ಟ್ರೋಲ್‌ಗಳಿಗೆ ಹೆದರಿ ಚಿತ್ರರಂಗ ತೊರೆಯಲು ನಿರ್ಧರಿಸಿದ್ದರೇ ನಟಿ ಶ್ರೀಲೀಲಾ?
x

ಟ್ರೋಲ್‌ಗಳಿಂದಾಗಿ ಶ್ರೀಲೀಲಾ ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದ್ದರೇ

ಟ್ರೋಲ್‌ಗಳಿಗೆ ಹೆದರಿ ಚಿತ್ರರಂಗ ತೊರೆಯಲು ನಿರ್ಧರಿಸಿದ್ದರೇ ನಟಿ ಶ್ರೀಲೀಲಾ?

ಸಂದರ್ಶನದ ವೇಳೆ ಟ್ರೋಲ್‌ಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕನ್ನಡಿಗರಿಗೂ ಅಚ್ಚುಮೆಚ್ಚಿನ ನಟಿ ಶ್ರೀಲೀಲಾ, ಆರಂಭದ ದಿನಗಳಲ್ಲಿ ತಮಗೆ ಎದುರಾದ ಸಂಕಷ್ಟಗಳನ್ನು ನೆನೆದರು.


Click the Play button to hear this message in audio format

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈ ವಾರ ತೆರೆಗೆ ಬಂದಿದೆ. ಚಿತ್ರದಲ್ಲಿ ಶ್ರೀಲೀಲಾ, ರಾಶಿ ಖನ್ನಾ ಮತ್ತು ಆರ್.ಪಾರ್ತಿಬನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರುವ ನಟಿಯರಾದ ಶ್ರೀಲೀಲಾ ಮತ್ತು ರಾಶಿ ಖನ್ನಾ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಾಮಾಜಿಕ ಜಾಲತಾಣದ ಕರಾಳ ಮುಖದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಖ್ಯಾತ ನಿರೂಪಕಿ ಸುಮಾ ಅವರೊಂದಿಗೆ ನಡೆಸಿದ ಈ ಸಂವಾದದಲ್ಲಿ, ಟ್ರೋಲ್‌ಗಳು ತಮ್ಮ ವೈಯಕ್ತಿಕ ಜೀವನದ ಮೇಲೆ ಎಂತಹ ಪರಿಣಾಮ ಬೀರುತ್ತವೆ ಎಂಬುದನ್ನು ಇಬ್ಬರೂ ನಟಿಯರು ಹಂಚಿಕೊಂಡಿದ್ದಾರೆ.

ಸಂದರ್ಶನದ ವೇಳೆ ಟ್ರೋಲ್‌ಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕನ್ನಡಿಗರಿಗೂ ಅಚ್ಚುಮೆಚ್ಚಿನ ನಟಿ ಶ್ರೀಲೀಲಾ, ಆರಂಭದ ದಿನಗಳಲ್ಲಿ ತಮಗೆ ಎದುರಾದ ಸಂಕಷ್ಟಗಳನ್ನು ನೆನೆದರು. "ಸಿನಿಮಾ ರಂಗಕ್ಕೆ ಬಂದ ಹೊಸತರಲ್ಲಿ ಟ್ರೋಲ್‌ಗಳನ್ನು ನೋಡಿ ನಾನು ಅತೀವವಾಗಿ ನೊಂದುಕೊಳ್ಳುತ್ತಿದ್ದೆ. ಹಲವು ಬಾರಿ ಕಣ್ಣೀರಿಟ್ಟಿದ್ದೇನೆ. 'ನನಗೆ ಈ ಚಿತ್ರರಂಗವೇ ಬೇಡ, ನಾನು ಮತ್ತೆ ಶಾಲೆ ಅಥವಾ ಕಾಲೇಜಿಗೆ ಮರಳುತ್ತೇನೆ' ಎಂದು ನನ್ನ ತಾಯಿಯ ಬಳಿ ಅಳುತ್ತಾ ಹೇಳಿದ್ದೆ. ನಾನು ಅಷ್ಟೊಂದು ಸೂಕ್ಷ್ಮ ಮನಸ್ಸಿನವಳಾಗಿದ್ದೆ. ಆದರೆ ಈಗ ಅದೆಲ್ಲವನ್ನೂ ಎದುರಿಸಿ ಗಟ್ಟಿಯಾಗಿದ್ದೇನೆ," ಎಂದು ತಿಳಿಸಿದರು.

ಇದೇ ವಿಷಯವಾಗಿ ಮಾತನಾಡಿದ ರಾಶಿ ಖನ್ನಾ, "ಇತ್ತೀಚಿನ ದಿನಗಳಲ್ಲಿ ಟ್ರೋಲಿಂಗ್ ಎಂಬುದು ಮಿತಿ ಮೀರುತ್ತಿದೆ. ಸತ್ಯ ಏನೆಂದು ತಿಳಿಯದೆಯೇ ಜನರು ತೀರ್ಪು ನೀಡುತ್ತಿರುವುದು ಬೇಸರದ ಸಂಗತಿ. ಕೇವಲ 'ಕ್ಲಿಕ್‌ಬೈಟ್' ಸುದ್ದಿಗಳಿಗಾಗಿ ಏನೇನೋ ಬರೆಯಲಾಗುತ್ತಿದೆ," ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಲೀಲಾ, ಜನರು ಈಗ ಬುದ್ಧಿವಂತರಾಗಿದ್ದಾರೆ ಮತ್ತು ನಕಾರಾತ್ಮಕ ವಿಷಯಗಳನ್ನು ನೋಡಿದಾಗ ತರ್ಕಬದ್ಧವಾಗಿ ಯೋಚಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.

ವೃತ್ತಿಜೀವನದ ವಿಚಾರಕ್ಕೆ ಬಂದರೆ, ಶ್ರೀಲೀಲಾ ಅವರು ಇತ್ತೀಚೆಗಷ್ಟೇ ತಮ್ಮ ಎಂಬಿಬಿಎಸ್ ಪದವಿಯನ್ನು ಪೂರೈಸಿ ವೈದ್ಯೆಯಾಗಿದ್ದಾರೆ. ಚಿತ್ರೀಕರಣದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಅವರು ಶಿಕ್ಷಣ ಮುಗಿಸಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಅವರು, ಕಾರ್ತಿಕ್ ಆರ್ಯನ್ ಜೊತೆಗಿನ ಅನುರಾಗ್ ಬಸು ನಿರ್ದೇಶನದ ಚಿತ್ರದ ಮೂಲಕ ಬಾಲಿವುಡ್‌ಗೂ ಕಾಲಿಡುತ್ತಿದ್ದಾರೆ. ಮತ್ತೊಂದೆಡೆ ರಾಶಿ ಖನ್ನಾ ಅವರು 'ಫರ್ಜಿ' ಸೀಸನ್ 2 ಮತ್ತು ಹಲವು ದೊಡ್ಡ ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Read More
Next Story