ನಟ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು
ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲಾಗಿದೆ. ಇತ್ತೀಚೆಗೆ ಫಹಾದ್ ನಿರ್ಮಾಣದ ‘ಪೇಯ್ನ್‌ಕಿಲಿ’ ಚಿತ್ರದ ಚಿತ್ರೀಕರಣ ಕೇರಳದ ಆಸ್ಪತ್ರೆಯಲ್ಲಿ ನಡೆದಿತ್ತು.
ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲಾಗಿದೆ. ಇತ್ತೀಚೆಗೆ ಫಹಾದ್ ನಿರ್ಮಾಣದ ‘ಪೇಯ್ನ್‌ಕಿಲಿ’ ಚಿತ್ರದ ಚಿತ್ರೀಕರಣ ಕೇರಳದ ಆಸ್ಪತ್ರೆಯಲ್ಲಿ ನಡೆದಿತ್ತು. ಆದರೆ ಚಿತ್ರತಂಡ ರೋಗಿಗಳಿಗೆ ತೊಂದರೆ ಕೊಟ್ಟ ಕಾರಣ ಮಾನವ ಹಕ್ಕುಗಳ ಆಯೋಗ ಫಹಾದ್ ವಿರುದ್ಧ ದೂರು ದಾಖಲಿಸಿಕೊಂಡಿದೆ.
ಎರ್ನಾಕುಲಂನ ಅಂಗಮಾಲಿ ತಾಲೂಕು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ʼಪೇಯ್ನ್‌ಕಿಲಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ ರೋಗಿಗಳಿಗೆ ತೊಂದರೆಯಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಶುಕ್ರವಾರ ಕ್ರಮ ಕೈಗೊಂಡಿದೆ.
ವರದಿಗಳ ಆಧಾರದ ಮೇಲೆ ಸ್ವಯಂ ಪ್ರಕರಣವನ್ನು ದಾಖಲಿಸಿಕೊಂಡ ಆಯೋಗದ ಸದಸ್ಯೆ ವಿ ಕೆ ಬೀನಾ ಕುಮಾರಿ, ಏಳು ದಿನಗಳಲ್ಲಿ ವಿವರಣೆ ವರದಿಯನ್ನು ಸಲ್ಲಿಸುವಂತೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿ ಮತ್ತು ಅಂಗಮಾಲಿ ತಾಲೂಕು ಆಸ್ಪತ್ರೆ ಅಧೀಕ್ಷಕರಿಗೆ ಸೂಚಿಸಿದರು.
ಎರ್ನಾಕುಲಂ ಸ್ಥಳೀಯ ಮಾಧ್ಯಮ ವರದಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಚಿತ್ರೀಕರಣದ ವೇಳೆ ನಟರು ಸೇರಿದಂತೆ ಸುಮಾರು 50 ಮಂದಿ ಹಾಜರಿದ್ದು, ತುರ್ತು ಚಿಕಿತ್ಸಾ ಕೊಠಡಿಯನ್ನೂ ನಿರ್ಲಕ್ಷಿಸಿ ಶೂಟಿಂಗ್ ಹೆಸರಲ್ಲಿ ಚಿತ್ರತಂಡ ಗಲಾಟೆ ಮಾಡಿದೆ, ದೊಡ್ಡ ದೊಡ್ಡ ಲೈಟ್‌ಗಳನ್ನು ಹಾಕಿದ್ದಾರೆ. ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಕೆಲವು ನಿರ್ಬಂಧಗಳನ್ನು ಹಾಕಿ ಅಲ್ಲಿನ ಸಿಬ್ಬಂದಿ ಹಾಗೂ ರೋಗಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿರುವಾಗಲೇ ಚಿತ್ರದ ಶೂಟಿಂಗ್ ನಡೆದಿದೆ ಎಂದು ತಿಳಿದುಬಂದಿದೆ.
ಗಂಭೀರ ಸ್ಥಿತಿಯಲ್ಲಿ ಬಂದ ರೋಗಿಗಳಿಗೆ ತುರ್ತು ಚಿಕಿತ್ಸಾ ವಿಭಾಗಕ್ಕೂ ಬರಲು ಸಾಧ್ಯವಾಗಲಿಲ್ಲ. ಮುಖ್ಯ ಗೇಟ್‌ನಿಂದ ಯಾರನ್ನೂ ಬಿಡಲಿಲ್ಲ. ಚಿತ್ರೀಕರಣದ ಸಮಯದಲ್ಲಿ ಮೌನವಾಗಿರಲು ಸಿಬ್ಬಂದಿಗಳು ರೋಗಿಗಳಿಗೆ ಮತ್ತು ಪಕ್ಕದಲ್ಲಿದ್ದವರಿಗೆ ಚಿತ್ರತಂಡ ಸೂಚಿಸುತ್ತಿದ್ದರು ಎಂದು ವರದಿಯಾಗಿದೆ.
‘ಪೇಯ್ನ್‌ಕಿಲಿ’ ಚಿತ್ರಕ್ಕೆ ಫಹಾದ್ ಫಾಸಿಲ್ ಬಂಡವಾಳ ಹೂಡಿದ್ದಾರೆ. ಹಾಗಾಗಿ ಅವರ ವಿರುದ್ಧವೇ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ಫಹಾದ್ ಫಾಸಿಲ್ ಇನ್ನು ಪ್ರತಿಕ್ರಿಯಿಸಿಲ್ಲ. ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ.