Trisha Krishnan| ಮನೆಯ ಮೂಲೆ ಮೂಲೆಯಲ್ಲಿ ಬಾಂಬ್‌ ಇಟ್ಟಿದ್ದೇವೆ... ನಟಿ ತ್ರಿಶಾಗೆ ಬೆದರಿಕೆ
x

ನಟಿ ತ್ರಿಶಾ ಅವರ ಚೆನ್ನೈ ನಿವಾಸಕ್ಕೆ ಹುಸಿ ಬಾಂಬ್ ಬೆದರಿಕೆ

Trisha Krishnan| ಮನೆಯ ಮೂಲೆ ಮೂಲೆಯಲ್ಲಿ ಬಾಂಬ್‌ ಇಟ್ಟಿದ್ದೇವೆ... ನಟಿ ತ್ರಿಶಾಗೆ ಬೆದರಿಕೆ

ನಟಿ ತ್ರಿಶಾ ಅವರ ಚೆನ್ನೈ ನಿವಾಸಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.


Click the Play button to hear this message in audio format

ನಟಿ ತ್ರಿಶಾ ಕೃಷ್ಣನ್ ಅವರ ಚೆನ್ನೈನ ತೇನಾಂಪೇಟೆಯಲ್ಲಿರುವ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದಿದೆ. ನಗರದ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದ ಇಮೇಲ್ ಒಂದರಲ್ಲಿ ತ್ರಿಶಾ ಅವರ ಮನೆಯಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂಬ ಸಂದೇಶವಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ತೇನಾಂಪೇಟೆ ಪೊಲೀಸರು, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ ಹಾಗೂ ಸ್ನಿಫರ್ ಡಾಗ್ ತಂಡದೊಂದಿಗೆ ನಟಿಯ ಮನೆಗೆ ಧಾವಿಸಿ ಗಂಟೆಗಳ ಕಾಲ ತೀವ್ರ ಶೋಧ ನಡೆಸಿದರು. ಅಂತಿಮವಾಗಿ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಗದ ಕಾರಣ ಇದು ಹುಸಿ ಬೆದರಿಕೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚೆನ್ನೈ ಪೊಲೀಸರ ಸೈಬರ್ ಕ್ರೈಂ ವಿಭಾಗವು ತನಿಖೆಯನ್ನು ಆರಂಭಿಸಿದೆ. ಕಳೆದ ಅಕ್ಟೋಬರ್ 2025 ರಲ್ಲೂ ನಟಿಗೆ ಇಂತಹದ್ದೇ ಬೆದರಿಕೆ ಬಂದಿತ್ತು, ಹಾಗೂ ಕಳೆದ ಕೆಲವು ತಿಂಗಳಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸೇರಿದಂತೆ ಹಲವು ಗಣ್ಯರ ಮನೆಗೂ ಇದೇ ರೀತಿಯ ಸಂದೇಶಗಳು ಬಂದಿತ್ತು. ಸದ್ಯ ಇಮೇಲ್ ಕಳುಹಿಸಿದವರ ಐಪಿ ವಿಳಾಸವನ್ನು ಪತ್ತೆಹಚ್ಚಲಾಗುತ್ತಿದ್ದು, ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮತ್ತೊಂದೆಡೆ ತ್ರಿಶಾ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದು, ಮುಂಬರುವ ದಿನಗಳಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ನಟಿಸಿರುವ ಫ್ಯಾಂಟಸಿ ಚಿತ್ರ 'ವಿಶ್ವಂಭರ' ಜುಲೈ 10 ರಂದು ತೆರೆಗೆ ಬರಲಿದೆ. ಇದಲ್ಲದೆ ಸೂರ್ಯ ಅವರೊಂದಿಗೆ ನಟಿಸಿರುವ 'ಕರುಪ್ಪು' ಚಿತ್ರವು ಮೇ 14ರಂದು ಬಿಡುಗಡೆಯಾಗಲಿದ್ದು, ಇದರ ಮೂರನೇ ಹಾಡು ಇಂದು (ಏಪ್ರಿಲ್ 14) ತಮಿಳು ಹೊಸ ವರ್ಷದ ಪ್ರಯುಕ್ತ ಬಿಡುಗಡೆಯಾಗುತ್ತಿದೆ.

ತಮಿಳುನಾಡು ರಾಜಕೀಯ ವಲಯದಲ್ಲೂ ತ್ರಿಶಾ ಹೆಸರು ಅನಗತ್ಯವಾಗಿ ಎಳೆದು ತರಲಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕರೊಬ್ಬರು ನಟ ಮತ್ತು ರಾಜಕಾರಣಿ ವಿಜಯ್ ಅವರನ್ನು ಟೀಕಿಸುವ ಬರದಲ್ಲಿ ತ್ರಿಶಾ ಅವರ ಹೆಸರನ್ನು ಪ್ರಸ್ತಾಪಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ತ್ರಿಶಾ, "ಗೌರವವಿಲ್ಲದ ಮಾತುಗಳನ್ನು ಎಂದಿಗೂ ಸಹಿಸುವುದಿಲ್ಲ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ ಕಿಡಿಕಾರಿದ್ದರು.

ಇದರ ಬೆನ್ನಲ್ಲೇ, ಖ್ಯಾತ ನಟ ಮತ್ತು ನಿರ್ದೇಶಕ ಆರ್. ಪಾರ್ಥಿಬನ್ ಅವರು ಪ್ರಶಸ್ತಿ ಸಮಾರಂಭವೊಂದರಲ್ಲಿ ತ್ರಿಶಾ ಕುರಿತು ನೀಡಿದ `ಕುಂದವೈ ಮನೆಯಲ್ಲೇ ಇರಬೇಕು' ಎಂಬ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿತ್ತು. ಸ್ತ್ರೀದ್ವೇಷಿ ಧೋರಣೆಯ ಈ ಹೇಳಿಕೆಗೆ ತ್ರಿಶಾ ಅತ್ಯಂತ ಘನತೆಯಿಂದಲೇ ಉತ್ತರ ನೀಡಿದ್ದರು. ಅಲ್ಲದೆ, ನಟ ವಿಜಯ್ ಅವರೊಂದಿಗೆ ತ್ರಿಶಾ ಹೆಸರು ಕೇಳಿಬರುತ್ತಿರುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ.

Read More
Next Story