ನೈಜ ಕಥೆಯಾಧಾರಿತ ʼಆಡು ಜೀವಿತಂʼ ರಿಲೀಸ್ ಡೇಟ್ ಫಿಕ್ಸ್!
ಪೃಥ್ವಿರಾಜ್ ಸುಕುಮಾರನ್ ಅಭಿನಯದ ʼಆಡು ಜೀವಿತಂʼ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದ್ದು, ಮಾ. 28 ರಂದು ಸಿನಿಮಾ ತೆರೆಗೆ ಬರಲಿದೆ.
ಮಾಲಿವುಡ್ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ʼಆಡು ಜೀವಿತಂʼ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದ್ದು, ಮಾ. 28 ರಂದು ಸಿನಿಮಾ ತೆರೆಗೆ ಬರಲಿದೆ.
ʼಆಡು ಜೀವಿತಂʼ ಸಿನಿಮಾ ಮಲಯಾಳಂ ಅತ್ಯಂತ ಜನಪ್ರಿಯವಾದ, ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ ‘ಆಡು ಜೀವಿತಂ’ ಕಾದಂಬರಿಯನ್ನು ಆಧರಿಸಿದೆ. ಹೆಸರಾಂತ ಬರಹಗಾರ ಬೆನ್ಯಾಮಿನ್ ನೈಜ ಕಥೆಯನ್ನಾಧರಿಸಿ ಬರೆದ ಕಾದಂಬರಿಯಾಗಿದೆ.
90ರ ದಶಕದ ಆರಂಭದಲ್ಲಿ ಕೇರಳದ ಯುವಕ ನಜೀಬ್ ಮುಹಮ್ಮದ್ ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ವಲಸೆ ಹೋಗಿ ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸುತ್ತಾ ಗುಲಾಮಗಿರಿಗೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಯಾಕೆ ಬಂತು ಮತ್ತು ಅದರಿಂದ ಆತ ಹೇಗೆ ಪಾರಾದ, ಆತ ಅನುಭವಿಸಿದ ಕಷ್ಟಗಳೇನು ಎಂಬುವುದನ್ನು ಈ ಸಿನಿಮಾದ ಕಥಾಹಂದರವಾಗಿದೆ.
ನಜೀಬ್ ಮುಹಮ್ಮದ್ ಜೀವನಾಧರಿತ ಚಿತ್ರ
ಆಡು ಜೀವಿತಂ ಚಿತ್ರದ ಸುದ್ದಿಗೋಷ್ಠಿ ಭಾನುವಾರ (ಮಾ. 21) ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ನಡೆಯಿತು. ಚಿತ್ರದ ಪ್ರಚಾರಕ್ಕಾಗಿ ನಟ ಪೃಥ್ವಿರಾಜ್ ಸುಕುಮಾರನ್ ಹಾಗೂ ನಿರ್ದೇಶಕ ಬ್ಲೆಸ್ಲಿ, ನಟ ಜಿಮ್ಮಿ ಜೀನ್ ಲೂಯಿಸ್ ಆಗಮಿಸಿದ್ದರು.
ಬರೋಬ್ಬರಿ 16 ವರ್ಷ…..
ಈ ಸಿನಿಮಾದ ಬಗ್ಗೆ ಮಾತನಾಡಿದ ನಟ ಪೃಥ್ವಿರಾಜ್ ಸುಕುಮಾರನ್, ಈ ಚಿತ್ರವನ್ನು ತೆರೆಗೆ ತರಲು ಬರೋಬ್ಬರಿ ಹದಿನಾರು ವರ್ಷಗಳೇ ಬೇಕಾಯಿತು. 2018 ರಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಯಿತು. ಬಳಿಕ ಬಂದ ಕೋವಿಡ್‌ನಿಂದಾಗಿ ಚಿತ್ರ ನಿರ್ಮಾಣಕ್ಕೆ ಸಮಯ ತೆಗೆದುಕೊಂಡಿದೆ. ನಜೀಬ್ ಮೊಹಮ್ಮದ್ ಅವರ ನೈಜ ಕಥೆಯನ್ನು ಈ ಚಿತ್ರದ ಮೂಲಕ ತೆರೆಯ ಮೇಲೆ ತಂದಿದ್ದೇವೆ. ಈ ಮೊದಲು ಬೆನ್ನಿಮನ್ ಅವರು ನಜೀಮ್ ಕಥೆಯನ್ನು ಪುಸ್ತಕ ರೂಪದಲ್ಲಿ ತಂದರು. ಆ ಪುಸ್ತಕ ಮಾರಾಟ ದಾಖಲೆಯನ್ನೆ ಬರೆಯಿತು. ನಂತರ ಅದನ್ನೇ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ ಎಂದು ಹೇಳಿದರು.
ಇನ್ನು ನಿರ್ದೇಶಕ ಬ್ಲೆಸ್ಸಿಯೊಂದಿಗೆ ಚಿತ್ರ ಮಾಡಲು ಒಪ್ಪಿಕೊಂಡಾಗ ವಿಷಯಗಳು ಹೇಗೆ ವಿಭಿನ್ನವಾಗಿವೆ ಎಂಬುದನ್ನು ವಿವರಿಸಿದ ಸುಕುಮಾರನ್, “ಈ ಚಿತ್ರಕ್ಕೆ ಒಪ್ಪಿಗೆ ನೀಡಿದಾಗ ನಾನು ಇನ್ನೂ ಒಂಟಿಯಾಗಿದ್ದೆ. ಮದುವೆನೂ ಆಗಿರಲಿಲ್ಲ. ತಂದೆಯೂ ಆಗಿರಲಿಲ್ಲ. ನಿರ್ಮಾಪಕ ಮತ್ತು ನಿರ್ದೇಶಕನಾಗಿ ಬದಲಾಗಿರಲಿಲ್ಲ. ನಾನು ವೈಯಕ್ತಿಕವಾಗಿ ಮತ್ತು ನಟನಾಗಿ ನನ್ನ ಜೀವನದಲ್ಲಿ ವಿಕಾಸದ ಹಲವು ಹಂತಗಳನ್ನು ಹಾದು ಹೋಗಿದ್ದೇನೆ. ಈ ಇಡೀ ಅವಧಿಯಲ್ಲಿ ನಿರಂತರವಾಗಿದ್ದುದು ಈ ಚಿತ್ರ ಮಾತ್ರ. ಇದು ಸುದೀರ್ಘ ಪ್ರಯಾಣವಾಗಿದೆ ಎಂದರು.
ಇನ್ನು ಈ ಚಿತ್ರದ ಪಾತ್ರಕ್ಕಾಗಿ ಪ್ರಥ್ವಿರಾಜ್ ಸುಕುಮಾರನ್ 31 ಕೆಜಿ ತೂಕ ಇಳಿಸಿಕೊಂಡಿದ್ದರು. ಸುಮಾರು 3 ದಿನಗಳ ಕಾಲ ಉಪವಾಸವನ್ನು ಮಾಡಿ ತೂಕ ಇಳಿಸಿರುವುದಾಗಿ ಬಹಿರಂಗಪಡಿಸಿದರು.
ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಪೋಸ್ಟರ್, ಟೀಸರ್ ಸಿನಿ ಪ್ರಿಯರ ಕುತೂಹಲ ಹೆಚ್ಚಿಸಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಈ ಸಿಮಾಕ್ಕೆ ಸಂಗೀತ ನೀಡಿದ್ದಾರೆ. ರಸೂಲ್ ಪೂಕುಟ್ಟಿ ಮತ್ತು ಸುನಿಲ್ ಕೆಎಸ್. ಚಿತ್ರದ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಮತ್ತು ಚಿತ್ರಕ್ಕೆ ಶ್ರೀಕರ್ ಪ್ರಸಾದ್ ಸಂಕಲನವಿದೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶಿಸಿದ ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಆಡು ಜೀವಿತಂ ಸಿನಿಮಾ ಮಲಯಾಳಂ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದೇ ತಿಂಗಳ 28 ರಂದು ದೇಶಾದ್ಯಂತ ಸಿನಿಮಾ ಬಿಡುಗಡೆಯಾಗಿತ್ತಿದೆ. ಕರ್ನಾಟಕದಲ್ಲಿ ಈ ಚಿತ್ರ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ರಿಲೀಸ್ ಆಗಲಿದೆ.