
ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ಮುಂದಿನ ಸಿನಿಮಾ ಆಪರೇಷನ್ ಸಿಂಧೂರ್?
ದಿ ಕಾಶ್ಮೀರ್ ಫೈಲ್ಸ್' ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ಟಿ-ಸಿರೀಸ್ ಭೂಷಣ್ ಕುಮಾರ್ ಈಗ 'ಆಪರೇಷನ್ ಸಿಂಧೂರ್' ಎಂಬ ಬೃಹತ್ ಸಿನಿಮಾ ನಿರ್ಮಿಸಲು ಒಂದಾಗಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ದಿ ಬೆಂಗಾಲ್ ಫೈಲ್ಸ್’ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇದೀಗ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲಿನ ಭಯೋತ್ಪಾದಕ ಅಡಗುತಾಣಗಳ ಮೇಲೆ ನಡೆಸಿದ ಪ್ರತೀಕಾರದ ದಾಳಿ ‘ಆಪರೇಷನ್ ಸಿಂಧೂರ್’ ಆಧಾರಿತ ಸಿನಿಮಾವನ್ನು ಅವರು ಕೈಗೆತ್ತಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಳೆದ 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಮೇ 7ರಂದು ಪಾಕಿಸ್ತಾನದ ಒಳಗಿರುವ ಉಗ್ರರ ನೆಲೆಗಳ ಮೇಲೆ ನಡೆಸಿದ ವಾಯುದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ಗೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ವಾಯುಸೇನೆ ಮತ್ತು ನೌಕಾದಳವು ಜಂಟಿಯಾಗಿ ಪಾಕ್ ಮೂಲದ ಲಷ್ಕರ್-ಎ-ತೋಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದವು. ಇದೇ ರೋಮಾಂಚಕ ಸತ್ಯ ಘಟನೆಯನ್ನು ತೆರೆಯ ಮೇಲೆ ತರಲು ವಿವೇಕ್ ಅಗ್ನಿಹೋತ್ರಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿವೇಕ್ ಅಗ್ನಿಹೋತ್ರಿ ಹೇಳಿದ್ದೇನು?
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, "ನಾನು ಸದ್ಯ ಅತ್ಯಂತ ದೊಡ್ಡ ಮಟ್ಟದ ಮತ್ತು ಆಸಕ್ತಿದಾಯಕವಾದ ರಾಷ್ಟ್ರೀಯತಾ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಸರಿಯಾದ ಸಮಯದಲ್ಲಿ ನಾನು ಅಧಿಕೃತ ಘೋಷಣೆ ಮಾಡುತ್ತೇನೆ," ಎನ್ನುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಪ್ರಮುಖ ನಿರ್ಮಾಣ ಸಂಸ್ಥೆಗಳ ಸಹಯೋಗ
ಪಿಂಕ್ವಿಲ್ಲಾ ವರದಿಯ ಪ್ರಕಾರ, ಈ ಚಿತ್ರವನ್ನು ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ‘ಟಿ-ಸೀರೀಸ್’ ಮುಖ್ಯಸ್ಥ ಭೂಷಣ್ ಕುಮಾರ್ ಮತ್ತು ವಿವೇಕ್ ಅಗ್ನಿಹೋತ್ರಿ ಅವರ ‘ಐ ಆಮ್ ಬುದ್ಧ ಪ್ರೊಡಕ್ಷನ್ಸ್’ ಜಂಟಿಯಾಗಿ ನಿರ್ಮಿಸಲಿವೆ. ಭಾರತೀಯ ಸೇನೆಯ ಶೌರ್ಯ ಮತ್ತು ದೇಶದ ಭದ್ರತೆಯ ವಿಷಯವನ್ನು ಹೊಂದಿರುವ ಈ ಚಿತ್ರವು ದೊಡ್ಡ ಮಟ್ಟದ ಬಜೆಟ್‌ನಲ್ಲಿ ಮೂಡಿಬರಲಿದೆ. ಈಗಾಗಲೇ ಪಹಲ್ಗಾಮ್ ಘಟನೆಯ ನಂತರ ‘ಆಪರೇಷನ್ ಸಿಂಧೂರ್’ ಶೀರ್ಷಿಕೆ ನೋಂದಾಯಿಸಲು ಹಲವು ನಿರ್ಮಾಪಕರು ಮುಗಿಬಿದ್ದಿದ್ದರು, ಆದರೆ ಅಗ್ನಿಹೋತ್ರಿ ಅವರೇ ಈ ಯೋಜನೆಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

