Bigg Boss Kannada | ಬಿಗ್‌ಬಾಸ್‌ ರಿಯಾಲಿಟಿ ಶೋ ವಿರುದ್ಧ ಎಸ್‌ಎಚ್‌ಆರ್‌ಸಿ, ಎಸ್‌ಡಬ್ಲ್ಯೂಸಿಗೆ ದೂರು
x
ಬಿಗ್‌ಬಾಸ್‌ ಕನ್ನಡ

Bigg Boss Kannada | ಬಿಗ್‌ಬಾಸ್‌ ರಿಯಾಲಿಟಿ ಶೋ ವಿರುದ್ಧ ಎಸ್‌ಎಚ್‌ಆರ್‌ಸಿ, ಎಸ್‌ಡಬ್ಲ್ಯೂಸಿಗೆ ದೂರು

ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಖಾಸಗಿ ವ್ಯಕ್ತಿಗಳು ಬಂಧನದಲ್ಲಿರಿಸುವ ಹಕ್ಕನ್ನು ಹೊಂದಿರುವುದಿಲ್ಲ. ಇದು ವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಎರಡೂ ದೂರಿನಲ್ಲಿ ಆರೋಪಿಸಲಾಗಿದೆ


ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ವಿರುದ್ಧ ಶುಕ್ರವಾರ ರಾಜ್ಯ ಮಾನವ ಹಕ್ಕು ಆಯೋಗ ಮತ್ತು ರಾಜ್ಯ ಮಹಿಳಾ ಆಯೋಗದಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಶೋ ನಿಲ್ಲಿಸಿ, ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಲು ಕೋರಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ದೂರು ಸಲ್ಲಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಆಗಮಿಸಿ ದೂರು ನೀಡಿದ ಅವರು, ಚಿತ್ರನಟ-ಶೋ ನಿರೂಪಕ ಕಿಚ್ಚ ಸುದೀಪ್, ಕಲರ್ಸ್ ಕನ್ನಡ ಟಿವಿ ಬಿಜಿನೆಸ್ ಹೆಡ್, ವಯಾಕಾಮ್ 18 ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ದಿನಾಂಕ 2-10-2024ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ʼನರಕವಾಸಿʼ ಸ್ಪರ್ಧಿಗಳು ಬಂದಾಗಿಂದಲೂ ತಮಗೆ ಕೇವಲ ಗಂಜಿ ಊಟ ಕೊಡಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ನರಕವಾಸಿಗಳಿಗೆ ಶೌಚಕ್ಕೆ ಅವಸರವಾದಾಗ ಸ್ವರ್ಗವಾಸಿ ಸ್ಪರ್ಧಿಗಳು ಸ್ವಲ್ಪ ತಡೆದುಕೊಳ್ಳಿ ಎಂದು ಹೇಳುವುದು, ಇದಕ್ಕೆ ನರಕವಾಸಿ ಸ್ಪರ್ಧಿಗಳು ಪ್ರತಿಭಟಿಸುವುದನ್ನು ಕೂಡ ಪ್ರಸಾರ ಮಾಡಲಾಗಿದೆ.

ಬಹುಮಾನ ಮತ್ತು ಹಣದ ಆಮಿಷ ಒಡ್ಡಿ ಸ್ಪರ್ಧಿಗಳನ್ನು ಬಿಡದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆಯೊಂದರಲ್ಲಿ ಕೂಡಿಹಾಕಲಾಗಿದೆ. ಟಾಸ್ಕ್ ಗಳ ಹೆಸರಲ್ಲಿ ಅವರಿಗೆ ದೈಹಿಕ, ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಹಣ, ಬಹುಮಾನದ ಆಸೆಗೆ ಕಾಂಟ್ರಾಕ್ಟ್ ಗೆ ಸಹಿ ಮಾಡಿದ ಸ್ಪರ್ಧಿಗಳು ಅಲ್ಲಿ ನಡೆಯುವ ಶೋಷಣೆಯನ್ನು ಹೊರಗೆ ಹೇಳದಂತೆ ಬಾಯಿಮುಚ್ಚಿಸಲಾಗಿದೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಅಕ್ರಮವಾಗಿ ಬಂಧಿಸಿಟ್ಟು, ಅವರಿಗೆ ಸರಿಯಾದ ಪೌಷ್ಟಿಕ ಆಹಾರವನ್ನೂ ನೀಡದೆ, ಅವರ ದೇಹಬಾಧೆ ತೀರಿಸಿಕೊಳ್ಳಲೂ ಇತರರ ಅನುಮತಿ ಪಡೆಯುವಂಥ ಪರಿಸ್ಥಿತಿ ನಿರ್ಮಿಸಿರುವುದು ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಒಂದು ವೇಳೆ ಆಮಿಷಕ್ಕೆ ಒಳಗಾಗಿ ಸ್ಪರ್ಧಿಗಳು ಈ ಶೋಷಣೆಗೆ ಒಪ್ಪಿಗೆ ನೀಡಿದ್ದರೂ ಅದು ಕಾನೂನು ಪ್ರಕಾರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಿಗ್ ಬಾಸ್ ನಲ್ಲಿ ಹೀಗೆ ಜನರನ್ನು ಕೂಡಿಡುವುದೇ ಒಂದು ಅಪರಾಧವಾಗುತ್ತವೆ. ಯಾಕೆಂದರೆ ಯಾವ ಮನುಷ್ಯನನ್ನೂ ಅವನ ಒಪ್ಪಿಗೆ ಇರಲಿ, ಇಲ್ಲದೇ ಇರಲಿ ಕೂಡಿ ಹಾಕುವುದು ಅಪರಾಧವಾಗುತ್ತದೆ. ಬಿಗ್ ಬಾಸ್ ನಿರ್ಮಾಪಕರು ಮುಂದೆ ಕಾನೂನು ತೊಡಕು ಬಾರದೇ ಇರಲಿ ಎಂದು ಹಲವಾರು ನಿಬಂಧನೆಗಳು ಇರುವ ಕಾಗದಪತ್ರಗಳಿಗೆ ಸ್ಪರ್ಧಿಗಳ ಬಳಿ ಸಹಿ ಹಾಕಿಸಿಕೊಂಡಿರುತ್ತಾರೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆಯುತ್ತಿರುವ ಎಲ್ಲ ಅಮಾನವೀಯ ಚಿತ್ರ ಹಿಂಸೆ, ಕ್ರೌರ್ಯಗಳನ್ನು ದೃಶ್ಯ ಮಾಧ್ಯಮದ ಮೂಲಕ ಭಿತ್ತರಿಸುವುದೂ ಕೂಡ ಘೋರ ಅಪರಾಧವಾಗಿರುತ್ತದೆ. ಈ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಜನರು ನೋಡುತ್ತಿರುವುದರಿಂದ ಅವರ ಮಾನಸಿಕತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಈ ಕಾರ್ಯಕ್ರಮದ ಪ್ರೇರಣೆಯಿಂದ ಇಂಥದ್ದೇ ಕ್ರೌರ್ಯ, ಹಿಂಸೆಗಳು ಸಮಾಜದಲ್ಲೂ ಘಟಿಸುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಈ ಕಾರಣದಿಂದ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದು ಬಹಳ ತುರ್ತು ಅಗತ್ಯವಾಗಿರುತ್ತದೆ ಎಂದು ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಎಲ್ಲಾ ಹಿನ್ನೆಲೆಗಳನ್ನು ಗಮನಿಸಿ, ಕೂಡಲೇ ಈ ಕಾರ್ಯಕ್ರಮ ಸ್ಥಗಿತಗೊಳಿಸಿ, ಅಕ್ರಮವಾಗಿ ಬಂಧನಕ್ಕೆ ಒಳಗಾಗಿರುವ ಎಲ್ಲ ಸ್ಪರ್ಧಿಗಳನ್ನು ಹೊರಗೆ ತರಬೇಕು. ಕಳೆದ ಐದಾರು ದಿನಗಳಿಂದ ಶೂಟ್ ಮಾಡಲಾದ ಎಲ್ಲ ಫುಟೇಜ್ ಗಳನ್ನೂ, ಹಾರ್ಡ್ ಡಿಸ್ಕ್ ಗಳನ್ನೂ ವಶಪಡಿಸಿಕೊಂಡು ಸಾಕ್ಷ್ಯ ನಾಶವಾಗದಂತೆ ಕಾಪಾಡಬೇಕು. ಅದೇ ರೀತಿ ಇದರಲ್ಲಿ ಪಾಲ್ಗೊಂಡಿರುವ ಸಂಸ್ಥೆ ಮತ್ತು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ತನಿಖಾ ಏಜೆನ್ಸಿಗೆ ತನಿಖೆ ನಡೆಸಲು ಆದೇಶಿಸಬೇಕೆಂದು ಎಂದು ಎಂ. ನಾಗಮಣಿ ಮಾನವ ಹಕ್ಕುಗಳ ಆಯೋಗವನ್ನು ಕೋರಿದ್ದಾರೆ.

ಮಹಿಳಾ ಆಯೋಗಕ್ಕೆ ಪ್ರತ್ಯೇಕ ದೂರು

ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಮಹಿಳೆಯರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದು ವಕೀಲೆ ರಕ್ಷಿತಾ ಪಿ ಸಿಂಗ್‌ ಅವರು ರಾಜ್ಯ ಮಹಿಳಾ ಆಯೋಗಕ್ಕೆ ಶುಕ್ರವಾರ ಮತ್ತೊಂದು ಪ್ರತ್ಯೇಕ ದೂರು ನೀಡಿದ್ದಾರೆ.

ಬಿಗ್ ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ದಮನ ಮಾಡಿ ಸಾರ್ವಜನಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಖ್ಯಾತ ಚಲನಚಿತ್ರ ನಟ ಸುದೀಪ್ ನಿರೂಪಣೆ ಮಾಡುವ ಬಿಗ್ ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರುಷ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಭಾರತದ ನಾಗರಿಕರನ್ನು ಖಾಸಗಿ ವ್ಯಕ್ತಿಗಳು ಬಂಧನದಲ್ಲಿರಿಸುವ ಹಕ್ಕನ್ನು ಹೊಂದಿರುವುದಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಸ್ತುತ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರನ್ನು ಒಂದು ಜೈಲಿನ ರೂಪದಲ್ಲಿರುವ ಬಂದಿಖಾನೆಯಂತಹ ಕೊಠಡಿಯಲ್ಲಿ ನೂರಾರು ಕ್ಯಾಮರಗಳಲ್ಲಿ ರೆಕಾರ್ಡ್ ಆಗುವಂತೆ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ. ಇವರಿಗೆ ಕೇವಲ ಗಂಜಿಯನ್ನು ಆಹಾರವಾಗಿ ನೀಡಲಾಗುತ್ತಿರುವುದು ಸಂವಿಧಾನ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದಿರುವುದು ಅಪರಾಧವಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆ ನೀಡದೆ ಅವರನ್ನು ದೈಹಿಕ ಬಾಧೆ ತೀರಿಸಿಕೊಳ್ಳಲು ಮತ್ತೊಬ್ಬರ ಅನುಮತಿ ಮೇರೆಗೆ ಶೌಚಾಲಯ ಉಪಯೋಗಿಸುವಂತಹ ಬಲವಂತಕ್ಕೆ ಒಳಪಡಿಸುವುದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಕಾನೂನುಬದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದು ಇಂತಹ ನಿರ್ಬಂಧಗಳನ್ನು ಹೇರುವುದು ಸಂವಿಧಾನ ಬಾಹಿರ. ಮಹಿಳೆಯರಿಗೆ ಸೂಕ್ತ ಸೌಲಭ್ಯಗಳನ್ನು ನೀಡದೆ ಆಹಾರ ನಿರಾಕರಿಸುವ ಮೂಲಕ ಅವರ ಹಕ್ಕುಗಳನ್ನು ದಮನ ಮಾಡುತ್ತಿರುವ ಬಿಗ್ ಬಾಸ್ 11ರ ಕಾರ್ಯಕ್ರಮ ನಿರ್ವಹಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Read More
Next Story