ನಟ ದುನಿಯಾ ವಿಜಯ್ ಡಿವೋರ್ಸ್ ಅರ್ಜಿ ವಜಾಗೊಳಿಸಿದ ಕೋರ್ಟ್
ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನರಿಂದ ವಿಚ್ಚೇದನ ಕೋರಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನರಿಂದ ವಿಚ್ಚೇದನ ಕೋರಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಕ್ರೌರ್ಯದ ಆಧಾರದ ಮೇಲೆ ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ಆದರೆ ಇದನ್ನು ಸಾಬೀತುಪಡಿಸಲು ವಿಫಲವಾದ ಕಾರಣ ಅರ್ಜಿ ವಜಾ ಆಗಿದೆ. ಈ ಬಗ್ಗೆ ಬೆಂಗಳೂರಿನ ಶಾಂತಿನಗರ ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದೆ.
ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರಿಂದ ವಿಜಯ್ ದೂರವಾಗಿದ್ದಾರೆ. ಪತ್ನಿಗೆ ಡಿವೋರ್ಸ್ ನೀಡದೇ ದುನಿಯಾ ವಿಜಯ್ ಕೀರ್ತಿ ಗೌಡ ಎಂಬವವರನ್ನು ಮದುವೆ ಆಗಿದ್ದಾರೆ. ಸದ್ಯ ಕೀರ್ತಿ ಗೌಡ ಅವರೊಂದಿಗೆ ದಾಂಪತ್ಯ ಜೀವನ ಮುಂದುವರಿಸಿದ್ದಾರೆ.
'ದುನಿಯಾ ವಿಜಯ್ ಸಲ್ಲಿಸಿರುವ ಅರ್ಜಿ ವಜಾ ಆಗಿದೆ. ಈಗ ವಿಜಯ್ ಅವರನ್ನು ಸಂಪರ್ಕ ಮಾಡಿ ಮುಂದೆ ಏನು ಮಾಡಬೇಕು ಅಂತ ಹೇಳುತ್ತೇವೆ. ಸದ್ಯ ವಿಜಯ್ ಶೂಟಿಂಗ್‌ನಲ್ಲಿ ಇದ್ದಾರೆ. ವಿಜಯ್ ಅವರಿಗೆ ಇನ್ನೂ ಏನೂ ಹೇಳಿಲ್ಲ. ಮಕ್ಕಳ ಫ್ಯೂಚರ್ ದೃಷ್ಠಿಯಿಂದ ಮಾತನಾಡಿ ಹೇಳುತ್ತೇವೆ ಆದರೆ ಇದು ಇಲ್ಲಿಗೆ ಮುಗಿದಿಲ್ಲ. ಹೈ ಕೋರ್ಟ್ ಹೋಗಬೇಕಾ ಅಂತ ವಿಜಯ್ ಅವರ ಜೊತೆ ಚರ್ಚೆ ಮಾಡಿ ಹೇಳುತ್ತೇನೆ' ಎಂದು ದುನಿಯಾ ವಿಜಯ್ ವಕೀಲೆ ರಾಜ ರಾಜೇಶ್ವರಿ ಹೇಳಿದ್ದಾರೆ.
2019ರಲ್ಲಿ ನಟ ದುನಿಯಾ ವಿಜಯ್ ವಿರುದ್ಧ ಪತ್ನಿ ನಾಗರತ್ನ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದರು. ವಿಚಾರಣೆಗೆ ಹಾಜರಾಗಿದ್ದ ವಿಜಯ್ "ನಾಗರತ್ನ ಜೊತೆ ಬಾಳಲು ನನ್ನಿಂದ ಸಾಧ್ಯವಿಲ್ಲ" ಎಂದು ಹೇಳಿದ್ದಾಗಿ ವರದಿಯಾಗಿತ್ತು. ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನಾಗರತ್ನಗೆ ಜೀವನಾಂಶ ಕೊಟ್ಟಿದ್ದೇನೆ ಎಂದು ದುನಿಯಾ ವಿಜಯ್ ಹೇಳಿದ್ದರು. ಆದರೆ ಅದೆಲ್ಲಾ ಸುಳ್ಳು ನನಗೆ ಯಾವುದೇ ಜೀವನಾಂಶ ನೀಡಿಲ್ಲ ಎಂದು ನಾಗರತ್ನ ಹೇಳಿದ್ದರು.
ಇನ್ನು ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣದಲ್ಲಿ ವಿಜಯ್ ನ್ಯಾಯಾಂಗ ಬಂಧನದಲ್ಲಿದ್ದಾಗ ನಾಗರತ್ನ ಹಾಗೂ ಕೀರ್ತಿಗೌಡ ನಡುವೆ ಜಗಳವಾಗಿತ್ತು. ಕೀರ್ತಿ ಗೌಡ ಮೇಲೆ ನಾಗರತ್ನ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು.
ಇನ್ನು 2013ರಲ್ಲಿ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ದುನಿಯಾ ವಿಜಯ್ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಆದರೆ ನಾಗರತ್ನ ಇದಕ್ಕೆ ನಿರಾಕರಿಸಿದ್ದರು. ಬಳಿಕ ರಾಜಿ-ಸಂಧಾನ ನಡೆದು ಎಲ್ಲವೂ ಸರಿ ಹೋಗಿತ್ತು. ಒಂದಷ್ಟು ಷರತ್ತುಗಳ ಅನ್ವಯ ವಿಜಯ್-ನಾಗರತ್ನ ಜೊತೆ ಒಟ್ಟಿಗೆ ಜೀವನ ಸಾಗಿಸಲು ಒಪ್ಪಿಕೊಂಡಿದ್ದರು. ಆದರೆ, ಅಲ್ಲಿಂದ ಬಂದ ಮೇಲೂ ಅವರ ಮಧ್ಯೆ ಬಾಂಧವ್ಯ ಸರಿಯಾಗಿಲ್ಲ. ಹಾಗಾಗಿ ಬೇರೆ ಹೋಗಲು ನಿರ್ಧರಿದ್ದರು ಎಂದು ನಟ ವಿಜಯ್ ಈ ಹಿಂದೆ ಹೇಳಿದ್ದರು.