
ಸುಪ್ರೀಂ ಕೋರ್ಟ್‌ನ ಈ ನಿರ್ಧಾರದಿಂದಾಗಿ 'ಜನ ನಾಯಕನ್' ಚಿತ್ರದ ಬಿಡುಗಡೆ ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ.
'ಜನ ನಾಯಕನ್'ಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನೆಡೆ; ಮೇಲ್ಮನವಿ ಅರ್ಜಿ ತಿರಸ್ಕೃತ
ಬಿಡುಗಡೆಯ ದಿನಾಂಕ ಘೋಷಿಸಿದ ನಂತರ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಒತ್ತಡ ಹೇರುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನಟ, ರಾಜಕಾರಣಿ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ 'ಜನ ನಾಯಕನ್' ಸಿನಿಮಾದ ಸೆನ್ಸಾರ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಚಿತ್ರತಂಡಕ್ಕೆ ಹಿನ್ನಡೆಯಾಗಿದೆ. ಚಿತ್ರದ ಬಿಡುಗಡೆಗಾಗಿ ಸೆನ್ಸಾರ್ ಮಂಡಳಿಯಿಂದ ತಕ್ಷಣವೇ ಪ್ರಮಾಣಪತ್ರ ನೀಡುವಂತೆ ಕೋರಿ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಈ ಪ್ರಕರಣದ ಬಗ್ಗೆ ಈಗಾಗಲೇ ಮದ್ರಾಸ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ, ಈ ಹಂತದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಜೂನ್ 20 ರಂದು ನಡೆಸುವಂತೆ ಮದ್ರಾಸ್ ಹೈಕೋರ್ಟ್‌ಗೆ ಸೂಚಿಸಿದೆ.
ವಿವಾದದ ಹಿನ್ನೆಲೆ
'ಜನ ನಾಯಕನ್' ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡುವಂತೆ ಈ ಹಿಂದೆ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠವು ಆದೇಶ ನೀಡಿತ್ತು. ಈ ಆದೇಶದ ಬೆನ್ನಲ್ಲೇ ಸೆನ್ಸಾರ್ ಮಂಡಳಿಯು ವಿಭಾಗೀಯ ಪೀಠದ ಮೊರೆ ಹೋಗಿ ತಡೆಯಾಜ್ಞೆ ತಂದಿತ್ತು. ಇದರಿಂದಾಗಿ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಬೇಕಿದ್ದ ಚಿತ್ರದ ಪ್ರದರ್ಶನ ನಿಂತುಹೋಗಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಹೈಕೋರ್ಟ್ ವಿಭಾಗೀಯ ಪೀಠದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯವು ಈಗ ಚೆಂಡನ್ನು ಮತ್ತೆ ಹೈಕೋರ್ಟ್ ಅಂಗಳಕ್ಕೆ ಎಸೆದಿದ್ದು, ಜೂನ್ 20 ರೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸೂಚನೆ ನೀಡಿದೆ.
ಚಿತ್ರತಂಡವು ಸುಮಾರು 500 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ರಾಜಕೀಯ ಪ್ರವೇಶಕ್ಕೂ ಮುನ್ನ ವಿಜಯ್ ಅವರ ಕೊನೆಯ ಸಿನಿಮಾವಾಗಿರುವುದರಿಂದ ಅಭಿಮಾನಿಗಳಲ್ಲಿ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇತ್ತು. ಆದರೆ ಸೆನ್ಸಾರ್ ಮಂಡಳಿಯ ಅಧ್ಯಕ್ಷರು ಚಿತ್ರವನ್ನು ಪುನರ್ ಪರಿಶೀಲನಾ ಸಮಿತಿಗೆ ಕಳುಹಿಸಿರುವುದು ಕಾನೂನುಬಾಹಿರ ಎಂದು ನಿರ್ಮಾಪಕರು ವಾದಿಸುತ್ತಿದ್ದಾರೆ. ಸದ್ಯದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜೂನ್ 20 ರಂದು ಮದ್ರಾಸ್ ಹೈಕೋರ್ಟ್ ನೀಡುವ ತೀರ್ಪು ಚಿತ್ರದ ಭವಿಷ್ಯವನ್ನು ನಿರ್ಧರಿಸಲಿದೆ.

