ಇಳಯರಾಜಗೆ ದೆಹಲಿ ಹೈಕೋರ್ಟ್ ಶಾಕ್: 134 ಚಿತ್ರಗಳ ಸಂಗೀತ ಬಳಸದಂತೆ ಮಧ್ಯಂತರ ತಡೆ
x

ಇಳಯರಾಜ ಅವರಿಗೆ ಈ ಹಾಡುಗಳನ್ನು ಬಳಸದಂತೆ ಅಥವಾ ಬೇರೆಯವರಿಗೆ ಪರವಾನಗಿ ನೀಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಇಳಯರಾಜಗೆ ದೆಹಲಿ ಹೈಕೋರ್ಟ್ ಶಾಕ್: 134 ಚಿತ್ರಗಳ ಸಂಗೀತ ಬಳಸದಂತೆ ಮಧ್ಯಂತರ ತಡೆ

ಇಳಯರಾಜ ಅವರು ಸರಿಗಮ ಸಂಸ್ಥೆಯ ಸ್ವಾಮ್ಯದಲ್ಲಿದೆ ಎನ್ನಲಾದ 134 ಚಲನಚಿತ್ರಗಳ ಸಂಗೀತ ಕೃತಿಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿ ಸರಿಗಮ ಸಂಸ್ಥೆಯು ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು.


Click the Play button to hear this message in audio format

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ದೆಹಲಿ ಹೈಕೋರ್ಟ್‌ನಿಂದ ಭಾರಿ ಹಿನ್ನಡೆಯಾಗಿದ್ದು, ಅವರು ಸಂಯೋಜಿಸಿರುವ 134 ಚಲನಚಿತ್ರಗಳ ಹಾಡುಗಳ ಬಳಕೆಗೆ ನ್ಯಾಯಾಲಯವು ಮಧ್ಯಂತರ ತಡೆ ನೀಡಿದೆ.

ಖ್ಯಾತ ಸಂಗೀತ ಸಂಸ್ಥೆ 'ಸರಿಗಮ ಇಂಡಿಯಾ ಲಿಮಿಟೆಡ್' ಸಲ್ಲಿಸಿದ್ದ ಹಕ್ಕುಸ್ವಾಮ್ಯ (Copyright) ಉಲ್ಲಂಘನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠವು ಈ ಆದೇಶ ಹೊರಡಿಸಿದೆ.

ಸರಿಗಮ ಸಂಸ್ಥೆಯು ಆಯಾ ಚಿತ್ರಗಳ ನಿರ್ಮಾಪಕರೊಂದಿಗೆ ಅಧಿಕೃತವಾಗಿ ಒಪ್ಪಂದ ಮಾಡಿಕೊಂಡು ಶಾಶ್ವತ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ ಇಳಯರಾಜ ಅವರು ಈ ಹಾಡುಗಳನ್ನು ತಮ್ಮ ವೈಯಕ್ತಿಕ ಆಸ್ತಿ ಎಂದು ಪ್ರತಿಪಾದಿಸಿ ಅಮೆಜಾನ್ ಮ್ಯೂಸಿಕ್, ಐ-ಟ್ಯೂನ್ಸ್ ಮತ್ತು ಜಿಯೋ ಸಾವನ್ ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ನೀಡಿರುವುದು ಕಾನೂನುಬಾಹಿರ ಎಂದು ಸರಿಗಮ ಪರ ವಕೀಲರು ವಾದ ಮಂಡಿಸಿದ್ದರು.

1957ರ ಹಕ್ಕುಸ್ವಾಮ್ಯ ಕಾಯ್ದೆಯ ಪ್ರಕಾರ, ಚಿತ್ರಕ್ಕಾಗಿ ತಯಾರಿಸಿದ ಸಂಗೀತಕ್ಕೆ ಸಂಬಂಧಿಸಿದಂತೆ ನಿರ್ಮಾಪಕರೇ ಮೊದಲ ಮಾಲೀಕರಾಗಿರುತ್ತಾರೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಈ ವಾದವನ್ನು ಪುರಸ್ಕರಿಸಿದ ದೆಹಲಿ ಹೈಕೋರ್ಟ್, ಇಳಯರಾಜ ಅಥವಾ ಅವರ ಪ್ರತಿನಿಧಿಗಳು ಸರಿಗಮ ಸಂಸ್ಥೆಯ ಬಳಿ ಇರುವ ಆ 134 ಚಿತ್ರಗಳ ಹಾಡುಗಳನ್ನು ಬಳಸುವಂತಿಲ್ಲ, ಯಾವುದೇ ಹಕ್ಕುಗಳನ್ನು ಪಡೆಯುವಂತಿಲ್ಲ ಅಥವಾ ಬೇರೆಯವರಿಗೆ ಪರವಾನಗಿ ನೀಡುವಂತಿಲ್ಲ ಎಂದು ನಿರ್ಬಂಧಿಸಿದೆ. ಒಂದು ವೇಳೆ ಈ ಹಂತದಲ್ಲಿ ತಡೆ ನೀಡದಿದ್ದರೆ ಸರಿಗಮ ಸಂಸ್ಥೆಗೆ ಸರಿಪಡಿಸಲಾಗದ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ

ಸರಿಗಮ ಸಂಸ್ಥೆಯು 1976 ರಿಂದ 2001 ರ ಅವಧಿಯಲ್ಲಿ ವಿವಿಧ ಚಿತ್ರ ನಿರ್ಮಾಪಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆ ಚಿತ್ರಗಳ ಸಂಗೀತದ ಮೇಲೆ ತನಗೆ ಸಂಪೂರ್ಣ ಮತ್ತು ಶಾಶ್ವತ ಹಕ್ಕುಗಳಿವೆ ಎಂದು ವಾದಿಸಿತ್ತು. ಇತ್ತೀಚೆಗೆ ಇಳಯರಾಜ ಅವರು ಈ ಹಾಡುಗಳ ಮೇಲೆ ತಮ್ಮ ಹಕ್ಕನ್ನು ಪ್ರತಿಪಾದಿಸಿ ಅಮೆಜಾನ್ ಮ್ಯೂಸಿಕ್, ಐಟ್ಯೂನ್ಸ್ ಮತ್ತು ಜಿಯೋ ಸಾವನ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಪರವಾನಗಿ ನೀಡುತ್ತಿದ್ದಾರೆ ಎಂದು ಸಂಸ್ಥೆಯು ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.

ವಾದವನ್ನು ಆಲಿಸಿದ ನ್ಯಾಯಾಲಯವು, ಇಳಯರಾಜ ಅವರು ಈ ಹಂತದಲ್ಲಿ ಸಂಗೀತ ಬಳಸುವುದನ್ನು ಮುಂದುವರಿಸಿದರೆ ಸರಿಗಮ ಸಂಸ್ಥೆಗೆ ಸರಿಪಡಿಸಲಾಗದ ಆರ್ಥಿಕ ನಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ, ಇಳಯರಾಜ ಅಥವಾ ಅವರ ಯಾವುದೇ ಏಜೆಂಟರು ಹಾಗೂ ಸಹವರ್ತಿಗಳು ಈ 134 ಚಿತ್ರಗಳ ಹಾಡುಗಳ ಮೇಲೆ ಮೂರನೇ ವ್ಯಕ್ತಿಗೆ ಯಾವುದೇ ಹಕ್ಕು ನೀಡಬಾರದು ಎಂದು ನಿರ್ಬಂಧ ಹೇರಲಾಗಿದೆ.

ಹಕ್ಕುಸ್ವಾಮ್ಯ ಕಾಯ್ದೆಯ ಅನ್ವಯ

ಭಾರತೀಯ ಹಕ್ಕುಸ್ವಾಮ್ಯ ಕಾಯ್ದೆ 1957 ರ ಪ್ರಕಾರ, ಚಲನಚಿತ್ರವೊಂದಕ್ಕೆ ನಿಯೋಜಿಸಲಾದ ಕೆಲಸದ ಮೊದಲ ಮಾಲೀಕರು ಆ ಚಿತ್ರದ ನಿರ್ಮಾಪಕರಾಗಿರುತ್ತಾರೆ. ಸರಿಗಮ ಸಂಸ್ಥೆಯು ಆ ನಿರ್ಮಾಪಕರಿಂದ ಹಕ್ಕುಗಳನ್ನು ಖರೀದಿಸಿರುವುದರಿಂದ, ಪ್ರಸ್ತುತ ಈ ಹಾಡುಗಳ ಮಾಲೀಕತ್ವ ಸಂಸ್ಥೆಯ ಹೆಸರಿನಲ್ಲಿದೆ ಎಂಬುದು ನ್ಯಾಯಾಲಯದ ಪ್ರಾಥಮಿಕ ಅವಲೋಕನವಾಗಿದೆ.

ಇಳಯರಾಜ ಅವರ ಮುಂದಿನ ನಡೆ

ಈ ಆದೇಶಕ್ಕೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಇಳಯರಾಜ ಅವರಿಗೆ ನ್ಯಾಯಾಲಯವು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಇದರ ಮುಂದಿನ ವಿಚಾರಣೆಯು ಏಪ್ರಿಲ್ ತಿಂಗಳಿನಲ್ಲಿ ನಡೆಯಲಿದೆ. ಈ ಪ್ರಕರಣವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಹಾಡುಗಳನ್ನು ಒಳಗೊಂಡಿರುವುದು ವಿಶೇಷ.

Read More
Next Story