
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಉಡುಪುಗಳನ್ನು ಅನಾಮಿಕಾ ಖನ್ನಾ ಹೇಗೆ ವಿನ್ಯಾಸಗೊಳಿಸಿದರು.
Virosh wedding| ವಿಜಯ್-ರಶ್ಮಿಕಾ ಮದುವೆಯ ಉಡುಪಿನ ರಹಸ್ಯ ಬಿಚ್ಚಿಟ್ಟ ಅನಾಮಿಕಾ ಖನ್ನಾ
ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಅದ್ಧೂರಿ ವಿವಾಹದ ಉಡುಪುಗಳ ಹಿಂದಿನ ರಹಸ್ಯವನ್ನು ಡಿಸೈನರ್ ಅನಾಮಿಕಾ ಖನ್ನಾ ಬಿಚ್ಚಿಟ್ಟಿದ್ದಾರೆ.
ಉದಯಪುರದಲ್ಲಿ ಅದ್ಧೂರಿಯಾಗಿ ಜರುಗಿದ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಮಹೋತ್ಸವದ ನಂತರ, ಈಗ ಅವರ ಮದುವೆಯ ಉಡುಪುಗಳ ವಿನ್ಯಾಸದ ಹಿಂದಿರುವ ರಹಸ್ಯವನ್ನು ಖ್ಯಾತ ಡಿಸೈನರ್ ಅನಾಮಿಕಾ ಖನ್ನಾ ಬಿಚ್ಚಿಟ್ಟಿದ್ದಾರೆ.
ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, "ವಿಜಯ್ ಮತ್ತು ರಶ್ಮಿಕಾ ಅವರ ಬೇಡಿಕೆ ಬಹಳ ಸರಳ ಮತ್ತು ನೈಜವಾಗಿತ್ತು. ಅವರ ಪ್ರೇಮಕಥೆಯನ್ನು ನಾನು ಪ್ರತ್ಯೇಕವಾಗಿ ಉಡುಪಿನಲ್ಲಿ ಅಳವಡಿಸುವ ಅಗತ್ಯವೇ ಬರಲಿಲ್ಲ, ಅದು ಅಷ್ಟು ಸಹಜವಾಗಿ ಮೂಡಿಬಂದಿದೆ. ಮೊದಲ ಬಾರಿ ಅವರನ್ನು ಭೇಟಿಯಾದಾಗಲೇ ಇದು ಯಾವುದೇ ಪ್ರಚಾರಕ್ಕಾಗಿ ಮಾಡುತ್ತಿರುವ ಮದುವೆಯಲ್ಲ, ಬದಲಾಗಿ ಇಬ್ಬರ ನಡುವೆ ಇರುವ ಅಪ್ಪಟ ಪ್ರೀತಿ ಎಂದು ನನಗೆ ಅರ್ಥವಾಯಿತು," ಎಂದು ಹೇಳಿದ್ದಾರೆ.
ವಿನ್ಯಾಸದ ಪ್ರಕ್ರಿಯೆಯ ಬಗ್ಗೆ ವಿವರಿಸಿದ ಅವರು, "ಆರಂಭದಲ್ಲಿ ಅವರೇ ನಮಗೆ ಕೆಲವು ಐಡಿಯಾಗಳನ್ನು ನೀಡಿದ್ದರು. ಅವರ ಆಲೋಚನೆಗೆ ನಮ್ಮ ಸಂಶೋಧನೆ ಮತ್ತು ಇತಿಹಾಸದ ಸ್ಪರ್ಶ ನೀಡಿ ಈ ಉಡುಪುಗಳನ್ನು ಸಿದ್ಧಪಡಿಸಿದ್ದೇವೆ. ಬಣ್ಣದಿಂದ ಹಿಡಿದು ಪ್ರತಿಯೊಂದು ಎಲಿಮೆಂಟ್ ಬಳಸುವವರೆಗೆ ಅವರು ಹೊಸ ಪ್ರಯೋಗಗಳಿಗೆ ಮುಕ್ತವಾಗಿದ್ದರು. ಕೊನೆಯದಾಗಿ ಹೊರಬಂದ ವಿನ್ಯಾಸವು ಪ್ರೀತಿಯ ಸಂಕೇತದಂತಿತ್ತು," ಎಂದು ಅನಾಮಿಕಾ ತಿಳಿಸಿದ್ದಾರೆ.
ಮದುವೆಯ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರು ಕೆಂಪು ಮತ್ತು ಬಂಗಾರದ ಬಣ್ಣದ ಕಸೂತಿ ಕೆಲಸವಿರುವ 'ರಸ್ಟ್' ಬಣ್ಣದ ಸೀರೆಯಲ್ಲಿ ಮಿಂಚಿದರೆ, ವಿಜಯ್ ದೇವರಕೊಂಡ ಬಿಳಿ ಬಣ್ಣದ ಧೋತಿ ಮತ್ತು ಕೆಂಪು ಬಣ್ಣದ ಶಾಲಿನಲ್ಲಿ ರಾಜಕುಮಾರನಂತೆ ಕಂಗೊಳಿಸಿದರು.
ದಂಪತಿಗಳು ಸಾಂಪ್ರದಾಯಿಕ ಚಿನ್ನದ ಆಭರಣಗಳನ್ನು ಧರಿಸಿದ್ದರು. ರಶ್ಮಿಕಾ ಅವರು ಮಿನಿಮಲ್ ಮೇಕಪ್ ಹಾಗೂ ನ್ಯಾಚುರಲ್ ಹೇರ್ ಸ್ಟೈಲ್ ಜೊತೆಗೆ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್
ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ಗುರುವಾರ ನಡೆದ ಈ ವಿವಾಹವು ತೆಲುಗು ಮತ್ತು ಕೊಡವ ಸಂಪ್ರದಾಯಗಳ ಸುಂದರ ಮಿಶ್ರಣವಾಗಿತ್ತು. ಮದುವೆಯ ನಂತರ ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು "ನನ್ನ ಪತಿ" ಎಂದು ಪರಿಚಯಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದರು. ಅತ್ತ ವಿಜಯ್ ಕೂಡ "ನನ್ನ ಆತ್ಮೀಯ ಗೆಳತಿಯನ್ನು ಈಗ ಹೆಂಡತಿಯನ್ನಾಗಿ ಮಾಡಿಕೊಂಡೆ," ಎಂದು ಪೋಸ್ಟ್ ಹಂಚಿಕೊಂಡಿದ್ದರು.

