Renukaswamy case: Prosecution suffers setback, High Court grants relief to five!
x

ಮಾಫಿ ಸಾಕ್ಷಿ ಪ್ರದೋಷ್ ಅವರನ್ನು ನ್ಯಾಯಾಲಯಕ್ಕೆ ಕರೆತರುವಾಗ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ದರ್ಶನ್ ಪರ ವಕೀಲರು ಮೊದಲ ಅರ್ಜಿ ಸಲ್ಲಿಸಿದ್ದಾರೆ. 

ಮಾಫಿ ಸಾಕ್ಷಿ ಪ್ರದೋಷ್ ಭದ್ರತೆ, ವಿಚಾರಣಾ ಪ್ರಕ್ರಿಯೆ ಪ್ರಶ್ನಿಸಿ ಸೆಷನ್ಸ್ ಕೋರ್ಟ್‌ಗೆ ನಟ ದರ್ಶನ್ 2 ಅರ್ಜಿ

ಪ್ರದೋಷ್‌ ಅವರನ್ನು ಪ್ರಕರಣದ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ಅವರ ವಿಚಾರಣೆ ಯಾವ ರೀತಿಯಲ್ಲಿ ನಡೆಯಬೇಕು ಎಂಬುದರ ಕುರಿತು ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ.


Click the Play button to hear this message in audio format

ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಇದೀಗ ಹೊಸದೊಂದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬನಾಗಿದ್ದು, ಬಳಿಕ ಮಾಫಿ ಸಾಕ್ಷಿಯಾಗಿ (ಅಪ್ರೂವರ್) ಬದಲಾಗಿರುವ ಪ್ರದೋಷ್‌ಗೆ ಒದಗಿಸಿರುವ ಭದ್ರತೆ, ಬೆಂಗಾವಲು ಪಡೆ ವ್ಯವಸ್ಥೆ ಹಾಗೂ ಆತನ ವಿಚಾರಣೆ ನಡೆಸುತ್ತಿರುವ ಕಾನೂನು ಕ್ರಮಗಳನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು 59ನೇ ಸೆಷನ್ಸ್ ನ್ಯಾಯಾಲಯಕ್ಕೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಈ ಬೆಳವಣಿಗೆಯು ಹೈಪ್ರೊಫೈಲ್ ಕೊಲೆ ಪ್ರಕರಣದ ವಿಚಾರಣೆಗೆ ಹೊಸ ತಿರುವು ನೀಡಿದೆ.

ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಮೊದಲ ಅರ್ಜಿಯು ಪ್ರದೋಷ್ ಅವರ ಭದ್ರತಾ ಶಿಷ್ಟಾಚಾರಗಳಿಗೆ ಸಂಬಂಧಿಸಿದ್ದಾಗಿದೆ. ಜೈಲಿನಿಂದ ಪ್ರದೋಷ್ ಅವರನ್ನು ನ್ಯಾಯಾಲಯಕ್ಕೆ ಕರೆತರುವಾಗ ಅನುಸರಿಸುತ್ತಿರುವ ಭದ್ರತಾ ಕ್ರಮಗಳ ಬಗ್ಗೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಫಿ ಸಾಕ್ಷಿಯನ್ನು ಕರೆತರುವಾಗ ಒದಗಿಸಲಾಗುವ ಎಸ್ಕಾರ್ಟ್ (ಬೆಂಗಾವಲು) ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಬೇಕು. ಅಲ್ಲದೆ, ನ್ಯಾಯಾಲಯಕ್ಕೆ ಕರೆತರುವ ಮಾರ್ಗಮಧ್ಯೆ ಅಥವಾ ಆವರಣದಲ್ಲಿ ಪ್ರದೋಷ್ ಅವರನ್ನು ಇತರರು ಭೇಟಿಯಾಗದಂತೆ ತಡೆಯಲು ಅಗತ್ಯ ನಿರ್ಬಂಧಗಳನ್ನು ವಿಧಿಸಬೇಕು. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬೆಂಗಾವಲು ಪಡೆಗೆ ಸೂಕ್ತ ಹಾಗೂ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಬೇಕು ಎಂದು ದರ್ಶನ್ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾರೆ.

ಕಾಯ್ದಿರಿಸಿದ ಆದೇಶ

ದರ್ಶನ್ ಅವರ ಈ ಭದ್ರತಾ ಆಕ್ಷೇಪಣೆಯ ಅರ್ಜಿಗೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) ನ್ಯಾಯಾಲಯದಲ್ಲಿ ಸಮರ್ಥನೆ ನೀಡಿದ್ದಾರೆ. ನ್ಯಾಯಾಲಯವು ಈ ಹಿಂದೆ ನೀಡಿದ್ದ ಸ್ಪಷ್ಟ ನಿರ್ದೇಶನದಂತೆಯೇ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಹಾಗೂ ಕಾರಾಗೃಹದ ಅಧಿಕಾರಿಗಳು ಬಿಗಿ ಭದ್ರತೆಯೊಂದಿಗೆ ಪ್ರದೋಷ್ ಅವರನ್ನು ಜೈಲಿನಿಂದ ಕೋರ್ಟ್‌ಗೆ ಕರೆತರುತ್ತಿದ್ದಾರೆ ಎಂದು ಎಸ್‌ಪಿಪಿ ವಿವರಿಸಿದರು.

ಭದ್ರತಾ ದೃಷ್ಟಿಯಿಂದ ಜೈಲು ಸಿಬ್ಬಂದಿಯು ಕಡ್ಡಾಯವಾಗಿ ಬಾಡಿ ಕ್ಯಾಮೆರಾಗಳನ್ನು ಧರಿಸಿಯೇ ಕರ್ತವ್ಯ ನಿರ್ವಹಿಸಿದ್ದಾರೆ. ಇದಲ್ಲದೆ, ಪ್ರದೋಷ್ ಅವರ ರಕ್ಷಣೆಗಾಗಿ ಖುದ್ದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅವರೇ ಪೈಲಟ್ ವಾಹನದಲ್ಲಿ ಬೆಂಗಾವಲು ಒದಗಿಸಿದ್ದಾರೆ ಎಂಬ ಮಾಹಿತಿಯನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಅಂತಿಮವಾಗಿ, ಮಾಫಿ ಸಾಕ್ಷಿಯ ಭದ್ರತೆಯನ್ನು ಪರಿಗಣಿಸಿ ಅಗತ್ಯ ನಿರ್ದೇಶನ ನೀಡುವಂತೆ ಎಸ್‌ಪಿಪಿ ಕೋರಿದರು. ಈ ಅರ್ಜಿಗೆ ಸಂಬಂಧಿಸಿದಂತೆ ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದ್ದು, ಶನಿವಾರದಂದು ತನ್ನ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

ವಿಚಾರಣಾ ಪ್ರಕ್ರಿಯೆ ಬಗ್ಗೆ ಮತ್ತೊಂದು ಅರ್ಜಿ

ಭದ್ರತೆಯ ವಿಚಾರದ ಜೊತೆಗೆ, ಮಾಫಿ ಸಾಕ್ಷಿ ಪ್ರದೋಷ್ ಅವರನ್ನು ವಿಚಾರಣೆಗೆ ಒಳಪಡಿಸುತ್ತಿರುವ ಕ್ರಮದ ಬಗ್ಗೆಯೂ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮತ್ತೊಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ಸಾಕ್ಷ್ಯ ಕಾಯ್ದೆಯ (ಇಂಡಿಯನ್ ಎವಿಡೆನ್ಸ್ ಆಕ್ಟ್) ಸೆಕ್ಷನ್ 137 ಮತ್ತು 138ರ ಅಡಿಯಲ್ಲಿ ಸಾಕ್ಷಿಗಳ ವಿಚಾರಣೆ ಹಾಗೂ ಪಾಟೀ ಸವಾಲು ನಡೆಸುವ ವಿಧಾನಗಳ ಕುರಿತಾದ ಕೆಲವು ತಾಂತ್ರಿಕ ಅಂಶಗಳನ್ನು ಈ ಅರ್ಜಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ದರ್ಶನ್ ಪರ ವಕೀಲರು ಸಲ್ಲಿಸಿರುವ ಈ ಎರಡನೇ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಅವರು ನ್ಯಾಯಾಲಯದಿಂದ ಕಾಲಾವಕಾಶ ಕೋರಿದ್ದಾರೆ. ಅಕ್ಟೋಬರ್ 3ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವಂತೆ ಅವರು ಮಾಡಿದ ಮನವಿಯನ್ನು ಪುರಸ್ಕರಿಸಿರುವ 59ನೇ ಸೆಷನ್ಸ್ ಕೋರ್ಟ್, ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದೆ.

Read More
Next Story