಾದವು. ‘ಕೇಡಿ ನಂಬರ್‌ ಒನ್‍’, ‘ಪೋಲಿ ಹುಡುಗ’, ‘ಪೊರ್ಕಿ’, ‘ಪೋಲಿ’, ‘ಪುಂಡ’, ‘ಬದ್ಮಾಶ್‍’, ‘ದಿ ವಿಲನ್‍’, ‘ರೋಗ್‍’ ಮುಂತಾದ ಹಲವು ಚಿತ್ರಗಳು ಬಂದವು. ಈಗ ಈ ಸಾಲಿಗೆ ಇನ್ನಷ್ಟು ಚಿತ್ರಗಳು ಸೇರ್ಪಡೆಯಾಗಿವೆ.

ಇಷ್ಟಕ್ಕೂ ಇಂಥಾ ನೆಗೆಟಿವ್‍ ಆದಂತಹ ಶೀರ್ಷಿಕೆಗಳು ಯಾಕೆ? ಎಂಬ ಪ್ರಶ್ನೆ ಸಹಜವೇ. ಯಾವುದೇ ಕಥೆ ಅಥವಾ ಚಿತ್ರದ ಆತ್ಮವನ್ನು ಒಂದು ಅಥವಾ ಕೆಲವೇ ಪದಗಳಲ್ಲಿ ಹೇಳುವ ಪ್ರಯತ್ನವನ್ನು ಎಲ್ಲ ಚಿತ್ರತಂಡಗಳೂ ಮಾಡುತ್ತವೆ. ಆ ಹೆಸರುಗಳು ಕಥೆಗಳಿಗೆ ಪೂರಕವಾಗಿರುವುದರ ಜೊತೆಗೆ, ಕ್ಯಾಚಿಯಾಗಿಯೂ ಇರಬೇಕು. ಪ್ರೇಕ್ಷಕರನ್ನು ಸೆಳೆಯುವುದರ ಜೊತೆಗೆ, ಯಾವುದೇ ಕಷ್ಟವಿಲ್ಲದೆ ಹೇಳುವಂತಿರಬೇಕು. ಅಂತಹ ಶೀರ್ಷಿಕೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದು ಗಮನಾರ್ಹ.

‘ಮೊಗ್ಗಿನ ಮನಸ್ಸು’, ‘ಕೃಷ್ಣ-ಲೀಲಾ’, ‘ಕೌಸಲ್ಯ ಸುಪ್ರಜಾ ರಾಮ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಶಶಾಂಕ್‍ ನಿರ್ದೇಶನದ ಹೊಸ ಚಿತ್ರ ‘ಬ್ರ್ಯಾಟ್‍’. ಅಂದರೆ ‘ಪುಂಡ’, ‘ಪೋಕರಿ’, ‘ಪೊರ್ಕಿ’ ಎಂದರ್ಥ. ಆದರೆ, ಆ ತರಹದ ಅರ್ಥ ಬರುವ ಶೀರ್ಷಿಕೆಗಳು ಕನ್ನಡದಲ್ಲಿ ಈಗಾಗಲೇ ಬಂದಿದ್ದರಿಂದ, ಇಂಗ್ಲೀಷ್‍ನಲ್ಲಿ ಹೆಸರಿಡಬೇಕಾಯಿತು ಎನ್ನುತ್ತಾರೆ.

ಈ ಕುರಿತು ಮಾತನಾಡುವ ಅವರು, ‘‘ಬ್ರ್ಯಾಟ್‍’ ಎಂದರೆ 16 ವರ್ಷದ ಒಳಗಿನ ಹುಡುಗರಿಗೆ ಕರೆಯಲಾಗುತ್ತದೆ. ಅದರಲ್ಲೂ ಇಂಗ್ಲೀಷ್‍ ಟೀಚರ್‌ಗಳು ಈ ಪದವನ್ನು ಹೆಚ್ಚು ಉಪಯೋಗಿಸುತ್ತಾರೆ. ನಮ್ಮ ಕಥೆಗೆ ಈ ಶೀರ್ಷಿಕೆ ಸೂಕ್ತವಾಗಿತ್ತು. ನಾಯಕನ ಪಾತ್ರವನ್ನು ಬಣ್ಣಿಸುವ ಪದ ಇದು. ಇದಕ್ಕೆ ಕನ್ನಡದಲ್ಲಿ ಸಮಾನಾಂತರ ಪದ ಇಲ್ಲ. ಕನ್ನಡದಲ್ಲಿ ಈ ತರಹದ ಪದಗಳಿರುವ ಶೀರ್ಷಿಕೆಗಳು ಬಂದಿವೆ. ‘ಪೊರ್ಕಿ’, ‘ಪೋಲಿ’, ‘ತರ್ಲೆ ನನ್ಮಗ’, ‘ದಾರಿ ತಪ್ಪಿದ ಮಗ’ ಈ ತರಹದ ಶೀರ್ಷಿಕೆಗಳು ಬಂದಿವೆ. ಹಾಗಾಗಿ, ಸೂಕ್ತ ಪದ ಸಿಗಲಿಲ್ಲ. ಮೇಲಾಗಿ ಚಿತ್ರವನ್ನು ಐದು ಭಾಷೆಗಳಲ್ಲಿ ಮಾಡಬೇಕು ಎಂದು ತೀರ್ಮಾನವಾಗಿತ್ತು. ಈ ಐದೂ ಭಾಷೆಗಳಿಗೆ ಶೀರ್ಷಿಕೆ ಹೊಂದುತ್ತದೆ ಎಂದು ಇಂಗ್ಲೀಷ್‍ ಶೀರ್ಷಿಕೆಯಾದರೂ ಪರವಾಗಿಲ್ಲ ಎಂದು ಧೈರ್ಯ ಮಾಡಿ ಇಟ್ಟಿದ್ದೇವೆ’ ಎನ್ನುತ್ತಾರೆ.

ಒಂದು ಚಿತ್ರದಲ್ಲಿ ನಾಯಕ ಹೀರೋನೋ ಅಥವಾ ಆ್ಯಂಟಿ-ಹೀರೋನೋ, ಈಗಲೇ ತೀರ್ಮಾನಿಸುವುದು ಬಹಳ ಕಷ್ಟ. ಹೆಸರು ಕೇಳಿ ಮೇಲ್ನೋಟಕ್ಕೆ ನಾಯಕ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ ಅಂತನಿಸಿದರೂ, ಆಂತರ್ಯದಲ್ಲಿ ಬೇರೇನೋ ಇರುತ್ತದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಹೆಸರಿನಲ್ಲೇ ನೆಗೆಟಿವ್ ಶೀರ್ಷಿಕೆಗಳನ್ನು ಇಡುವ ಟ್ರೆಂಡ್‍ ಅಂತೂ ಹೆಚ್ಚುತ್ತಿದೆ. ‘ಡೆವಿಲ್‍’, ‘ಕ್ರಿಮಿನಲ್‍’ ಎಲ್ಲಾ ಆಯ್ತು. ಮುಂದೆ ಇನ್ನೂ ಏನೇನು ಬರುತ್ತವೋ ನೋಡಬೇಕು.

Read More
Next Story