
ವೈರಲ್ ಆಗಿರುವ ದರ್ಶನ್- ಪವಿತ್ರಾ ಗೌಡ ಪೋಟೋ
ದರ್ಶನ್ -ಪವಿತ್ರಾ ಗೌಡ 'ಮದುವೆ' ಫೋಟೋ ವೈರಲ್: ಏನಿದರ ರಹಸ್ಯ?
ದರ್ಶನ್-ಪವಿತ್ರಾಗೌಡ ಮದುವೆಯದ್ದು ಎನ್ನಲಾದ ಫೋಟೋಗಳನ್ನು 'ಲೀಕ್' ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾಗೌಡ ಮದುವೆಯದ್ದು ಎನ್ನಲಾದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ದರ್ಶನ್ ಮತ್ತು ಪವಿತ್ರಾ ಗೌಡ ಅವರು ಬಿಳಿ ಬಣ್ಣದ ರೇಷ್ಮೆ ವಸ್ತ್ರ ಧರಿಸಿ ವಧು-ವರರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪವಿತ್ರಾಗೌಡ ಕುತ್ತಿಗೆಯಲ್ಲಿ ಅರಿಶಿಣ ದಾರದ ಮಾಂಗಲ್ಯ ಧರಿಸಿದ್ದು, ಕೆನ್ನೆಗೆ ಅರಿಶಿಣ ಮತ್ತು ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. ದರ್ಶನ್ ಅವರೂ ಸಹ ಹಣೆಗೆ ತಿಲಕ ಇಟ್ಟುಕೊಂಡಿದ್ದಾರೆ. ಫೋಟೋಗಳು ಸುಮಾರು 10 ವರ್ಷಗಳಷ್ಟು ಹಳೆಯದ್ದು, ಇಬ್ಬರೂ ಅನ್ಯೋನ್ಯವಾಗಿ ಸೆಲ್ಫಿಗೆ ಪೋಸ್ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಫೋಟೋ ಉದ್ದೇಶಪೂರ್ವಕವಾಗಿ 'ಲೀಕ್' ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಅವರ ವೈಯಕ್ತಿಕ ಸಂಬಂಧ, ಮದುವೆ ರೂಪದಲ್ಲಿ ಬಿಂಬಿಸಲು ಪ್ರಯತ್ನಿಸಿದಂತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
ಎಐ (AI) ಫೋಟೋಗಳ ಚರ್ಚೆ
ದರ್ಶನ್- ಪವಿತ್ರಾಗೌಡ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಅವು ನಿಜವಾಗಿಯೂ ಹಳೆಯ ಖಾಸಗಿ ಫೋಟೋಗಳೇ ಅಥವಾ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ಚಿತ್ರಗಳೇ ಎಂಬ ಚರ್ಚೆಯೂ ಶುರುವಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಪವಿತ್ರಾ ಗೌಡ ನ್ಯಾಯಾಂಗ ಬಂಧನದಲ್ಲಿರುವ ಸಮಯದಲ್ಲೇ ಫೋಟೋಗಳು ವೈರಲ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿವೆ.
ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ನ. 3ರಂದು ಅಧಿಕೃತವಾಗಿ ದೋಷಾರೋಪ ಹೊರಿಸಲು ನ್ಯಾಯಾಲಯ ನಿರ್ಧರಿಸಿದೆ. ಬೆಂಗಳೂರಿನ 57ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಇಂದು (ಅ.31) ವಿಚಾರಣೆ ನಡೆದಿದ್ದು, ಜೈಲಿನಿಂದಲೇ ಆರೋಪಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಅವರು ಕಾಲಾವಕಾಶಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದೋಷಾರೋಪ ನಿಗದಿಯನ್ನು ನ.3ಕ್ಕೆ ಮುಂದೂಡಲಾಗಿದೆ.




