
ದಲೈ ಲಾಮಾ ಅವರ ಪ್ರತಿಬಿಂಬಗಳು' ಕೃತಿಗೆ 'ಅತ್ಯುತ್ತಮ ಆಡಿಯೋ ಬುಕ್, ನಿರೂಪಣೆ ಮತ್ತು ಸ್ಟೋರಿ ಟೆಲ್ಲಿಂಗ್ ರೆಕಾರ್ಡಿಂಗ್' ವಿಭಾಗದಲ್ಲಿ ಈ ಗೌರವ ಲಭಿಸಿದೆ.
Grammy Awards 2026 | ಶಾಂತಿ ದೂತ ದಲೈ ಲಾಮಾಗೆ ಒಲಿದ ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ
ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು 68ನೇ ಆವೃತ್ತಿಯ ಗ್ರ್ಯಾಮಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ವಿಶ್ವದ ಅತ್ಯುನ್ನತ ಸಂಗೀತ ಗೌರವ 'ಗ್ರ್ಯಾಮಿ ಪ್ರಶಸ್ತಿ'ಗಳ 68ನೇ ಆವೃತ್ತಿಗೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೋಮವಾರ ನಡೆದ ಪ್ರಶಸ್ತಿಗಳ ಫ್ರೀ - ಶೋ ಕಾರ್ಯಕ್ರಮದಲ್ಲಿ ದಲೈ ಲಾಮಾ ಅವರ 'ಧ್ಯಾನಗಳು: ಪರಮಪೂಜ್ಯ ದಲೈ ಲಾಮಾ ಅವರ ಪ್ರತಿಬಿಂಬಗಳು' ('Meditations: The Reflections of His Holiness the Dalai Lama') ಕೃತಿಗೆ ಅತ್ಯುತ್ತಮ ಆಡಿಯೋ ಬುಕ್, ನಿರೂಪಣೆ ಮತ್ತು ಸ್ಟೋರಿ ಟೆಲ್ಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ದಲೈ ಲಾಮಾ ಅವರ ಪರವಾಗಿ ಅಮೆರಿಕದ ಖ್ಯಾತ ಗಾಯಕ ರೂಫಸ್ ವೇನ್‌ರೈಟ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಈ ಆಡಿಯೋಬುಕ್ ಅನ್ನು ಭಾರತೀಯ ಮೂಲದ ಕಬೀರ್ ಸೆಹಗಲ್ ನಿರ್ಮಿಸಿದ್ದಾರೆ. ಸುಮಾರು 100 ಗಂಟೆಗಳಿಗೂ ಹೆಚ್ಚು ಕಾಲ ದಲೈ ಲಾಮಾ ಅವರು ನೀಡಿದ ಭಾಷಣಗಳು ಮತ್ತು ಸಂವಾದಗಳನ್ನು ಕ್ರೋಢೀಕರಿಸಿ ಈ ವಿಶಿಷ್ಟ ಆಲ್ಬಂ ಸಿದ್ಧಪಡಿಸಲಾಗಿದೆ. ಇದರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ ಉಸ್ತಾದ್ ಅಮ್ಜದ್ ಅಲಿ ಖಾನ್ ಮತ್ತು ಅವರ ಪುತ್ರರಾದ ಅಮಾನ್ ಹಾಗೂ ಅಯಾನ್ ಅಲಿ ಬಂಗಾಶ್ ಅವರ ಸರೋದ್ ವಾದನವು ಹಿನ್ನೆಲೆಯಾಗಿ ಮೂಡಿಬಂದಿದೆ. ಮ್ಯಾಗಿ ರೋಜರ್ಸ್, ಆಂಡ್ರಾ ಡೇ ಮತ್ತು ರೂಫಸ್ ವೇನ್‌ರೈಟ್ ಅಂತಹ ಅಂತರಾಷ್ಟ್ರೀಯ ಕಲಾವಿದರು ಈ ಯೋಜನೆಯಲ್ಲಿ ಭಾಗಿಯಾಗಿದ್ದಾರೆ.
ಈ ವಿಭಾಗದಲ್ಲಿ ದಲೈ ಲಾಮಾ ಅವರಿಗೆ ಪ್ರಬಲ ಪೈಪೋಟಿ ಎದುರಾಗಿತ್ತು. ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೇತಾಂಜಿ ಬ್ರೌನ್ ಜಾಕ್ಸನ್, ಖ್ಯಾತ ಹಾಸ್ಯನಟ ಟ್ರೆವರ್ ನೋವಾ, ಮಿಲಿ ವನಿಲಿಯ ಫ್ಯಾಬ್ ಮೊರ್ವನ್ ಮತ್ತು ನಟಿ ಕ್ಯಾಥಿ ಗಾರ್ವರ್ ಅವರ ಕೃತಿಗಳು ಸಹ ನಾಮನಿರ್ದೇಶನಗೊಂಡಿದ್ದವು. ಆದರೆ, ಮಾನವೀಯತೆ ಮತ್ತು ಶಾಂತಿಯ ಸಂದೇಶ ಸಾರುವ ದಲೈ ಲಾಮಾ ಅವರು ವಿಜೇತರಾಗಿದ್ದಾರೆ.
ದಲೈ ಲಾಮಾ ಹೇಳಿದ್ದೇನು?
ಪ್ರಶಸ್ತಿ ಗೆದ್ದ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ದಲೈ ಲಾಮಾ ಅವರು, "ಈ ಗೌರವವನ್ನು ನಾನು ಕೃತಜ್ಞತೆ ಮತ್ತು ನಮ್ರತೆಯಿಂದ ಸ್ವೀಕರಿಸುತ್ತೇನೆ. ಇದನ್ನು ನಾನು ವೈಯಕ್ತಿಕ ಸಾಧನೆಯಾಗಿ ನೋಡದೆ, ಎಂಟು ಬಿಲಿಯನ್ ಮಾನವರ ಸಾಮೂಹಿಕ ಯೋಗಕ್ಷೇಮಕ್ಕಾಗಿ ನಾವು ಹೊಂದಿರುವ ಜಾಗತಿಕ ಜವಾಬ್ದಾರಿಯ ಗುರುತಿಸುವಿಕೆಯಾಗಿ ನೋಡುತ್ತೇನೆ. ಶಾಂತಿ, ಸಹಾನುಭೂತಿ ಮತ್ತು ಮಾನವೀಯತೆಯ ಏಕತೆಯ ಸಂದೇಶವನ್ನು ಹರಡಲು ಈ ಪ್ರಶಸ್ತಿ ಸಹಾಯ ಮಾಡುತ್ತದೆ ಎಂಬ ನಂಬಿಕೆ ನನಗಿದೆ ಎಂದು ಅವರು ತಿಳಿಸಿದ್ದಾರೆ.
68ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭವು ಲಾಸ್ ಏಂಜಲೀಸ್‌ನ ಕ್ರಿಪ್ಟೋ ಡಾಟ್ ಕಾಮ್ ಅರೆನಾದಲ್ಲಿ ಬಹಳ ವೈಭವದಿಂದ ಮುಕ್ತಾಯಗೊಂಡಿತು. ಟ್ರೆವರ್ ನೋವಾ ಅವರು ಕೊನೆಯ ಬಾರಿಗೆ ಈ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ಈ ವರ್ಷ ಅತಿ ಹೆಚ್ಚು ನಾಮನಿರ್ದೇಶನಗಳನ್ನು ಪಡೆದಿದ್ದ ಕೆಂಡ್ರಿಕ್ ಲಾಮರ್, 'ರೆಕಾರ್ಡ್ ಆಫ್ ದಿ ಇಯರ್' ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ಗೆದ್ದು ಬೀಗಿದರು. ಬ್ಯಾಡ್ ಬನ್ನಿ ಪ್ರತಿಷ್ಠಿತ 'ಅಲ್ಬಮ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಲೇಡಿ ಗಾಗಾ, ಸಬ್ರಿನಾ ಕಾರ್ಪೆಂಟರ್ ಮತ್ತು ಒಲಿವಿಯಾ ಡೀನ್ ಅವರಂತಹ ಕಲಾವಿದರು ಸಹ ಈ ಸಮಾರಂಭದಲ್ಲಿ ಗಮನ ಸೆಳೆದರು.
ಈ ಬಾರಿ ಗ್ರ್ಯಾಮಿಯಲ್ಲಿ ಎರಡು ಹೊಸ ವಿಭಾಗಗಳನ್ನು ಪರಿಚಯಿಸಲಾಗಿತ್ತು. ಬೆಸ್ಟ್ ಅಲ್ಬಮ್ ಕವರ್ ಹಾಗೂ ಬೆಸ್ಟ್ ಟ್ರೆಡಿಷನಲ್ ಕಂಟ್ರಿ ಅಲ್ಬಮ್ ಹಾಗೂ ಹಳೆಯ 'ಬೆಸ್ಟ್ ಕಂಟ್ರಿ ಅಲ್ಬಮ್' ವಿಭಾಗವನ್ನು ಈಗ 'ಬೆಸ್ಟ್ ಕಾಂಟೆಂಪರರಿ ಕಂಟ್ರಿ ಅಲ್ಬಮ್' ಎಂದು ಮರುನಾಮಕರಣ ಮಾಡಲಾಗಿದೆ.
ಭಾರತೀಯ ಕಲಾವಿದರ ಉಪಸ್ಥಿತಿ
ಅನುಷ್ಕಾ ಶಂಕರ್, ಸಿದ್ಧಾಂತ್ ಭಾಟಿಯಾ, 'ಶಕ್ತಿ' ತಂಡ ಮತ್ತು ಚಾರು ಸೂರಿ ಅವರು ಈ ಬಾರಿ ನಾಮನಿರ್ದೇಶನಗೊಂಡರೂ, ಈ ಬಾರಿ ಅವರು ಯಾವುದೇ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.ಹ್ಯಾರಿ ಸ್ಟೈಲ್ಸ್, ಚಾರ್ಲಿ ಎಕ್ಸ್‌ಸಿಎಕ್ಸ್, ಚಾಪೆಲ್ ರೋನ್ ಮತ್ತು ನಿಕ್ಕಿ ಗ್ಲೇಸರ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಕರಾಗಿ ಭಾಗವಹಿಸಿದ್ದರು.

