ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಬಿಫೆಸ್) ದಿನಗಣನೆ ಆರಂಭ
x

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಬಿಫೆಸ್) ದಿನಗಣನೆ ಆರಂಭ

ಫೆಬ್ರುವರಿ 29 ರಿಂದ ಒಂದು ವಾರ ಕಾಲ ಬೆಂಗಳೂರಿನಲ್ಲಿ ಸಿನಿಮಾ ಹಬ್ಬ. ಹದಿನೈದು ಸಾವಿರಕ್ಕೂ ಹೆಚ್ಚು ಸಿನಿಮಾ ರಸಿಕರಿಂದ ಒರಾಯನ್‌ ಮಾಲ್‌ಗೆ ಲಗ್ಗೆ. ಇಲ್ಲಿನ 11 ಸ್ಕ್ರೀನ್‌ ಗಳು ಪ್ರೇಕ್ಷಕರಿಗೆ ವಿಶ್ವದ ವಿಶಿಷ್ಟ ಜಗತ್ತನ್ನು ಪರಿಚಯಿಸಲಿದೆ.


ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಬಿಫೆಸ್) ದಿನಗಣನೆ ಆರಂಭವಾಗಿದೆ. ‌ ಭಾರತದ ಐದು ಅಂಗೀಕೃತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಪೈಕಿ ಬಿಫೆಸ್‌ ಕೂಡ ಒಂದಾಗಿದ್ದು, ದೇಶದ ಸಿನಿಮಾ ಸಹೃದಯರು ಚಿತ್ರೋತ್ಸವದಲ್ಲಿ ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ವೀಕ್ಷಿಸಲು ಕಾತುರರಾಗಿದ್ದಾರೆ. ಈ ಚಿತ್ರೋತ್ಸವಕ್ಕೆ ಫೆಬ್ರುವರಿ 29ರಂದು ತೆರೆ ಏಳಲಿದ್ದು, ಮಾರ್ಚಿ 7ರ ವರೆಗೆ ಪ್ರದರ್ಶನಗೊಳ್ಳಲಿರುವ ಸುಮಾರು 50 ದೇಶಗಳ ಅತ್ಯುತ್ತಮ ಚಿತ್ರಗಳನ್ನು ವೀಕ್ಷಿಸಲು ಚಿತ್ರ ರಸಿಕರು ಕಾದಿದ್ದಾರೆ.

ಸುಮಾರು 200ಕ್ಕೂ ಹೆಚ್ಚು ಚಿತ್ರಗಳು ಒರಾಯನ್‌ ಮಾಲ್ನ 11 ತೆರೆಗಳ ಮೇಲೆ ಈ ಚಿತ್ರಗಳನ್ನು ಪ್ರೇಕ್ಷಕರು ವೀಕ್ಷಿಸಬಹುದು. ಅಲ್ಲದೆ, ಚಾಮರಾಜಪೇಟೆಯ ಚಲನಚಿತ್ರ ಕಲಾವಿದರ ಸಂಘ ಹಾಗೂ ಬನಶಂಕರಿ ಎರಡನೇ ಹಂತದ ಸುಚಿತ್ರ ಫಿಲಮ್‌ ಸೊಸೈಟಿಯ ಕಟ್ಟಡದಲ್ಲಿನ ತೆರೆಗಳ ಮೇಲೆ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪುರಸ್ಕೃತ , ಕಾನ್‌ (ಫ್ರಾನ್ಸ್), ಬರ್ಲಿನ್‌ (ಜರ್ಮನಿ), ಕಾರ್ಲೋ ವಿವಾರಿ, ಲೊಕಾರ್ನೋ, ರಾಟರ್‌ ಡ್ಯಾಮ್‌, ಬೂಸಾನ್‌ ಟರೋಂಟೊ ದೇಶಗಳ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ಬಿಫೆಸ್‌ ನ ಕಲಾತ್ಮಕ ನಿರ್ದೇಶಕ ಎನ್.‌ ವಿದ್ಯಾಶಂಕರ್‌ ಹೇಳುತ್ತಾರೆ.

ಬಿಫೆಸ್‌ 15 ಆವೃತ್ತಿಯ ವಿಶೇಷವೇನು?

ಎಲ್ಲ ಅಂತರಾಷ್ಟ್ರೀಯ ಚಲನಚಿತ್ರೋತ್ಸವಳಲ್ಲಿ ಇರುವಂತೆ ಹಾಗೂ ಹಿಂದಿನ ಅವೃತ್ತಿಗಳಲ್ಲಿ ಇರುವಂತೆ ಹಲವು ಸ್ಪರ್ಧಾ ವಿಭಾಗಳಿರುತ್ತವೆ. ಏಷಿಯನ್‌ ಸ್ಪರ್ಧಾ ವಿಭಾಗ, ಚಿತ್ರ ಭಾರತಿ (ಭಾರತೀಯ ಚಿತ್ರಗಳ ಸ್ಪರ್ಧಾ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಸಮಕಾಲೀನ ಸಿನಿಮಾ ವಿಭಾಗ, ಕನ್ನಡ ಜನಪ್ರಿಯ ಸಿನಿಮಾ ವಿಭಾಗ, ಅಂತರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ (ಫಿಪ್ರೆಸ್ಕಿ) ಆಯ್ಕೆ ಮಾಡಿದ ಏಳು ಸಮಕಾಲೀನ ಚಲನಚಿತ್ರಗಳ ಪ್ರದರ್ಶನ, ಕಲಾವಿದರ, ತಂತ್ರಜ್ಞರ ಆತ್ಮಕಥೆಯಾಧಾರಿತ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಇವಲ್ಲದೆ ದೇಶ ಕೇಂದ್ರಿತ ವಿಭಾಗದಲ್ಲಿ ಜರ್ಮನಿಯ ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಮಹಿಳಾ ಶಕ್ತಿ ವಿಭಾಗದಲ್ಲಿ ದೇಶ ವಿದೇಶದ ಪ್ರತಿಷ್ಠಿತ ಮಹಿಳಾ ನಿರ್ದೇಶಕಿಯರು ನಿರ್ದೇಶಿಸಿದ ಚಿತ್ರಗಳು ಪ್ರದರ್ಶನಗೊಳ್ಳಲಿದೆ.

ಕೇಳರಿಯದ ಭಾರತ ವಿಭಾಗದಲ್ಲಿ ಕನ್ನಡದ ಉಪಭಾಷೆಗಳಾದ ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ ಅಲ್ಲದೆ. ಈಶಾನ್ಯ ಭಾರತದ ಕರ್ಬಿ ರಾಬಾ, ಗಾಲೊ, ಮತ್ತು ಪಾಕೆ ಭಾಷೆ ಚಿತ್ರಗಳು್ ದೇ‍ಶದ ವಿವಿಧ ಪ್ರಾಂತ್ಯದ ಭಾಷೆ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡಲಿದೆ.

ಬಹುಮುಖ್ಯವೆನ್ನಿಸಿರುವ ಪುನರಾವಲೋಕನ ವಿಭಾಗದಲ್ಲಿ ಇರಾನಿನ ಖ್ಯಾತ ನಿರ್ದೇಶಕ ಅಬ್ಬಾಸ್‌ ಕಿರಸ್ತೋಮಿ, ಭಾರತದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಮೃಣಾಲ್‌ ಸೇನ್‌ ಚಿತ್ರಗಳು ಪ್ರದರ್ಶನಗೊಳ್ಳಲಿದೆ.

ಶತಮಾನೋತ್ಸವ ವಿಭಾಗದಲ್ಲಿ ದೇಶದ ಖ್ಯಾತ ಸಂಗೀತ ಸಂಯೋಜಕ ವಿಜಯಭಾಸ್ಕರ್‌ ಸಂಗೀತ ನೀಡಿರುವ ಚಿತ್ರಗಳು ತೆರೆಕಾಣಲಿವೆ.

ಬಿಫೆಸ್‌ನ 15ನೇ ಆವೃತ್ತಿಯ ಒಂದು ಕಾರಣಕ್ಕೆ ಮುಖ್ಯವಾಗುತ್ತದೆ. ಈ ವರ್ಷ ಕನ್ನಡ ಚಿತ್ರರಂಗಕ್ಕೆ 90 ವರ್ಷ ತುಂಬಲಿದೆ. ಈ ಸಂದರ್ಭವನ್ನು ಬಿಫೆಸ್‌ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತೆ ಮಾಡಲು ಸನ್ನದ್ಧವಾಗಿದೆ. ಕನ್ನಡ ಚಲನಚಿತ್ರಗಳು ವಿಶ್ವದಾದ್ಯಂತ ತನ್ನ ಛಾಪು ಮೂಡಿಸುತ್ತಿದ್ದು, ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ನಡೆದುಬಂದ ದಾರಿ, ಹಾಗೂ, ಕನ್ನಡದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಚಾರಿತ್ರಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸುವ ವಿಶೇಷ ಚಲನಚಿತ್ರಗಳ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಅಲ್ಲದೆ ಕರ್ನಾಟಕ, ಕರ್ನಾಟಕವಾಗಿ 50 ವರ್ಷವಾಗಿದ್ದು, ಈ ಸಂದರ್ಭದ ನೆನಪಿನಲ್ಲಿ ʼಕರ್ನಾಟಕ ಸುವರ್ಣ ಸಂಭ್ರಮʼ ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಹಿರಿಮೆಯನ್ನು ಪ್ರಚುರಪಡಿಸುವ ಚಿತ್ರಗಳನ್ನು ಪ್ರದರ್ಶಿಸಲಿದೆ.


ಸಿನಿಮಾ ದಿನ

ಮಾರ್ಚಿ ತಿಂಗಳ ಮೂರನೇ ತಾರಿಖಿನ ದಿನ, ಕನ್ನಡ ಚಿತ್ರರಂಗಕ್ಕೆ ಅಮೂಲ್ಯವಾದದ್ದು. ಮಾರ್ಚ್‌ ೩, 1934 ರಂದು ಕನ್ನಡದ ಮೊದಲ ಟಾಕಿ ಚಿತ್ರ (ಮಾತನಾಡುವ ಚಿತ್ರ) ಬಿಡುಗಡೆಯಾಗಿ 90 ವರ್ಷವಾಗುತ್ತದೆ. ಅಂದಿನ ದಿನವನ್ನು ಕನ್ನಡದ ಸಿನಿಮಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಕುರಿತು ವಿಚಾರ ಸಂಕಿರಣ ನಡೆಸಲಾಗುತ್ತಿದೆ.

ಮೃಣಾಲ್‌ ಸೇನ್‌ ಅವರ ಶತಮಾನೊತ್ಸವ ಕೂಡ ಈ ಸಂದರ್ಭದಲ್ಲಿಯೇ ಬಂದಿರುವುದರಿಂದ ಈ ಮಹಾನ್‌ ನಿರ್ದೇಶಕನನ್ನು ಕುರಿತು, ಶೇಖರ್‌ ದಾಸ್‌ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾಗಿ ವರ್ಣರಂಜಿತ ಅಧ್ಯಾಯವೊಂದನ್ನು ಕಟ್ಟಿಕೊಟ್ಟಿರುವ ವಿಜಯಭಾಸ್ಕರ್‌ ಅವರ ಶತಮಾನೋತ್ಸವ ಕೂಡ ಆಚರಿಸಲಾಗುತ್ತಿದೆ. ಜರ್ಮನಿಯ ಖ್ಯಾತ ಚಲನಚಿತ್ರ ಸಂಕಲನಕಾರ ಕಾಯ್‌ ಮಾನ್‌ ಅವರಿಂದ ಚಲನಚಿತ್ರ ಸಂಕಲನ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಕ್ರಮ ಬೆಂಗಳೂರಿನ ಗೋಥೆ ಸಂಸ್ಥೆ ಹಾಗು ಮ್ಯಾಕ್ಸ್‌ ಮುಲ್ಲರ್‌ ಭವನದ ಸಹಯೋಗದೊಂದಿಗೆ ನಡೆಯುತ್ತದೆ. ಹೆಸರಾಂತ ರಂಗಕರ್ಮಿ ಸಿನಿಮಾ ತಜ್ಞ ಡಾ. ಜಬ್ಬಾರ್‌ ಪಟೇಲ್‌ ಅವರಿಂದ ಸಂವಿಧಾನ ಮತ್ತು ಭಾರತೀಯ ಸಿನಿಮಾ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಲಿದೆ. ಚಲನಚಿತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಪರಿಣಾಮ ಕುರಿತು ಚರ್ಚೆ ನಡೆಯಲಿದೆ.

ಬಿಫೆಸ್‌ ನ 15ನೇ ಅವೃತ್ತಿಯ ಅನುಭವವನ್ನು ಪಡೆಯಲು ಇಚ್ಚಿಸುವ ಸಿನಿಮಾಸಕ್ತರು ಬಿಫೆಸ್‌ ಜಾಲತಾಣ biffes.org ಮೂಲಕ ನೇರ ಅರ್ಜಿ ಮತ್ತು ಸೂಕ್ತ ಪಾವ್ತಿ ಮಾಡಿ ಚಿತ್ರೋತ್ಸವದ ಪ್ರತಿನಿಧಿಗಳಾಗಬಹುದು.

ಪ್ರತಿನಿಧಿ ಶುಲ್ಕ: ಸಾರ್ವಜನಿಕರಿಗೆ ರೂ. 800

ಚಿತ್ರೋದ್ಯಮದ ಸದಸ್ಯರಿಗೆ ರೂ. 400

ವಿದ್ಯಾರ್ಥಿಗಳಿಗೆ ರೂ. 400

ಹಿರಿಯ ನಾಗರಿಕರಿಗೆ ರೂ. 400

ಈ ಕುರಿತು ಹೆಚ್ಚಿನ ಮಾಹಿತಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು 080 2349 4255 ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಬಿಫೆಸ್‌ ಸಂಘಟಕರು ಹೇಳಿದ್ದಾರೆ.

Read More
Next Story