
ಯಶ್ ಅಭಿನಯದ ಟಾಕ್ಸಿಕ್ ರೀಶೂಟ್ ವದಂತಿ ತಳ್ಳಿಹಾಕಿದ ಚಿತ್ರತಂಡ
ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ 100 ದಿನಗಳ ಮರುಚಿತ್ರೀಕರಣದ ವದಂತಿ ಸಂಪೂರ್ಣ ಸುಳ್ಳು ಎಂದು ಚಿತ್ರದ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಕುರಿತು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ದೊಡ್ಡ ವದಂತಿಯೊಂದಕ್ಕೆ ಚಿತ್ರತಂಡ ಇದೀಗ ತೆರೆ ಎಳೆದಿದೆ. ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ನಟ ಯಶ್ ಅಸಮಾಧಾನಗೊಂಡಿದ್ದಾರೆ ಮತ್ತು ಅದಕ್ಕಾಗಿ ಚಿತ್ರತಂಡ ಬರೋಬ್ಬರಿ 100 ದಿನಗಳ ಕಾಲ ಕೋಟಿ ಕೋಟಿ ಖರ್ಚು ಮಾಡಿ ಮರುಚಿತ್ರೀಕರಣ (ರೀಶೂಟ್) ಮಾಡಲು ಯೋಜಿಸುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ವದಂತಿಗಳು ವ್ಯಾಪಕವಾಗಿ ಹರಡುತ್ತಿದ್ದಂತೆ ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದಲ್ಲಿ ಸಿನಿಮಾ ವಿಳಂಬವಾಗಬಹುದು ಎಂಬ ಆತಂಕ ಹಾಗೂ ಗೊಂದಲ ಮೂಡಿತ್ತು.
ಆದರೆ ಈ ಎಲ್ಲಾ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು 'ಟಾಕ್ಸಿಕ್' ಚಿತ್ರದ ನಿರ್ಮಾಣ ಸಂಸ್ಥೆ ಸ್ಪಷ್ಟಪಡಿಸಿದೆ. ಚಿತ್ರದ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿ, ಸಿನಿಮಾಗೆ ಯಾವುದೇ ಹೆಚ್ಚುವರಿ ಚಿತ್ರೀಕರಣ ಅಥವಾ ಮರುಚಿತ್ರೀಕರಣದ ವೇಳಾಪಟ್ಟಿಯನ್ನು ನಿಗದಿಪಡಿಸಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸಿನಿಮಾ ಯೋಜನೆಯು ಯಾವುದೇ ಬದಲಾವಣೆಗಳಿಲ್ಲದೆ ಮೊದಲೇ ಅಂದುಕೊಂಡಂತೆ ಅತ್ಯಂತ ಸುಗಮವಾಗಿ ಸಾಗುತ್ತಿದೆ ಎಂದು ತಿಳಿಸುವ ಮೂಲಕ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಮಧ್ಯಪ್ರಾಚ್ಯ ಭಾಗದಲ್ಲಿ ನಡೆಯುತ್ತಿರುವ ಸಂಘರ್ಷಗಳ ಕಾರಣದಿಂದಾಗಿ ವಿದೇಶಿ ಮಾರುಕಟ್ಟೆಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇ ಇಂತಹ ವದಂತಿಗಳು ಹರಡಲು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕೆಜಿಎಫ್ ಚಾಪ್ಟರ್ 2 ಚಿತ್ರದ ಭರ್ಜರಿ ಯಶಸ್ಸಿನ ನಂತರ ಯಶ್ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದರಿಂದ 'ಟಾಕ್ಸಿಕ್' ಮೇಲಿನ ನಿರೀಕ್ಷೆಗಳು ಗಗನಕ್ಕೇರಿವೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದಕ್ಷಿಣ ಹಾಗೂ ಬಾಲಿವುಡ್‌ನ ಘಟಾನುಘಟಿ ತಾರಾಗಣವೇ ಒಂದಾಗಿದೆ. ಪ್ರಸ್ತುತ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ ಪ್ರಕಟವಾಗಬೇಕಾಗಿದ್ದರೂ, ಮರುಚಿತ್ರೀಕರಣದ ವದಂತಿಗಳಿಗೆ ಬ್ರೇಕ್ ಬಿದ್ದಿರುವುದು ಯಶ್ ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿಸಿದೆ.

