
ಮುಂದಿನ ವಾರದಿಂದ ‘ದಿ ಡೆವಿಲ್’ ಚಿತ್ರೀಕರಣದಲ್ಲಿ ದರ್ಶನ್ ಭಾಗಿ
ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಜಾಮೀನನ ಮೇಲೆ ದರ್ಶನ್ ಕಳೆದ ವರ್ಷದ ಕೊನೆಯಲ್ಲೇ ಹೊರಬಂದರೂ, ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರಲಿಲ್ಲ. ಅವರು ಯಾವಾಗಿನಿಂದ ಚಿತ್ರೀಕರಣದಲ್ಲಿ ಭಾಗವಹಿಸಬಹುದು ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇತ್ತು.
ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವುದರಿಂದ, ಒಂದು ಹಂತದ ಚಿಕಿತ್ಸೆಯ ನಂತರ ‘ದಿ ಡೆವಿಲ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವುದಾಗಿ ದರ್ಶನ್ ಹೇಳಿಕೊಂಡಿದ್ದರು. ಅದರಂತೆ ಅವರು ಮುಂದಿನ ವಾರದಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
‘ಮಿಲನಾ’ ಪ್ರಕಾಶ್ ನಿರ್ದೇಶನ ಮಾಡುತ್ತಿರುವ ‘ದಿ ಡೆವಿಲ್’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಮುಂದಿನ ವಾರದಿಂದ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇರುವುದರಿಂದ ಈ ಹಂತದಲ್ಲಿ ಬರೀ ಮಾತಿನ ಭಾಗದ ಚಿತ್ರೀಕರಣ ಮಾತ್ರ ಮಾಡಲಾಗುವುದಂತೆ. ಸಾಹಸ ಸನ್ನಿವೇಶಗಳ ಚಿತ್ರೀಕರಣವಾಗಲಿ ಅಥವಾ ಬೇರೆ ಯಾವುದೇ ರಿಸ್ಕ್ ಇರುವ ಸನ್ನಿವೇಶಗಳ ಚಿತ್ರೀಕರಣ ಮಾಡುವುದಿಲ್ಲ ಎಂದು ಪ್ರಕಾಶ್ ತಿಳಿಸಿದ್ದಾರೆ.
ಎರಡನೇ ಹಂತದ ಚಿತ್ರೀಕರಣ ಬೆಂಗಳೂರು, ಮೈಸೂರು, ಹೈದರಾಬಾದ್ ಹಾಗೂ ರಾಜಸ್ಥಾನದಲ್ಲಿ ನಡೆಯಲಿದೆ. ಈ ಹಂತದ ಚಿತ್ರೀಕರಣದಲ್ಲಿ ದರ್ಶನ್, ರಚನಾ ರೈ, ತುಳಸಿ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭರಾಜ್ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.
ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ದಿ ಡೆವಿಲ್’ ಚಿತ್ರಕ್ಕೆ ಸುಧಾಕರ್ ರಾಜ್ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತವಿದೆ. ‘ದಿ ಡೆವಿಲ್’ ಚಿತ್ರವು ಇದೇ ವರ್ಷ ಬಿಡುಗಡೆಯಾಗಲಿದೆ.