Big Boss 2025| ಅಣ್ಣಾವ್ರ ಬೈಕ್‌ ರೈಡ್‌ ಮಾಡಿದಾಗ ಅದ ಮೊದಲ ಪ್ರೀತಿ: ರವಿಚಂದ್ರನ್‌ ಅನುಭವ
x

Big Boss 2025| ಅಣ್ಣಾವ್ರ ಬೈಕ್‌ ರೈಡ್‌ ಮಾಡಿದಾಗ ಅದ ಮೊದಲ ಪ್ರೀತಿ: ರವಿಚಂದ್ರನ್‌ ಅನುಭವ

ಬಿಗ್ ಬಾಸ್ ಮನೆ ಮಂದಿ ತಮ್ಮ ಮೊದಲ ಪ್ರೇಮದ ಬಗ್ಗೆ ಹೇಳಲು ಬಿಗ್ ಬಾಸ್ ಪತ್ರ ಬರುತ್ತದೆ. ಅದರಂತೆ ಮೊದಲು ರವಿಚಂದ್ರನ್ ಅವರೇ ತಮ್ಮ ಮೊದಲ ಪ್ರೇಮದ ಕಥೆ ಹೇಳುತ್ತಾರೆ.


Click the Play button to hear this message in audio format

ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ನಡುವಿನ ಆತ್ಮೀಯತೆ ಇವರಿಬ್ಬರ ತಂದೆಯವರ ಕಾಲದಿಂದಲೇ ಬಂದಿರುವಂಥದ್ದು. ಅದರಲ್ಲೂ ರವಿಚಂದ್ರನ್ ಅವರು ಡಾ. ರಾಜ್‌ಕುಮಾರ್‌ ಅವರಿಗೂ ಆತ್ಮೀಯರಾಗಿದ್ದರು. ಅದಕ್ಕೆ ಮುಖ್ಯ ಕಾರಣ ತಂದೆ ವೀರಾಸ್ವಾಮಿ. ಈ ಎಲ್ಲ ಸಂಬಂಧಗಳನ್ನು ನೆನಪು ಮಾಡುವಂಥ ಘಟನೆ ರವಿಚಂದ್ರನ್

ಕನ್ನಡದ ರಿಯಾಲಿಟಿ ಶೋ- ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ನಡೆಯಿತು.

ರಾಶಿಕಾ ನಟನೆಯ ಚಿತ್ರ ಪ್ಯಾರ್ ಪ್ರಚಾರಕ್ಕಾಗಿ ರವಿಚಂದ್ರನ್ ನಾಯಕನ ಜತೆ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಮನೆ ಮಂದಿ ತಮ್ಮ ಮೊದಲ ಪ್ರೇಮದ ಬಗ್ಗೆ ಹೇಳಲು ಬಿಗ್ ಬಾಸ್ ಪತ್ರ ಬರುತ್ತದೆ. ಅದರಂತೆ ಮೊದಲು ರವಿಚಂದ್ರನ್ ಅವರೇ ತಮ್ಮ ಮೊದಲ ಪ್ರೇಮದ ಕಥೆ ಹೇಳುತ್ತಾರೆ.

ರವಿಚಂದ್ರನ್ ತಂದೆ ವೀರಾಸ್ವಾಮಿ ಕನ್ನಡದ ಜನಪ್ರಿಯ ನಿರ್ಮಾಪಕರಾಗಿ ಹೆಸರು ಮಾಡಿದವರು. ಡಾ. ರಾಜಕುಮಾರ್ ನಟನೆಯ 'ನಾ ನಿನ್ನ ಮರೆಯಲಾರೆ' ಚಿತ್ರ ಕೂಡ ವೀರಾಸ್ವಾಮಿಯವರೇ ನಿರ್ಮಿಸಿದ್ದರು. ಹೀಗಾಗಿ ಚಿತ್ರದಲ್ಲಿ ಅಣ್ಣಾವ್ರು ಬಳಸಿದ್ದ ಬೈಕ್ ಸಿನಿಮಾದ ಬಳಿಕ ರವಿಚಂದ್ರನ್ ಕೈ ಸೇರಿತ್ತು. ಅದರಲ್ಲಿ ಬರ್ರನೆ ಕಾಲೇಜ್ ಗೆ ಬಂದ ರವಿಚಂದ್ರನ್ ಕಂಪೌಂಡ್ ಒಳಗೆ ಎಂಟ್ರಿ‌ಕೊಟ್ಟೊಡನೆ ಒಂದು ಹುಡುಗಿಯರ ಗುಂಪು ಕಾಣಿಸಿತ್ತು. ಅವರಲ್ಲೊಬ್ಬಳು ಮಾತ್ರ ರವಿಚಂದ್ರನ್ ಕಡೆಗೆ ತಿರುಗಿ ನೋಡುತ್ತಾಳೆ.‌ ನೋಡಿ ನಗುತ್ತಾಳೆ. ಆ ನಗು ಇಂದಿಗೂ ತನ್ನೊಳಗೆ ಹಾಗೇ ಉಳಿದುಕೊಂಡಿದೆ ಎಂದು ರವಿಚಂದ್ರನ್ ಹೇಳುತ್ತಾರೆ.

ಕಾಲೇಜ್ ನಲ್ಲಿ ರವಿಚಂದ್ರನ್ ಕುಳಿತುಕೊಳ್ಳುವ ಜಾಗಕ್ಕೆ ಸರಿಯಾಗಿ, ಆಕೆಯಿದ್ದ ತರಗತಿಯ ಕಿಟಕಿ ಕಾಣಿಸುತ್ತಿತ್ತು. ಆ ಕಿಟಕಿಯಲ್ಲಿ ಆಕೆ ನೋಡುತ್ತಿದ್ದರು. ಆಕೆ ಅಲ್ಲಿಂದ ಎದ್ದರೆ ಈ ಕಡೆ ರವಿಚಂದ್ರನ್ ಕೂಡ ಎದ್ದು ಹೊರಗೆ ಬರುತ್ತಿದ್ದರು. ಆಕೆಯ ಮುಂದೆಯೇ ನಾನು ಅಡ್ಡಾಡುತ್ತಿದ್ದೆ ಎಂದು ಖುದ್ದು ರವಿಚಂದ್ರನ್ ತಮ್ಮ ಹಳೆಯ ಪ್ರೇಮಕಥೆಯನ್ನು ಬಿಚ್ಚಿಡುತ್ತಾ ಹೋದರು.

ಕೊನೆಗೂ‌ ಕಾಲೇಜ್ ಆ್ಯನುವಲ್ ಡೇ ಬಂದಿತ್ತು.‌ ರವಿಚಂದ್ರನ್ ಆಗ ಜಾದೂ ಕಲಿತಿದ್ದರು. ವೇದಿಕೆ ಮೇಲೆ ತಾನು ಇಂದ್ರಜಾಲ ವಿದ್ಯೆ ಪ್ರದರ್ಶಿಸುತ್ತಿದ್ದರೆ ಆಕೆ ಅದೆಲ್ಲಿಂದಲೋ ನೋಡುತ್ತಿರುತ್ತಾಳೆ ಎನ್ನುವ ಭಾವ ತನ್ನೊಳಗಿತ್ತು ಅಂತಾರೆ ಕ್ರೇಜಿ. ಆ ದಿನ ರವಿಚಂದ್ರನ್ ಯಕ್ಷಿಣಿ ವಿದ್ಯೆಯ ಪ್ರಾಪರ್ಟಿಗೆಂದು‌ ಕಾಲೇಜ್ ಗೆ ಕಾರಲ್ಲೇ ಬಂದಿರುತ್ತಾರೆ. ಕಾರ್ಯಕ್ರಮ ಮುಗಿಸಿ ವಾಪಾಸ್ ಹೋಗುವಾಗ ದಾರಿಯಲ್ಲಿ ಕಾರು ನಿಲ್ಲಿಸಿ ಆ ಹುಡುಗಿಯಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಕರೆಯುತ್ತಾರೆ. ಆದರೆ ಆಕೆ ನಿರಾಕರಿಸುತ್ತಾಳೆ. ವರ್ಷದ ಕಾಯುವಿಕೆಗೆ ತಣ್ಣೀರೆರಚಿದ ಹಾಗಾಗಿ ಒಳಗೊಳಗೇ ಉಡುಗಿ ಹೋಗುತ್ತಾರೆ.

ಅಲ್ಲಿಂದ ಮನೆಗೆ ಬಂದ ರವಿಚಂದ್ರನ್ ಮತ್ತೆ ಒಂದು ವಾರ ಕಾಲೇಜ್ ಕಡೆಗೆ ಮುಖವೇ ಹಾಕುವುದಿಲ್ಲ. ಇದರ ಮಧ್ಯೆ ಅವಳು ಅದು ಹೇಗೋ ರವಿಚಂದ್ರನ್ ಮನೆಯ ಲ್ಯಾಂಡ್ ಲೈನ್ ನಂಬರ್ ಪಡೆದು ಫೋನ್ ಮಾಡುತ್ತಾರೆ. ಇಲ್ಲಿ ಸ್ವತಃ ರವಿಚಂದ್ರನ್ ಫೋನ್ ಎತ್ತುತ್ತಾರೆ. ಇಬ್ಬರಿಗೂ ಪ್ರೀತಿ ಶುರುವಾಗುತ್ತದೆ.

ಆದರೆ ಈ ಪ್ರೀತಿ ಖಂಡಿತವಾಗಿ ಮುಂದುವರಿಯಲು ಸಾಧ್ಯವಿಲ್ಲ ಅನ್ನುವುದು ರವಿಚಂದ್ರನ್ ಗೆ ಖಚಿತವಾಗುತ್ತಾ ಹೋಗುತ್ತದೆ. ಯಾಕೆಂದರೆ ತನ್ನ ತಂದೆಗೆ ಪ್ರೀತಿ, ಪ್ರೇಮಕ್ಕಿಂತ ಸಾಂಪ್ರದಾಯಿಕ ನೆಮ್ಮದಿಯೇ ಮುಖ್ಯ ಎನ್ನುವುದು ಗೊತ್ತಿರುತ್ತದೆ. ಮಾತ್ರವಲ್ಲ, ಅವರನ್ನು ಎದುರಿಸಿ ಮಾತನಾಡಲು ತಾನು ಜೀವನದಲ್ಲಿ ಏನನ್ನೂ ಸಾಧಿಸಿಲ್ಲ. ಮಾತ್ರವಲ್ಲ, ಅವರನ್ನು ಎದುರಿಸಿ ನೋವು ಕೊಡುವ ಮನಸ್ಸೂ ಇರಲಿಲ್ಲ. ‌ಈ ಎಲ್ಲ ಕಾರಣಗಳಿಂದಾಗಿ ತಾನು ಈ ಪ್ರೀತಿಯಿಂದ ಹಿಂದೆ ಸರಿಯುವುದಾಗಿ ರವಿಚಂದ್ರನ್ ಹೇಳುತ್ತಾರೆ. ಹೀಗೆ ಕನ್ನಡ ಚಿತ್ರರಂಗದ ಅಮರ ಪ್ರೇಮಿ ಕ್ರೇಜಿಸ್ಟಾರ್ ಗೆ ನಿಜ ಜೀವನದಲ್ಲಿ ಮೊದಲ ಪ್ರೇಮ ಭಗ್ನಗೊಳ್ಳುತ್ತದೆ.

ಲವ್ ಮಾಡಿ ಮದುವೆಯಾದ್ರೆ ನಾನು ಸಾಯ್ತಿನಿ ಅಂದಿದ್ರಂತೆ ರವಿಚಂದ್ರನ್ ತಾಯಿ. ಆದ್ರೆ ಪ್ರೀತಿಗಾಗಿ ಪ್ರೇಮಿಗಳು ಸಾಯ್ತಾರೆ ಹೊರತು ಅಪ್ಪ ಅಮ್ಮ ಸಾಯೋಲ್ಲ ಅನ್ನೋ ಸತ್ಯ ಆಮೇಲೆ ಗೊತ್ತಾಯ್ತು ಅಂತಾರೆ ರವಿಚಂದ್ರನ್. ಇದೇ ಕಾರಣಕ್ಕಾಗಿ ಇದೇ ಡೈಲಾಗ್ ಅನ್ನು ಆನಂತರ ತಮ್ಮ ಪ್ರೇಮಲೋಕ ಸಿನಿಮಾದಲ್ಲೂ ಇಟ್ಟಿದ್ದಾಗಿ ರವಿಚಂದ್ರನ್ ಹೇಳಿದ್ರು.

ತಮಗೆ ಇಂಥದೊಂದು ಫಸ್ಟ್ ಲವ್ ಇತ್ತು ಅಂತ ರವಿಚಂದ್ರನ್ ತುಂಬ ಸಲ ಹೇಳಿದ್ದಾರೆ. ಆದ್ರೆ ಇಷ್ಟೊಂದು ಡೀಟೇಲಾಗಿ ವಿವರಿಸಿರೋದು ಇದೇ ಮೊದಲು. ಒಂದು ಆ ಹುಡುಗಿ, ಇನ್ನೊಂದು ʼಏಕಾಂಗಿʼ ಸಿನಿಮಾ.. ಎರಡೂ ತಮ್ಮ ಪ್ರೀತಿಯ ಅನುಭವಗಳು. ಎರಡನ್ನು ಎಣಿಸಿಕೊಂಡರೂ ಹೃದಯ ಕಿವಿಚಿದಂತಾಗುತ್ತದೆ ಎನ್ನುತ್ತಾರೆ ಅವರು.

ಇದೇ ಸಂದರ್ಭದಲ್ಲಿ ಮನೆಯ ಸದಸ್ಯರು ಕೂಡ ತಮ್ಮ ಪ್ರಥಮ ಪ್ರೇಮದ ಬಗ್ಗೆ ಹಂಚಿಕೊಳ್ಳುತ್ತಾರೆ.

ಬಳಿಕ ಪ್ಯಾರ್ ಚಿತ್ರದ ನಾಯಕ ಭರತ್ ಮತ್ತು ರಾಶಿಕಾ ಹೊಸದಾಗಿ ಬಿಡುಗಡೆಯಾದ ಪ್ರೇಮಗೀತೆಗೆ ಹೆಜ್ಜೆ ಹಾಕುತ್ತಾರೆ. ರವಿಚಂದ್ರನ್ ಸ್ಪರ್ಧಿಗಳಾದ ಕಾವ್ಯಾ ಮತ್ತು ಸ್ಪಂದನಾರ ಜತೆ ನೃತ್ಯ ಮಾಡುತ್ತಾರೆ. ಎಲ್ಲ ಸದಸ್ಯರು ಜತೆಯಾಗಿ ಹೆಜ್ಜೆ ಹಾಕುತ್ತಾರೆ. ಚಿತ್ರದ ಪ್ರಚಾರಕ್ಕಾಗಿ ನಾಯಕಿ ರಾಶಿಕಾರನ್ನು ಕೂಡ ಮನೆಯಿಂದ ಕರೆದುಕೊಂಡು ಹೋಗುವಂತೆ ರಜತ್ ತಮಾಷೆ ಮಾಡುತ್ತಾರೆ.

ಪ್ಯಾರ್ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದ್ದು ಇನ್ನೂ ಹಾಡಿನ ಚಿತ್ರೀಕರಣ ಬಾಕಿ ಇದೆ ಎಂದು ಚಿತ್ರದ ನಾಯಕ ರಿಶ್ವಿನ್ ಹೇಳುತ್ತಾರೆ. ಒಂದಷ್ಟು ಖುಷಿಯ ಸಮಯದ ಬಳಿಕ ರವಿಚಂದ್ರನ್ ಮತ್ತು ಭರತ್ ಮನೆಯಿಂದ ಹೊರಗಡೆ ಬರುತ್ತಾರೆ.

ರವಿಚಂದ್ರನ್ ಅವರು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದು ಇದೇ ಮೊದಲೇನಲ್ಲ.‌ ಈ ಹಿಂದೆ ಶ್ರುತಿ ಸ್ಪರ್ಧಿಯಾಗಿದ್ದಾಗ ಕೂಡ ರವಿಚಂದ್ರನ್ ಮನೆಯೊಳಗೆ ಸರ್ಪ್ರೈಸ್ ಎಂಟ್ರಿ ನೀಡಿದ್ದರೆಂಬುದನ್ನು ಸ್ಮರಿಸಬಹುದು.

ಇನ್ನು ಪ್ಯಾರ್ ಚಿತ್ರದ ಬಗ್ಗೆ ಹೇಳಬೇಕಾದ್ರೆ ಇದರಲ್ಲಿ ರವಿಚಂದ್ರನ್ ರಾಶಿಕ ಶೆಟ್ಟಿಯ ತಂದೆಯ ಪಾತ್ರ ಮಾಡಿದ್ದಾರೆ. ಇದು ಫ್ಲಾಶ್ ಬ್ಯಾಕ್ ನಲ್ಲಿ ಬರುವ ಕ್ಯಾರೆಕ್ಟರ್ ಆಗಿದ್ದು, ಚಿತ್ರಕ್ಕಾಗಿ ತಾವು 7 ದಿನಗಳ ಕಾಲ ಕಾಲ್ ಶೀಟ್ ನೀಡಿದ್ದಾಗಿ ರವಿಚಂದ್ರನ್ ಹೇಳಿದ್ದಾರೆ. ತಾವು ಚಿತ್ರದಲ್ಲಿ ರಾಶಿಕ ತಂದೆ ಪಾತ್ರ ಮಾಡೋದ್ರಿಂದಾಗಿಯೇ ಬಿಗ್ ಬಾಸ್ ಮನೇಲಿ ರವಿಚಂದ್ರನ್ ಲವ್ ಸಾಂಗ್ ಗೆ ರಾಶಿಕ ಜತೆ ಹೆಜ್ಜೆ ಹಾಕಲು ಒಪ್ಪಿಲ್ಲ.

ರವಿಚಂದ್ರನ್ ಪ್ರಸ್ತುತ ಗಾಡ್ ದಿ ಕ್ರೇಜಿ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ಜತೆ ಕಿರಿಯ ಪುತ್ರ ವಿಕ್ರಮ್ ಕೂಡ ಒಂದು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರ ಮುಂದಿನ ವರ್ಷ ಮತ್ತೆ ರವಿಚಂದ್ರನ್ ಕ್ರೇಜ್ ಸೃಷ್ಟಿಸೊ ನಿರೀಕ್ಷೆ ಇದೆ.

Read More
Next Story