Varanasi| ಶ್ರೀರಾಮ ನವಮಿಯಂದೇ ವಾರಣಾಸಿ ರಿಲೀಸ್ ಡೇಟ್ ಘೋಷಣೆ
x

Varanasi| ಶ್ರೀರಾಮ ನವಮಿಯಂದೇ 'ವಾರಣಾಸಿ' ರಿಲೀಸ್ ಡೇಟ್ ಘೋಷಣೆ

ಭಾರತೀಯ ಚಿತ್ರರಂಗದ ಅತಿ ದೊಡ್ಡ ಮ್ಯಾಜಿಕ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರಕ್ಕೆ 'ವಾರಣಾಸಿ' ಎಂದು ಅಧಿಕೃತವಾಗಿ ಹೆಸರಿಡಲಾಗಿದೆ.


Click the Play button to hear this message in audio format

ರಾಜಮೌಳಿ-ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ 'ವಾರಣಾಸಿ' ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟಗೊಂಡಿದೆ. ಶುಕ್ರವಾರ ಶ್ರೀರಾಮ ನವಮಿಯ ಶುಭ ಸಂದರ್ಭದಲ್ಲಿ ಚಿತ್ರತಂಡವು ವಿಶೇಷ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಮುಂದಿನ ವರ್ಷದ 2027ರ ಶ್ರೀರಾಮ ನವಮಿಯಂದು ಈ ಸಿನಿಮಾ ಬೆಳ್ಳಿತೆರೆಗೆ ಬರಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಹನುಮಂತನು ದ್ರೋಣಗಿರಿ ಪರ್ವತದಿಂದ ಸಂಜೀವಿನಿ ಮೂಲಿಕೆಯನ್ನು ಹೊತ್ತೊಯ್ಯುತ್ತಿರುವ ರಮಣೀಯ ದೃಶ್ಯವಿದ್ದು, ಪ್ರೇಕ್ಷಕರಿಗೆ ಶ್ರೀರಾಮ ನವಮಿಯ ಶುಭಾಶಯಗಳನ್ನು ಕೋರಲಾಗಿದೆ.

ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವದಂತಿಗಳಿಗೆ ಪುಷ್ಟಿ ನೀಡುವಂತೆ, ಕಥೆಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಪ್ರೇಕ್ಷಕರಿಗೆ ಸಂಪೂರ್ಣ ಅನುಭವ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಜಮೌಳಿ ಅವರ ಈ ಮಹತ್ವಾಕಾಂಕ್ಷೆಯ ಕಥೆಯನ್ನು ಕೇವಲ ಮೂರು ಗಂಟೆಗಳಲ್ಲಿ ಕಟ್ಟಿ ಕೊಡಲು ಸಾಧ್ಯವಿಲ್ಲದ ಕಾರಣ 'ಧುರಂಧರ್' ಮಾದರಿಯಲ್ಲೇ ಎರಡು ಭಾಗಗಳಲ್ಲಿ ಸಿನಿಮಾ ಮೂಡಿಬರಲಿದೆ.

ಈ ಚಿತ್ರದ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿ. ವಿಜಯೇಂದ್ರ ಪ್ರಸಾದ್ ಕಥೆ ಬರೆದಿರುವ ಈ ಎಪಿಕ್ ಫ್ಯಾಂಟಸಿ ವಿಜ್ಞಾನ ಆಧಾರಿತ ಸಾಹಸಮಯ ಚಿತ್ರವನ್ನು ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ ಬಿಸಿನೆಸ್ ಸಂಸ್ಥೆಗಳು ಅದ್ಧೂರಿಯಾಗಿ ನಿರ್ಮಿಸುತ್ತಿವೆ. ಕಳೆದ ನವೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಈಗಾಗಲೇ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಲಾಗಿದೆ.

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಬೃಹತ್ ಸೆಟ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಟೀಸರ್ ಬಿಡುಗಡೆಗೂ ಮುನ್ನವೇ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಚಿತ್ರತಂಡ ಹೈದರಾಬಾದ್‌ನ ಸ್ಟುಡಿಯೋಗೆ ಆಹ್ವಾನ ನೀಡಿತ್ತು. ವಾರಣಾಸಿಯ ಪುರಾತನ ಗಲ್ಲಿಗಳು, ಪ್ರಸಿದ್ಧ ಘಾಟ್‌ಗಳು ಮತ್ತು ದೇವಸ್ಥಾನಗಳನ್ನು ಒಳಗೊಂಡ ಈ ಬೃಹತ್ ಸೆಟ್ ಅನ್ನು ನೋಡಿ ವಿದೇಶಿ ಮಾಧ್ಯಮಗಳೇ ದಂಗಾಗಿವೆ. ನೈಜ ಕಾಶಿ ಪಟ್ಟಣಕ್ಕೂ ಮತ್ತು ಸ್ಟುಡಿಯೋದಲ್ಲಿ ನಿರ್ಮಿಸಲಾದ ಈ ಸೆಟ್‌ಗೂ ವ್ಯತ್ಯಾಸವೇ ತಿಳಿಯದಷ್ಟು ಸೂಕ್ಷ್ಮವಾಗಿ ಈ ತಾಣವನ್ನು ಮರುಸೃಷ್ಟಿಸಲಾಗಿದೆ.

ಇತ್ತೀಚೆಗಷ್ಟೇ ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ಮುಗಿಸಿರುವ ತಂಡ, ಮುಂದಿನ ಹಂತಕ್ಕಾಗಿ ಅಂಟಾರ್ಕ್ಟಿಕಾಕ್ಕೆ ಪ್ರಯಾಣ ಬೆಳೆಸಲಿದೆ. ಅಲ್ಲಿನ 'ರಾಸ್ ಐಸ್ ಶೆಲ್ಫ್' ಪ್ರದೇಶದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಪಡೆದ ಬೆರಳೆಣಿಕೆಯ ಚಿತ್ರಗಳಲ್ಲಿ 'ವಾರಣಾಸಿ' ಕೂಡ ಒಂದಾಗಲಿದೆ.

Read More
Next Story