
ಡೆವಿಲ್
Devil Trailer| ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ; ಡೆವಿಲ್ ಟ್ರೇಲರ್ನಲ್ಲಿ ಗಮನ ಸೆಳೆದ ದರ್ಶನ್ ಡೈಲಾಗ್
'ಡೆವಿಲ್' ಚಿತ್ರವನ್ನು ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ಈ ಹಿಂದೆ 'ತಾರಕ್' ಚಿತ್ರ ಮಾಡಿದ್ದ ಪ್ರಕಾಶ್ ಅವರೇ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಒದಗಿಸಿದ್ದಾರೆ.
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ. ಇದು ದರ್ಶನ್ ಅಭಿಮಾನಿಗಳಿಗೆ ನಿಜಕ್ಕೂ ಭರ್ಜರಿ ಟ್ರೀಟ್ ನೀಡಿದ್ದು, ಈ ಮೂಲಕ ತಮ್ಮ ನೆಚ್ಚಿನ 'ಡಿ ಬಾಸ್'ನ ಹೊಸ ಅವತಾರವನ್ನು ಬೆಳ್ಳಿತೆರೆಯಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಟ್ರೇಲರ್ ಬಿಡುಗಡೆಗೊಂಡ ಕ್ಷಣ ಮಾತ್ರದಲ್ಲೇ 3ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಮಾಸ್ ಡೈಲಾಗ್‌ಗಳ ಹಬ್ಬ
'ಡೆವಿಲ್' ಟ್ರೈಲರ್ ಮಾಸ್ ಡೈಲಾಗ್‌ಗಳಿಂದಲೇ ಗಮನ ಸೆಳೆದಿದೆ. ಟ್ರೈಲರ್ ಶುರುವಾದಾಗಿನಿಂದ ಕೊನೆಯವರೆಗೂ ಬ್ಯಾಕ್ ಟು ಬ್ಯಾಕ್ ಡೈಲಾಗ್‌ಗಳು ಬರುತ್ತಲೇ ಹೋಗುತ್ತವೆ. ಕಾಂಚಣ ಮಿಣ ಮಿಣ ಎನ್ನುತ್ತಾ ಎಂಟ್ರಿ ಕೊಡುವ ದರ್ಶನ್, ಸ್ಟೈಲಿಷ್ ಆಗಿ ಡೈಲಾಗ್ ಹೊಡೆಯುತ್ತಾ ಸಾಗುತ್ತಾರೆ. ಕ್ಷಣಕ್ಕೊಂದು ಬಣ್ಣ, ಘಳಿಗೆಗೊಂದು ವೇಷ ಎಂಬ ನಾಯಕಿಯ ಪ್ರಶ್ನೆಗೆ, ಇಲ್ಲಿ 'ಡೆವಿಲ್'ನ ಬಣ್ಣ ಹಲವು ಎಂಬ ಸೂಚನೆ ನೀಡಲಾಗಿದೆ. ಆಸೆ ಪಟ್ರೆ ಕೇಳ್ಬೇಕು, ಕೊಡದಿದ್ರೆ ಕಿತ್ಕೊಳ್ಬೇಕು ಎಂಬ ಡೈಲಾಗ್ ಸೇರಿದಂತೆ ಖೇಲ್ ಖತಂ, ಮ್ಯಾಟರ್ ಬಂದ್, ಏನೋ ನಿಮ್ ಪ್ರಾಬ್ಲಂ, ಮತ್ತು ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾನು ಬರ್ತಿದ್ದೀನಿ ಚಿನ್ನ ಎಂಬ ಡೈಲಾಗ್‌ಗಳ ಮೂಲಕ ಟ್ರೈಲರ್ ಕೊನೆಗೊಳ್ಳುತ್ತದೆ. ಈ ಸಂಭಾಷಣೆಗಳು ಇದೀಗ ಟ್ರೆಂಡ್ ಸೃಷ್ಟಿಸಿವೆ.
ಈ ಸಿನಿಮಾದಲ್ಲಿ ದರ್ಶನ್ ಅವರನ್ನು ಅತ್ಯಂತ ಸ್ಟೈಲಿಷ್ ಆಗಿ ತೋರಿಸಲಾಗಿದೆ. ಸಿನಿಮಾ ಮಾಸ್ ಕಥಾನಕವನ್ನು ಹೊಂದಿರುವ ಕಾರಣ, ಟ್ರೈಲರ್‌ನಲ್ಲಿ ನಾಯಕಿಯರಾದ ಶರ್ಮಿಳಾ ಮಾಂಡ್ರೆ ಮತ್ತು ರಚನಾ ರೈ ಅವರ ಪಾತ್ರಗಳಿಗೆ ಕಡಿಮೆ ಜಾಗ ದೊರಕಿದೆ. ಬದಲಾಗಿ, ದರ್ಶನ್ ಅವರ ಮಾಸ್ ಹೀರೋ ಪಾತ್ರವೇ ಪ್ರೇಕ್ಷಕರನ್ನು ಆವರಿಸಿಕೊಂಡಿದೆ.
ಬಿಗ್ಬಾಸ್ ವಿನಯ್ ಗೌಡ, ಗಿಲ್ಲಿ ನಟ ಸೇರಿದಂತೆ ಅಚ್ಯುತ್ ಕುಮಾರ್, ಶೋಭರಾಜ್, ಮಹೇಶ್ ಮಾಂಜ್ರೇಕರ್, ಶ್ರೀನಿವಾಸ್ ಪ್ರಭು, ತುಳಸಿ ಶಿವಮಣಿ, ರೋಜರ್ ನಾರಾಯಣ್ ಸೇರಿದಂತೆ ಇತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಡೆವಿಲ್' ಚಿತ್ರವನ್ನು ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ಈ ಹಿಂದೆ 'ತಾರಕ್' ಚಿತ್ರ ಮಾಡಿದ್ದ ಪ್ರಕಾಶ್ ಅವರೇ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಒದಗಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮತ್ತು ಸುಧಾಕರ್ ಎಸ್.ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ವೈಷ್ಣೋ ಸ್ಟುಡಿಯೋಸ್ ಮತ್ತು ಜೈ ಮಾತಾ ಕಾಂಬೈನ್ಸ್ ನಿರ್ಮಿಸಿರುವ ಈ ಚಿತ್ರವು 30 ರಿಂದ 40 ಕೋಟಿ ಬಜೆಟ್‌ನಲ್ಲಿ ಸಿದ್ಧಗೊಂಡಿದೆ. ಈ ಸಿನಿಮಾ ಡಿಸೆಂಬರ್ 11 ರಂದು ರಾಜ್ಯದ ಬಹುತೇಕ ಥಿಯೇಟರ್‌ಗಳಲ್ಲಿ 'ಡೆವಿಲ್' ಸಿನಿಮಾ ರಿಲೀಸ್ ಆಗಲು ಸಜ್ಜಾಗಿದೆ.

