ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್; ಬಂಧಿತರಲ್ಲಿ ನಟ ಸುದೀಪ್ ಅಭಿಮಾನಿಗಳು ಇರುವುದು ಬಹಿರಂಗ
x

ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನು ಟಾರ್ಗೆಟ್ ಮಾಡಿ ಬಂಧಿತರು ಕೆಟ್ಟ ರೀತಿಯಲ್ಲಿ ಫೋಟೋ ಹಾಕಿ ಕಾಮೆಂಟ್ ಮಾಡಿದ್ದರು ಎಂಬುದು ತಿಳಿದು ಬಂದಿದೆ. 

ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್; ಬಂಧಿತರಲ್ಲಿ ನಟ ಸುದೀಪ್ ಅಭಿಮಾನಿಗಳು ಇರುವುದು ಬಹಿರಂಗ

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್‌ಗಳ ಮೂಲಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಈಗ 473 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.


Click the Play button to hear this message in audio format

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್‌ಗಳ ಮೂಲಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಈಗ 473 ಪುಟಗಳ ದೋಷಾರೋಪ ಪಟ್ಟಿಯನ್ನು 45ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ಚಾರ್ಜ್‌ಶೀಟ್‌ನಲ್ಲಿ ಆರು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಬಂಧಿತರಲ್ಲಿ ಕೆಲವರು ನಟ ಸುದೀಪ್ ಅವರ ಅಭಿಮಾನಿಗಳು ಎಂಬ ವಿಷಯ ಬೆಳಕಿಗೆ ಬಂದಿದೆ. ಕೇವಲ ವಿಜಯಲಕ್ಷ್ಮೀ ಅವರನ್ನು ಗುರಿಯಾಗಿಸಿ ಅವಹೇಳನಕಾರಿ ಕಾಮೆಂಟ್ ಮತ್ತು ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುವ ಉದ್ದೇಶಕ್ಕಾಗಿಯೇ ಇವರು ನಕಲಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ತೆರೆದಿದ್ದರು ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.

ಪೋಸ್ಟ್ ಮಾಡುತ್ತಿರುವುದು ಅಶ್ಲೀಲ ಮತ್ತು ಕಾನೂನುಬಾಹಿರ ಎಂಬ ಅರಿವಿದ್ದೇ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಎಫ್‌ಎಸ್‌ಎಲ್‌ಗೆ ರವಾನಿಸಿದ್ದು, ಅಲ್ಲಿಂದ ಬರುವ ಡೇಟಾ ರಿಟ್ರೀವ್ ವರದಿಗಾಗಿ ಕಾಯುತ್ತಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 12 ಐಡಿಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಗದ ಕಾರಣ, ಸೈಬರ್ ಪೊಲೀಸರು ಸಂಬಂಧಪಟ್ಟ ಕಂಪನಿಗಳಿಗೆ ಪತ್ರ ಬರೆದಿದ್ದಾರೆ. ಸದ್ಯಕ್ಕೆ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ತನಿಖೆ ಪೂರ್ಣಗೊಂಡ ನಂತರ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ಪೊಲೀಸರು ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಆರೋಪಿಗಳು ಕಳೆದ 66 ದಿನಗಳಿಂದ ಜೈಲಿನಲ್ಲಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಅವರು ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದೆ.

ಘಟನೆಯ ಹಿನ್ನೆಲೆ

ದಾವಣೆಗೆರೆಯಲ್ಲಿ ನಡೆದ 'ಡೆವಿಲ್' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ವಿಜಯಲಕ್ಷ್ಮಿ ಅವರು ಪಾಲ್ಗೊಂಡಿದ್ದರು. ಆ ವೇದಿಕೆಯಲ್ಲಿ ತಮ್ಮ ಪತಿಯ ನಟನೆ ಮತ್ತು ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅವರು, "ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ" ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದರು. ಆದರೆ ಈ ಭಾಷಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ 'ಫ್ಯಾನ್ಸ್ ವಾರ್' ಅತಿರೇಕಕ್ಕೆ ಹೋಗಿದ್ದು, ವಿಜಯಲಕ್ಷ್ಮಿ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಲಾಗಿತ್ತು. ಇದು ಅವರ ಕಾನೂನು ಹೋರಾಟಕ್ಕೆ ಕಾರಣವಾಯಿತು.

Read More
Next Story