
ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾ ಮಾಡುವುದಿಲ್ಲ ಎಂದ ದರ್ಶನ್
‘ಕೊನೆಯ ಉಸಿರು ಇರುವವರೆಗೂ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ. ಕನ್ನಡದ ಜನತೆ ನನಗೆ ಪ್ರೀತಿ, ಆಶೀರ್ವಾದ ನೀಡಿದ್ದಾರೆ. ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲಿಯೇ ಇದ್ದು ಕನ್ನಡಿಗರು ಕೊಟ್ಟಿರುವ ಪ್ರೀತಿ ಉಳಿಸಿ ಕಾಪಾಡಿಕೊಂಡು ಹೋಗುತ್ತೇನೆ …’
ಹಾಗಂತ ದರ್ಶನ್ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಾಗುತ್ತಿಲ್ಲ ಎಂದು ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳಿಸಿದ್ದ ಅವರು, ಅದರಲ್ಲಿ ಬೇರೆ ಕನ್ನಡವಲ್ಲದೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು. ಈಗ ಅದೇ ಮಾತನ್ನು ಪುನರುಚ್ಛರಿಸಿದ್ದಾರೆ.
ದರ್ಶನ್, ಧನ್ವೀರ್ ಅಭಿನಯದ ‘ವಾಮನ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಬೇಕಿತ್ತು. ಗುರುವಾರ ಸಂಜೆ ಪ್ರಸನ್ನ ಚಿತ್ರಮಂದಿರದಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭ ಸಹ ಆಯೋಜಿತವಾಗಿತ್ತು. ಆದರೆ, ರಾಜಾಸ್ತಾನದಲ್ಲಿ ‘ದಿ ಡೆವಿಲ್’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವುದರಿಂದ, ದರ್ಶನ್ ಬರಲಾಗಲಿಲ್ಲ. ತಾವು ಬರದಿದ್ದರೂ, ವೀಡಿಯೋ ಮೂಲಕ ದರ್ಶನ್ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ದರ್ಶನ್, ‘ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ. ಬಹಳಷ್ಟು ಜನ ಬೇರೆಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ನಾವು ಕೆಲವರು ಮಾತ್ರ ಇಲ್ಲಿಗೆ ಸೀಮಿತ ಅಂತ ಕನ್ನಡದಲ್ಲೇ ಚಿತ್ರಗಳನ್ನು ಮಾಡುತ್ತಿದ್ದೇವೆ. ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ನೋಡದಿದ್ದರೆ, ಇಲ್ಲಿಂದ ಬಿಟ್ಟು ಹೋಗುತ್ತೇವೆ ಎಂದರ್ಥವಲ್ಲ. ಜನರ ಆಶೀರ್ವಾದದಿಂದ ಇಲ್ಲೇ ತೋಟ ಮಾಡಿಕೊಂಡು ಇರುತ್ತೇವೆ. ಅಚ್ಚುಕಟ್ಟಾಗಿ ಹಸು ಸಾಕಿಕೊಂಡು ಇಲ್ಲೇ ಇರುತ್ತೇವೆ. ಆದರೆ, ಯಾವತ್ತಿದ್ದರೂ ನಾವು ಕನ್ನಡಕ್ಕೇ ಸಿನಿಮಾ ಮಾಡೋದು. ಅದು ಬಿಟ್ಟು ಬೇರೆ ಭಾಷೆಯ ಚಿತ್ರಗಳನ್ನು ಮಾಡುವುದಿಲ್ಲ. ಇದು ಬಿಟ್ಟರೆ ನಮಗೆ ಬೇರೇನೂ ಗೊತ್ತಿಲ್ಲ. ನಾವು ನಂಬಿಕೊಂಡು ಬಂದಿರುವುದು ಕನ್ನಡ ಚಿತ್ರರಂಗವನ್ನು ಮತ್ತು ಕನ್ನಡ ಪ್ರೇಕ್ಷಕರನ್ನು. ಚಿತ್ರಮಂದಿರದವರು ನಮ್ಮನ್ನು ನಂಬಿಕೊಂಡಿರುತ್ತಾರೆ. ನಾವು ಅವರನ್ನು ನಂಬಿರುತ್ತೇವೆ. ಇದೆಲ್ಲವೂ ಒಂದಕ್ಕೊಂದು ಲಿಂಕ್ ಆಗಿರುತ್ತವೆ. ಎಲ್ಲರೂ ಉಳಿಯಬೇಕಾದರೆ, ಕನ್ನಡ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ’ ಎಂದಿದ್ದಾರೆ.
ಚೇತನ್ ಗೌಡ ನಿರ್ಮಿಸಿರುವ ‘ವಾಮನ’ ಚಿತ್ರದಲ್ಲಿ ಧನ್ವೀರ್, ರೀಷ್ಮಾ ನಾಣಯ್ಯ, ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆ.ಆರ್. ಪೇಟೆ, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೊಚ್ ಸುಧಿ, ಭೂಷಣ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಶಂಕರ್ ರಾಮನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.