
‘ಕಲ್ಕಿ 2898 ಎಡಿ’
'ಕಲ್ಕಿ 2' ನಿಂದ ದೀಪಿಕಾ ಔಟ್: ಹೊಸ ನಾಯಕಿಯ ರೇಸ್‌ನಲ್ಲಿ ದಕ್ಷಿಣದ ತಾರೆಯರು?
ʻಕಲ್ಕಿ 2898 ADʼ ಚಿತ್ರದ ಮುಂದುವರಿದ ಭಾಗದಿಂದ ನಿರ್ಗಮಿಸಿದ ನಂತರ ದೀಪಿಕಾ ಪಡುಕೋಣೆ ಕೊನೆಗೂ ಮೌನ ಮುರಿದಿದ್ದು, ಶಾರುಖ್ ಖಾನ್ ಜೊತೆಗಿನ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಅದರಲ್ಲಿ ಇಬ್ಬರೂ ಕೈ ಹಿಡಿದಿದ್ದಾರೆ.
ವಿಶ್ವಾದ್ಯಂತ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ 'ಕಲ್ಕಿ 2898 AD' ಚಿತ್ರದ ಮುಂದುವರಿದ ಭಾಗದಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊರನಡೆದಿದ್ದಾರೆ. ಚಿತ್ರದ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಈ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ಈ ಅನಿರೀಕ್ಷಿತ ಬೆಳವಣಿಗೆಯಿಂದ ತೆರವಾದ ನಾಯಕಿ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಮೂಲಗಳ ಪ್ರಕಾರ, ಚಿತ್ರತಂಡವು ದಕ್ಷಿಣ ಭಾರತದ ಪ್ರಮುಖ ನಟಿಯೊಬ್ಬರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲು ಚಿಂತನೆ ನಡೆಸಿದೆ.
ದೀಪಿಕಾ ಅವರ ನಿರ್ಗಮನದ ಬಗ್ಗೆ ವೈಜಯಂತಿ ಮೂವೀಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, "ಎಚ್ಚರಿಕೆಯ ಪರಿಗಣನೆಯ ನಂತರ ನಾವು ಬೇರೆಯಾಗಲು ನಿರ್ಧರಿಸಿದ್ದೇವೆ. ಮೊದಲ ಚಿತ್ರದ ಸುದೀರ್ಘ ಪಯಣದ ಹೊರತಾಗಿಯೂ, ನಮಗೆ ಸರಿಯಾದ ಪಾಲುದಾರಿಕೆಯನ್ನು ರಚಿಸಲು ಸಾಧ್ಯವಾಗಲಿಲ್ಲ. 'ಕಲ್ಕಿ 2898 AD' ನಂತಹ ಚಿತ್ರಕ್ಕೆ ಸಂಪೂರ್ಣ ಬದ್ಧತೆ ಮತ್ತು ಅದಕ್ಕಿಂತ ಹೆಚ್ಚಿನದು ಅಗತ್ಯವಿದೆ," ಎಂದು ತಿಳಿಸಿದೆ.
ಈ ನಿರ್ಗಮನಕ್ಕೆ ಹಲವು ಕಾರಣಗಳು ಚರ್ಚೆಯಾಗುತ್ತಿವೆ. ಕೆಲವು ವರದಿಗಳ ಪ್ರಕಾರ, ಎರಡನೇ ಭಾಗದಲ್ಲಿ ದೀಪಿಕಾ ಅವರ ಪಾತ್ರವನ್ನು ಕೇವಲ ಅತಿಥಿ ಪಾತ್ರಕ್ಕೆ ಸೀಮಿತಗೊಳಿಸಲಾಗಿತ್ತು, ಇದು ಅವರ ಅಸಮಾಧಾನಕ್ಕೆ ಕಾರಣವಾಯಿತು ಎನ್ನಲಾಗಿದೆ. ಇನ್ನು ಕೆಲವು ಮೂಲಗಳ ಪ್ರಕಾರ, ದೀಪಿಕಾ ಅವರು ಸಂಭಾವನೆ ಹೆಚ್ಚಳ, ಕೆಲಸದ ಅವಧಿ ಮತ್ತು ಇತರ ಕೆಲವು ಷರತ್ತುಗಳನ್ನು ವಿಧಿಸಿದ್ದರು. ಈ ಹಿಂದೆ ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರದಿಂದಲೂ ಇದೇ ರೀತಿಯ ಕಾರಣಗಳಿಗಾಗಿ ದೀಪಿಕಾ ಹೊರನಡೆದಿದ್ದರು ಎಂದು ಹೇಳಲಾಗುತ್ತಿದೆ.
ದೀಪಿಕಾ ಮೌನ ಮುರಿದು, ಹೊಸ ಸಿನಿಮಾ ಘೋಷಣೆ
'ಕಲ್ಕಿ 2' ನಿಂದ ಹೊರಬಂದ ನಂತರ ಮೌನ ಮುರಿದಿರುವ ದೀಪಿಕಾ, ಶಾರುಖ್ ಖಾನ್ ಅವರೊಂದಿಗಿನ ತಮ್ಮ ಆರನೇ ಚಿತ್ರ 'ಕಿಂಗ್' ನಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ. ಶಾರುಖ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಅವರು, "'ಓಂ ಶಾಂತಿ ಓಂ' ಚಿತ್ರೀಕರಣದ ಸಮಯದಲ್ಲಿ ಅವರು ನನಗೆ ಕಲಿಸಿದ ಮೊದಲ ಪಾಠವೆಂದರೆ, ಒಂದು ಸಿನಿಮಾ ಮಾಡುವ ಅನುಭವ ಮತ್ತು ನೀವು ಅದನ್ನು ಮಾಡುವ ಜನರು ಅದರ ಯಶಸ್ಸಿಗಿಂತ ಹೆಚ್ಚು ಮುಖ್ಯ. ಅಂದಿನಿಂದ ನಾನು ಪ್ರತಿ ನಿರ್ಧಾರದಲ್ಲೂ ಆ ಪಾಠವನ್ನು ಅಳವಡಿಸಿಕೊಂಡಿದ್ದೇನೆ," ಎಂದು ಬರೆದುಕೊಂಡಿದ್ದಾರೆ. ಇದು 'ಕಲ್ಕಿ' ಚಿತ್ರತಂಡಕ್ಕೆ ಪರೋಕ್ಷ ತಿರುಗೇಟು ಎಂದು ವಿಶ್ಲೇಷಿಸಲಾಗುತ್ತಿದೆ.
ಹೊಸ ನಾಯಕಿ ಯಾರು?
ಪ್ರಭಾಸ್, ಅಮಿತಾಭ್ ಬಚ್ಚನ್ ಅವರಂತಹ ಘಟಾನುಘಟಿಗಳು ನಟಿಸುತ್ತಿರುವ ಈ ಬೃಹತ್ ಪ್ರಾಜೆಕ್ಟ್‌ನಿಂದ ದೀಪಿಕಾ ಹೊರನಡೆದಿರುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ಮೊದಲ ಭಾಗದಲ್ಲಿ ಸುಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಅವರ ಜಾಗಕ್ಕೆ ಈಗ ಸೂಕ್ತ ನಾಯಕಿಯನ್ನು ಹುಡುಕುವ ಅನಿವಾರ್ಯತೆ ನಿರ್ದೇಶಕ ನಾಗ್ ಅಶ್ವಿನ್ ಅವರಿಗಿದೆ. ದಕ್ಷಿಣ ಭಾರತದ ಪ್ರಮುಖ ನಟಿಯರಾದ ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ್ ಅವರ ಹೆಸರುಗಳು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಮಹಾಭಾರತದ ಕಥಾಹಂದರ ಮತ್ತು ಭವಿಷ್ಯದ ಜಗತ್ತನ್ನು ಬೆಸೆಯುವ 'ಕಲ್ಕಿ'ಯ ಮುಂದಿನ ಭಾಗದಲ್ಲಿ ಯಾರು ನಾಯಕಿಯಾಗಲಿದ್ದಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.