
ಪಾತಕಿ, ಸರಣಿಹಂತಕ ಸಯನೈಡ್ ಮೋಹನ್ ಪ್ರೇರಿತ ಕತೆಗೆ ಸಿನಿರೂಪ ನೀಡಿದ ಮಮ್ಮೂಟ್ಟಿ.!
ಸರಣಿ ಹಂತಕ 'ಸಯನೈಡ್' ಮೋಹನ್ ಕುಮಾರ್ ಪ್ರಕರಣದಲ್ಲಿ ಧರ್ಮಸ್ಥಳ/ಬೆಳ್ತಂಗಡಿ ಪೊಲೀಸರ ಆರಂಭಿಕ ನಿರ್ಲಕ್ಷ್ಯವು ಮುಂದೆ 23 ಅಮಾಯಕ ಮಹಿಳೆಯರ ಸರಣಿ ಕೊಲೆಗಳಿಗೆ ದಾರಿ ಮಾಡಿಕೊಟ್ಟಿತ್ತು ಎನ್ನಲಾಗಿದೆ.
'ಕಳಂಕಾವಲ್' ಎನ್ನುವ ಹೆಸರು ಕನ್ನಡಿಗರಿಗೆ ಮಾತ್ರವಲ್ಲ ಮಲಯಾಳಿಗರು ಬಳಸುವುದು ಅಪರೂಪವೇ. ಇದು ದಕ್ಷಿಣ ಕೇರಳದ ಭದ್ರಕಾಳಿ ಕ್ಷೇತ್ರದಲ್ಲಿ ನಡೆಸಲಾಗುವ ಒಂದು ಧಾರ್ಮಿಕ ಕಾರ್ಯಕ್ರಮ. ಕಾಳಿಕಾ ದೇವಿಯು ಅಸುರವಧೆ ಮಾಡುವ ಸಾಂಕೇತಿಕ ಕಾರ್ಯಕ್ರಮದ ಹೆಸರು.
ಅಂದ ಹಾಗೆ ಈ ಕಥೆಯಲ್ಲಿ ಕೂಡ ಅಸುರವಧೆಯೇ ಮುಖ್ಯವಾಗಿರುವ ಕಾರಣ ಚಿತ್ರಕ್ಕೂ ಕಳಂಕಾವಲ್ ಎಂದೇ ಹೆಸರಿಡಲಾಗಿದೆ. ವಿಶೇಷ ಏನೆಂದರೆ ವಧಿಸಲ್ಪಡುವ ಅಸುರನಾಗಿ ಮಮ್ಮೂಟ್ಟಿ ಅಭಿನಯಿಸಿದ್ದಾರೆ.
ಕಳೆದ ಐದು ದಶಕಗಳಿಂದ ನಾಯಕ ನಟನಾಗಿ ಮಲಯಾಳಂನ ಮೆಗಾಸ್ಟಾರ್ ಆಗಿ ಹೆಸರಾದವರು ಮಮ್ಮೂಟ್ಟಿ. ಆದರೆ ಈ ಬಾರಿ ಒಬ್ಬ ಸೈಕೊ ಕಿಲ್ಲರ್ ಪಾತ್ರ ಮಾಡಿದ್ದಾರೆ. ಇದನ್ನು ಸಿನಿಮಾ ಬಿಡುಗಡೆಗೂ ಮೊದಲೇ ಹೇಳಿರುವ ಕಾರಣ ಅಂಥ ಅಚ್ಚರಿ ಇರಲಿಲ್ಲ. ಆದರೆ ಕಳಂಕಾವಲ್ ಚಿತ್ರಮಂದಿರಕ್ಕೆ ಬಂದ ಬಳಿಕ ವ್ಯಾಪಕ ಸ್ವಾಗತ ಪಡೆದುಕೊಂಡಿದೆ.
ಮಮ್ಮೂಟ್ಟಿ ಪರದೆ ಮೇಲೆ ಎಂಟ್ರಿಯಾದ ಎರಡನೇ ದೃಶ್ಯದಲ್ಲೇ ಹುಡುಗಿಯೊಬ್ಬಳನ್ನು ಕುತ್ತಿಗೆ ಹಿಸುಕಿ ಸಾಯಿಸುತ್ತಾರೆ. ಆದರೆ ಹೀಗೆ ಸರಣಿಯಾಗಿ ಕೊಲೆ ನಡೆಸುವ ವ್ಯಕ್ತಿಯನ್ನು ಹೇಗೆ ಬಂಧಿಸುತ್ತಾರೆ ಎನ್ನುವುದೇ ಚಿತ್ರದ ಕಥೆ. ಅದನ್ನು ಆಸಕ್ತಿಕರವಾಗಿ ನಿರೂಪಿಸಲಾಗಿದೆ. ಅದನ್ನು ಕೂಡ ಮೀರುವಂತೆ ಮಮ್ಮೂಟ್ಟಿ ಸೈಕೋ ಕಿಲ್ಲರ್ ಸ್ಟ್ಯಾನ್ಲಿ ದಾಸ್ ಪಾತ್ರವನ್ನು ನಿಭಾಯಿಸಿದ್ದಾರೆ.
'ಕಳಂಕಾವಲ್' ಕಥೆಯ ತಿರುಳೇನು?
ಸ್ಟ್ಯಾನ್ಲಿ ದಾಸ್ ಆರಂಭದ ದೃಶ್ಯದಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಕುಳಿತು ಟಿ.ವಿ ನೋಡುತ್ತಿರುತ್ತಾನೆ. ಅದು ತಮಿಳುನಾಡಿನ ನಾಗರಕೋಯಿಲ್ ಸಮೀಪದ ಊರು. ಸ್ಟ್ಯಾನ್ಲಿ ದಾಸ್ ಅಲ್ಲಿ ಪೊಲೀಸ್ ಅಧಿಕಾರಿ. ಪತ್ನಿಯ ಬಳಿ ನೈಟ್ ಡ್ಯೂಟಿ ಎಂದು ಹೇಳಿ ಮನೆಯಿಂದ ಹೊರಗೆ ಹೋದಾಗಲೆಲ್ಲ ಸ್ಟ್ಯಾನ್ಲಿ ಯಾವುದಾದರೊಂದು ಹುಡುಗಿಯ ಜತೆಗೆ, ಯಾವುದಾದರೊಂದು ದೂರದ ಊರಿನ ಲಾಡ್ಜ್‌ನಲ್ಲಿರುತ್ತಾನೆ. ಹಾಗೆ ಬರುವ ಪ್ರತಿ ಹುಡುಗಿಯರು ಕೂಡ ಈತನೊಂದಿಗೆ ವಿವಾಹವಾಗಲೆಂದು ಸಿದ್ಧರಾಗಿ ಬಂದಿರುತ್ತಾರೆ. ಮೊದಲ ರಾತ್ರಿ ಮುಗಿಯುವಷ್ಟರಲ್ಲಿ ಆ ಹುಡುಗಿಯನ್ನು ಕೊಲ್ಲುವ ಸ್ಟ್ಯಾನ್ಲಿ ಮತ್ತೆ ಇನ್ನೊಂದು ಹೆಣ್ಣಿನ ಬೇಟೆಗೆ ತಯಾರಾಗುತ್ತಾನೆ.
ಕಲಾಚಿತ್ರ: ಕಳಂಕಾವಲ್ ನಿರ್ದೇಶಕರು: ಜಿತಿನ್ ಕೆ ಜೋಸ್ ನಿರ್ಮಾಪಕರು: ಮಮ್ಮೂಟ್ಟಿ ಕಲಾವಿದರು: ಮಮ್ಮೂಟ್ಟಿ, ವಿನಾಯಕನ್, ಜಿಬಿನ್ ಗೋಪಿನಾಥ್ ಮೊದಲಾದವರು. |
ಇಡೀ ಕಥೆ ಶುರುವಾಗುವುದೇ 2005ರಲ್ಲಿ. ಆ ದಿನಗಳಲ್ಲಿ ಊರು ಬಿಟ್ಟು ಮತ್ತೊಂದು ಊರಲ್ಲಿ ಸಾವಾದವರು ಅನಾಥ ಶವವಾಗಿ ಹೋಗುವುದೇ ಹೆಚ್ಚು. ಹೀಗಾಗಿ ಮನೆ ಬಿಟ್ಟು ಹೋದ ಹುಡುಗಿ ನಾಪತ್ತೆಯಾಗಿದ್ದಾಳೆ ಎಂದೇ ಅಂದುಕೊಳ್ಳಲಾಗುತ್ತಿತ್ತು. ಆದರೆ ನಾಪತ್ತೆಯಾದವರ ಮೊಬೈಲ್ ನಂಬರ್ ಎಲ್ಲೋ ಒಂದು ಕಡೆ ಲಿಂಕ್ ಆಗಿದೆ ಎನ್ನುವ ಅರಿವಾಗುತ್ತಿರುವಂತೆ ಕೇರಳ ಪೊಲೀಸ್ ಸ್ಪೆಷಲ್ ಬ್ರಾಂಚ್ ತನಿಖೆ ಚುರುಕಾಗುತ್ತದೆ. ಸ್ಪೆಷಲ್ ಆಫೀಸರ್ ಜಯಕೃಷ್ಣನ್ ಆಳವಾದ ತನಿಖೆಯಲ್ಲಿ ತೊಡಗುತ್ತಾರೆ. ಆದರೆ ಪೊಲೀಸ್ ಇಲಾಖೆಯಲ್ಲೇ ಇರುವ ಸ್ಟ್ಯಾನ್ಲಿ ದಾಸ್ ಬಂಧನ ಎನ್ನುವುದು ಎಷ್ಟೊಂದು ಸವಾಲಾಗಿರುತ್ತದೆ? ಕೊನೆಗೂ ಆ ಸವಾಲುಗಳನ್ನು ಜಯಕೃಷ್ಣನ್ ಹೇಗೆ ಎದುರಿಸುತ್ತಾರೆ ಎನ್ನುವುದೇ 'ಕಳಂಕಾವಲ್'ನಲ್ಲಿರುವ ಪ್ರಮುಖ ಅಂಶ.
ಮಮ್ಮೂಟ್ಟಿ - ವಿನಾಯಕನ್ ನಟನೆ ಹೇಗಿದೆ?
ಸ್ಟ್ಯಾನ್ಲಿ ದಾಸ್ ಪಾತ್ರದಲ್ಲಿ ಮಮ್ಮೂಟ್ಟಿ ಪರಕಾಯ ಪ್ರವೇಶ ಮಾಡಿದ್ದಾರೆ. ಸದಾ ತನ್ನ ಹೋಂಡಾ ಅಕಾರ್ಡ್ ಕಾರಿನಲ್ಲಿ ಪ್ರಯಾಣ. ಟ್ರಾನ್ಸಿಸ್ಟರ್ ನಲ್ಲಿ ಪ್ರೇಮಗೀತೆ ಕೇಳುವ ಹವ್ಯಾಸ. ಸಿಗರೇಟ್ ನಲ್ಲಿ ಸುರುಳಿಯಾಗಿ ಹೊಗೆ ಬಿಡುವುದೆಂದರೆ ಖುಷಿ.
ಆದರೆ ಹುಡುಗಿಯನ್ನು ಕೊಲ್ಲುವ ನಿರ್ಧಾರ ಮಾಡಿದಾಗ ಮಾತ್ರ ಮುಖದಲ್ಲೊಂದು ವ್ಯತ್ಯಸ್ತ ಭಾವ. ಹಾಗಂತ ಅಲ್ಲೊಂದು ಕ್ರೌರ್ಯವಿಲ್ಲ. ಎಲ್ಲವನ್ನೂ ತಣ್ಣಗೆ ನಡೆಸುವ ಸೈಕೊ ಸರಣಿ ಕೊಲೆಪಾತಕಿ.
ಕಥೆಗೆ ಕೇಂದ್ರಬಿಂದು ಸ್ಟ್ಯಾನ್ಲಿ ದಾಸ್ ಆದರೂ ಸ್ಪೆಷಲ್ ಆಫೀಸರ್ ಜಯಕೃಷ್ಣನ್ ಈ ಕಥೆಯ ನಾಯಕ. ಎರಡು ದಶಕದಿಂದ ಸಕ್ರಿಯವಾಗಿರುವ ವಿನಾಯಕನ್ ಆರಂಭದಲ್ಲಿ ಹಾಸ್ಯ ಪಾತ್ರದಲ್ಲಿ ಮಿಂಚಿದ್ದೇ ಹೆಚ್ಚು. ಆದರೆ ಜೈಲರ್ ನಲ್ಲಿ ರಜನಿಕಾಂತ್ ವಿರುದ್ಧ ಖಳನಾಗಿ ಕಾಣಿಸಿ ಹೆಸರು ಮಾಡಿದ್ದಂಥ ನಟ ಈ ಬಾರಿ ಜಯಕೃಷ್ಣನ್ ಆಗಿ ನಾಯಕನಾಗಿದ್ದಾರೆ. ತಮ್ಮ ಮಾತಿನ ಶೈಲಿಯಿಂದಲೇ ಗುರುತಿಸಿಕೊಂಡಿದ್ದ ವಿನಾಯಕನ್ ಇಲ್ಲಿನ ಪಾತ್ರಕ್ಕಾಗಿ ಆ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಟಿಪ್ ಟಾಪ್ ಆಗಿ ವಸ್ತ್ರ ಧರಿಸಿ, ಕನ್ನಡಕದೊಂದಿಗೆ ಗೌರವಯುತ ಪೊಲೀಸ್ ಛಾಯೆಯನ್ನು ನಟನೆಯಲ್ಲೂ ತೋರಿಸಿದ್ದಾರೆ.
ಸಯನೈಡ್ ಮೋಹನ್ ಕಥೆಯೇ ಸ್ಫೂರ್ತಿ..!
ಈ ಚಿತ್ರಕ್ಕೆ ಕರ್ನಾಟಕದ ಸೀರಿಯಲ್ ಕಿಲ್ಲರ್ ಸಯನೈಡ್ ಮೋಹನನ ಕಥೆ ಸ್ಫೂರ್ತಿ ಎನ್ನುವ ಬಗ್ಗೆ ಆರಂಭದಿಂದಲೇ ಸುದ್ದಿ ಹರಡಿತ್ತು. ಆದರೆ ನಾಯಕ ಮತ್ತು ನಿರ್ಮಾಪಕ ಮಮ್ಮೂಟ್ಟಿ ಆ ಘಟನೆಗು ಚಿತ್ರದ ಕಥೆಗೂ ನೇರವಾದ ಸಂಬಂಧ ಇಲ್ಲ. ಆದರೆ ಇಲ್ಲಿ ಕೊಲೆಗಾರ ಸಯನೈಡ್ಬಳಸುತ್ತಾನೆ ಎನ್ನುವ ಹೋಲಿಕೆ
ಇದೆ' ಎಂದಿದ್ದರು. ಆದರೆ ಚಿತ್ರ ಬಿಡುಗಡೆಯಾದ ಬಳಿಕ ಇದು ನೂರಕ್ಕೆ ತೊಂಬತ್ತರಷ್ಟು ಸಯನೈಡ್ ಮೋಹನ್ ಕಥೆ ಎನ್ನುವುದು ಬಯಲಾಗಿದೆ. ಚಿತ್ರದಲ್ಲಿನ ಕೊಲೆಗಾರ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದರೆ, ವಾಸ್ತವದಲ್ಲಿ ಕೊಲೆಗಾರ ದೈಹಿಕ ಶಿಕ್ಷಕನಾಗಿದ್ದ ಎನ್ನುವುದೊಂದೇ ಪ್ರಮುಖ ವ್ಯತ್ಯಾಸ.
ಯಾರೀ ಸಯನೈಡ್ ಮೋಹನ್..?
2005 ರಿಂದ 2009ರ ಕಾಲಘಟ್ಟದಲ್ಲಿ ಮಂಗಳೂರು ಕರಾವಳಿಯ ದೇರಳಕಟ್ಟೆಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿದ ಘಟನೆ ನಡೆದಿತ್ತು. ಸ್ಥಳೀಯ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿದ್ದ ಮೋಹನ್ ಕುಮಾರ್ ಎಂಬಾತ ನಡೆಸಿದ 20ರಷ್ಟು ಸರಣಿ ಕೊಲೆಗಳು ಬಯಲಾಗಿದ್ದವು. ಒಂದೊಂದು ಕೊಲೆಗಳ ಬಳಿಕವೂ ಮತ್ತೊಂದು ಹುಡುಗಿಯ ಸಂಪರ್ಕಕ್ಕಾಗಿ ಕೊಲೆಯಾದ ಹುಡುಗಿಯ ಮೊಬೈಲ್ ನಂಬರನ್ನೇ ಬಳಸಿದ್ದ ಅಪರಾಧಿ ತನ್ನ ಚಾಣಾಕ್ಷತೆ ತೋರಿದ್ದ. ಆದರೆ ಆ ಮೊಬೈಲ್ ಫೋನ್ ನಂಬರ್ ಗಳೇ ಕೊಲೆಗಾರನನ್ನು ಪತ್ತೆ ಮಾಡುವಲ್ಲಿ ಕೊನೆಗೆ ಪ್ರಮುಖ ಪಾತ್ರವಹಿಸಿತ್ತು. ತನ್ನ ಪ್ರೇಯಸಿಯರಿಗೆ ಸಯನೈಡ್ ಕೊಟ್ಟು ಕೊಲ್ಲುತ್ತಿದ್ದ ಮೋಹನ್ ಪ್ರಸ್ತುತ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಕೈದಿಯಾಗಿದ್ದಾನೆ.
ಸರಣಿ ಹಂತಕ 'ಸಯನೈಡ್' ಮೋಹನ್ ಕುಮಾರ್ ಪ್ರಕರಣದಲ್ಲಿ ಧರ್ಮಸ್ಥಳ/ಬೆಳ್ತಂಗಡಿ ಪೊಲೀಸರ ಆರಂಭಿಕ ನಿರ್ಲಕ್ಷ್ಯವು ಮುಂದೆ 23 ಅಮಾಯಕ ಮಹಿಳೆಯರ ಸರಣಿ ಕೊಲೆಗಳಿಗೆ ದಾರಿ ಮಾಡಿಕೊಟ್ಟಿತ್ತು ಎಂಬುದು ಸಿಐಡಿ ವರದಿಯಿಂದ ಸ್ಪಷ್ಟವಾಗಿದೆ. 2000ನೇ ಇಸವಿಯಲ್ಲಿ ರತ್ನಾ ಎಂಬ ಯುವತಿಯನ್ನು ನೇತ್ರಾವತಿ ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದಾಗ ಕೇವಲ ಎಫ್‌ಐಆರ್ ದಾಖಲಿಸಿ ಕೈತೊಳೆದುಕೊಂಡಿದ್ದ ಪೊಲೀಸರು, 2003ರಲ್ಲಿ ಗಂಗಮ್ಮ ಎಂಬ ಮತ್ತೊಬ್ಬ ಮಹಿಳೆಗೆ ವಂಚಿಸಿದ ಪ್ರಕರಣದಲ್ಲಿಯೂ ರಾಜಿ ಪಂಚಾಯಿತಿ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದ್ದರು. ಎರಡೂ ಗಂಭೀರ ಪ್ರಕರಣಗಳಲ್ಲಿ ಆರೋಪಿಯ ಪೂರ್ವಾಪರಗಳನ್ನು ತನಿಖೆ ಮಾಡದೆ, ಆತನ ಮೇಲೆ ನಿಗಾ ಇಡದೆ ಪೊಲೀಸರು ತೋರಿದ ನಿರ್ಲಕ್ಷ್ಯದ ಕುರಿತು ಅಂದಿನ ಸಿಐಡಿ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ತಮ್ಮ 'SERIAL KILLER MOHAN KUMAR’ ವರದಿಯಲ್ಲಿ 'MISHANDLING PRECURSOR CASES' ಶೀರ್ಷಿಕೆಯಡಿ ವಿಶ್ಲೇಷಿಸಲಾಗಿದೆ. ಈ ಅಂಶಗಳೂ ಮಮ್ಮೂಟ್ಟಿ ಸಿನಿಮಾದಲ್ಲಿದೆಯೇ ಎಂಬ ಕುತೂಹಲ ಪ್ರೇಕ್ಷಕರದ್ದು!
ಸಯನೈಡ್ ಮೋಹನ್ ನಡೆಸಿದ ಸರಣಿ ಕೊಲೆಗಳನ್ನು ಆಧಾರವಾಗಿಸಿದ ಕಥೆಗಳು ಈ ಹಿಂದೆಯೂ ಬಂದಿವೆ. ಎರಡು ವರ್ಷಗಳ ಹಿಂದೆ 'ದಹಾಡ್' ಎನ್ನುವ ವೆಬ್ ಸಿರೀಸ್ ನಲ್ಲಿ ಇದೇ ಕಥೆ ಹೇಳಲಾಗಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ 'ಭಗ್ವತ್' ಹೆಸರಿನ ಹಿಂದಿ ಚಿತ್ರ ಕೂಡ ಇದೇ ಸಬ್ಜೆಕ್ಟ್ ಹೊಂದಿತ್ತು.
'ಕಳಂಕಾವಲ್' ಮನ ಗೆಲ್ಲುವುದೇಕೆ?
ಸಾಮಾನ್ಯವಾಗಿ ಖಳ ಪಾತ್ರಗಳೇ ನಾಯಕನಾಗುವುದು ಇತ್ತೀಚಿಗೆ ಟ್ರೆಂಡ್ ಆಗಿದೆ. ಕಾನೂನುನನ್ನು ಕೈಗೆತ್ತಿಕೊಳ್ಳುವ ನಾಯಕನ ವ್ಯಕ್ತಿತ್ವಕ್ಕೆ ಆತನ ಬಾಲ್ಯದಲ್ಲಾದ ಅನ್ಯಾಯದ ಕಥೆಯನ್ನು ತೋರಿಸಿ ಸಮರ್ಥಿಸಲಾಗುತ್ತದೆ. 'ಕೆಜಿಎಫ್' ಇದಕ್ಕೆ ದೊಡ್ಡದೊಂದು ಉದಾಹರಣೆ. ಇಲ್ಲಿ ಕೂಡ ಸ್ಟಾರ್ ನಟ ಮಮ್ಮೂಟ್ಟಿ ಖಳನಾಯಕನಾಗಿರುವ ಕಾರಣ ಅಂಥದೇ ಸಮರ್ಥನೆಯ ಆತಂಕ ಇತ್ತು. ಆದರೆ ಈ ಚಿತ್ರದಲ್ಲಿ ಖಳನಾಯಕನಿಗೆ ಆ ರೀತಿಯ ಅವಕಾಶ ನೀಡಲಾಗಿಲ್ಲ. ಸೈಕೋಕಿಲ್ಲರ್ ಆಗಿಯೇ ತೋರಿಸಲಾಗಿದೆ. ಅದೇ ಮೊದಲ ಗೆಲವು.
ಕಥೆಯ ನಾಯಕ ವಿನಾಯಕನ್ ಗೆ ಖಳನ ಇಮೇಜ್ ಇದ್ದರೂ ಮಮ್ಮೂಟ್ಟಿ ಪಾತ್ರದ ಮುಂದೆ ಗಟ್ಟಿಯಾದ ನಿಲುವನ್ನೇ ಕೊಡಲಾಗಿದೆ. ಇವರ ಜಯಕೃಷ್ಣನ್ ಎನ್ನುವ ಪೊಲೀಸ್ ಪಾತ್ರಕ್ಕೆ 'ನತ್ತ್' ಎನ್ನುವ ಅಡ್ಡ ಹೆಸರು ಕೂಡ ಇದೆ. ನತ್ತ್ ಅಂದರೆ ಮಲಯಾಳಂನಲ್ಲಿ ಗೂಬೆ ಎಂದು ಅರ್ಥ. ತನಗೆ ಆ ಹೆಸರು ಯಾಕಿದೆ ಎನ್ನುವುದನ್ನು ಕ್ಲೈಮ್ಯಾಕ್ಸ್ ನಲ್ಲಿ ಮಮ್ಮೂಟ್ಟಿಗೆ ಹೇಳುವ ದೃಶ್ಯದಲ್ಲಿ ವಿನಾಯಕನ್ ಗೆ ಬೇಕಾದ ಬಿಲ್ಡಪ್ ದೊರಕಿದೆ.
ಸಿನಿಮಾದಲ್ಲಿ ಕೊರತೆಯಾಗಿ ಕಾಡುವುದೇನು?
ಈ ಚಿತ್ರದಲ್ಲಿ ಕೂಡ ಒಂದಷ್ಟು ಕೊರತೆಗಳಿವೆ. ಹೆಣ್ಣು ಮಕ್ಕಳ ಸರಣಿ ಹತ್ಯೆಯೇ ಚಿತ್ರದ ವಸ್ತು. ದುರದೃಷ್ಟವಶಾತ್ ಚಿತ್ರದಲ್ಲಿ ಯಾವ ಹೆಣ್ಣುಮಕ್ಕಳಿಗೂ ಪ್ರಾಧಾನ್ಯತೆ ಕಾಣಿಸಿಲ್ಲ. ಮಮ್ಮೂಟ್ಟಿ ನಡೆಸುವ ಮೊದಲ ಕೊಲೆಯಲ್ಲೂ ಸಾಯುವ ಹೆಣ್ಣು ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಕಾಡುವುದಿಲ್ಲ. ಆಕೆಗೆ ಅಂಥದೊಂದು ಹಿನ್ನೆಲೆಯನ್ನಾಗಲೀ, ಪ್ರಾಣಭಿಕ್ಷೆ ಬೇಡುವ ಅವಕಾಶವನ್ನಾಗಲೀ ನಿರ್ದೇಶಕರು ನೀಡಿಲ್ಲ. ಬಹುಶಃ ಇದು 'ಯುಎ' ಪ್ರಮಾಣ ಪತ್ರದ ಒಳಗೆಯೇ ಸಿನಿಮಾ ಮೂಡಿಸುವಲ್ಲಿನ ಪ್ರಯತ್ನವೂ ಇರಬಹುದು.
ಆದರೆ ಈಗಾಗಲೇ ಈ ಸರಣಿ ಕೊಲೆಗಾರನ ಬಗ್ಗೆ ತಿಳಿದವರಿಗೆ ಇಂಥ ಆತಂಕಯುತ ಡಿಟೇಲಿಂಗ್ ಇರದೇ ಹೋಗಿರುವುದರಿಂದಲೂ ಮಮ್ಮೂಟ್ಟಿ ಪಾತ್ರ ಡಮ್ಮಿಯಾದಂತೆ ಕಂಡೀತು. ಯಾಕೆಂದರೆ ಸಯನೈಡ್ ಮೋಹನನ ಕಥೆ ಚಿತ್ರವಾಗಿ ಬಂದಿರುವುದಷ್ಟೆ ಅಲ್ಲ. ಕ್ರೈಮ್ ಸ್ಟೋರಿಯಾಗಿ ಸಾಮಾಜಿಕ ಜಾಲತಾಣದಲ್ಲೂ ಸಂಚಲನ ಸೃಷ್ಟಿಸಿರುವಂಥ ಸಂಗತಿ.
'ವಲ್ಲಾತೊರು ಕಥ' ಎನ್ನುವ ಜನಪ್ರಿಯ ಮಲಯಾಳಂ ಕಿರುತೆರೆ ಸರಣಿಯಲ್ಲಿಯೂ ಈ ಘಟನೆಯನ್ನು ಮೂರು ವರ್ಷಗಳ ಹಿಂದೆಯೇ ವಿಶ್ಲೇಷಿಸಲಾಗಿತ್ತು. ಅದೇ ನಿರೂಪಕ ಬಾಬು ರಾಮಚಂದ್ರನ್ ಅವರನ್ನೇ ಇಲ್ಲಿಯೂ ಕಥೆಯ ಆರಂಭದ ನಿರೂಪಣೆಗೆ ಬಳಸಲಾಗಿದೆ! ಇಷ್ಟೆಲ್ಲ ಹೋಲಿಕೆಗಳಿರುವುದರಿಂದ
ಸಯನೈಡ್ ಮೋಹನ್ ಸ್ಟೋರಿ ಜತೆಗೆ ಇನ್ನಷ್ಟು ತಿರುವುಗಳನ್ನು ಪ್ರೇಕ್ಷಕರು ಬಯಸುವುದು ಸಹಜ. ಆದರೆ ಅಂಥ ಯಾವುದೇ ದೊಡ್ಡ ಪ್ರಯತ್ನ ಇಲ್ಲಿ ನಡೆದಿಲ್ಲ. ಹೀಗಾಗಿ ಚಿತ್ರ ಶುರುವಾಗುವ ಮೊದಲೇ ಡಿಸ್ಕ್ಲೈಮರ್ ನಲ್ಲಿ ಇದು ಯಾರದೇ ನೈಜ ಕಥೆಯಲ್ಲ ಎಂದು ಬರೆದಿರುವುದು ಕೂಡ ತಮಾಷೆಯಾಗಿಯೇ ಕಾಣಿಸುತ್ತದೆ.
ನಿರ್ದೇಶಕ ಜಿತಿನ್ ಕೆ ಜೋಸೆಫ್ ಗೆ ಇದು ಮೊದಲ ಚಿತ್ರ. 2021ರಲ್ಲಿ ತೆರೆಕಂಡಿದ್ದ 'ಕುರುಪ್' ಚಿತ್ರಕ್ಕೆ ಇವರೇ ಕಥೆ ಬರೆದಿದ್ದರು. ಮಮ್ಮೂಟ್ಟಿ ಪುತ್ರ ದುಲ್ಖರ್ ಸಲ್ಮಾನ್ ನಟಿಸಿದ್ದ ಆ ಚಿತ್ರ ಕೂಡ ಅಪರಾಧ ಲೋಕದ ನೈಜ ಘಟನೆಯ ಆಧಾರದಲ್ಲೇ ಸೃಷ್ಟಿಯಾಗಿತ್ತು. ಅದರ ಮೇಕಿಂಗ್ ರೀತಿಗೆ ಒಂದಷ್ಟು ಹೋಲುವ ಈ ಸಿನಿಮಾದ ದೃಶ್ಯವೊಂದರಲ್ಲಿ 'ದೃಶ್ಯಂ 2'ರ ಸ್ಫೂರ್ತಿಯನ್ನೂ ಕಾಣಬಹುದು.
ದೃಶ್ಯಂ 2ರಲ್ಲಿ ಮೋಹನ್ ಲಾಲ್ ನ ಪಾತ್ರ ತನ್ನ ಸಿನಿಮಾ ಕಥೆಗೆ ಅಗತ್ಯ ಎನ್ನುವ ಕಾರಣ ನೀಡಿ ಶವಾಗಾರದ ಕಾವಲುಗಾರನ, ಸಿನಿಮಾ ಕಥೆಗಾರನ ಸಹಾಯ ಪಡೆದುಕೊಳ್ಳುವುದನ್ನು ತೋರಿಸಲಾಗಿದೆ. ಇಲ್ಲಿ ಮಮ್ಮೂಟ್ಟಿಯ ಪಾತ್ರ ತನ್ನ ಸಿನಿಮಾ ಕಥೆಗೆ ಅಗತ್ಯ ಎಂದು ನಿವೃತ್ತ ಫೊರೆನ್ಸಿಕ್ ತಜ್ಞನಿಂದ ಸಹಾಯ ಪಡೆಯುವ ಸನ್ನಿವೇಶವಿದೆ.
ಒಟ್ಟು ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ?
ಚಿತ್ರದಲ್ಲಿ ಒಂದಷ್ಟು ಕುಂದು ಕೊರತೆಯ ಅಂಶಗಳು ಎದ್ದು ಕಾಣುವುದೇನೋ ಸತ್ಯ. ಆದರೆ ಪ್ರೇಕ್ಷಕರು ಈಗಾಗಲೇ ಸಿನಿಮಾವನ್ನು ಎರಡು ಕೈಗಳಿಂದ ಸ್ವೀಕರಿಸಿದ್ದಾರೆ. ಇದರಲ್ಲಿ 25 ವರ್ಷಗಳ ಹಿಂದಿನ ಕಾಲಘಟ್ಟವನ್ನು ಕಡೆದಿಟ್ಟಿರುವ ಕಲಾನಿರ್ದೇಶನದ ಪ್ರಭಾವವೂ ಇದೆ. ಮೊಬೈಲ್ ಮಾತ್ರವಲ್ಲ, ಬಟ್ಟೆ ಬರೆಗಳು, ವಾಹನಗಳು, ಕಟ್ಟಡಗಳು, ರಸ್ತೆ ಎಲ್ಲವೂ ನಮ್ಮನ್ನು ಆ ಕಾಲಕ್ಕೆ ಕರೆದೊಯ್ಯುತ್ತವೆ. ಒಂದು ಕ್ರೈಮ್ ಥ್ರಿಲ್ಲರ್ ಗೆ ಬೇಕಾದ ಹಿನ್ನೆಲೆ ಸಂಗೀತ, ಕಲರ್ ಟೋನ್, ಛಾಯಾಗ್ರಹಣ ಎಲ್ಲವೂ ಸೇರಿಕೊಂಡು ಸಿನಿಮಾ ಜನಮನ ಗೆಲ್ಲುವತ್ತ ಸಾಗಿದೆ.

