
ಸೋನು ಸೂದ್
ದುಬೈನಲ್ಲಿ ಸಿಲುಕಿರುವ ಪ್ರವಾಸಿಗರಿಗೆ ನೆರವು ನೀಡಲು ಮುಂದಾದ ಸೋನು ಸೂದ್
ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ದುಬೈನಲ್ಲಿ ಸಿಲುಕಿರುವ ಪ್ರವಾಸಿಗರಿಗೆ ನಟ ಸೋನು ಸೂದ್ ಉಚಿತ ವಸತಿ ಘೋಷಿಸಿದ್ದಾರೆ. ಯಾವುದೇ ದೇಶದವರಾಗಿದ್ದರೂ ಸಹಾಯಕ್ಕಾಗಿ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕಿಸಲು ಅವರು ಕೋರಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ದುಬೈನಲ್ಲಿ ನೂರಾರು ಪ್ರಯಾಣಿಕರು ವಿಮಾನಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಾನವೀಯತೆ ಮೆರೆದಿರುವ ಬಾಲಿವುಡ್ ನಟ ಸೋನು ಸೂದ್, ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ಉಚಿತ ವಸತಿ ನೀಡುವುದಾಗಿ ಘೋಷಿಸಿದ್ದಾರೆ.
ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಸೋನು ಸೂದ್, ಈ ಬಿಕ್ಕಟ್ಟಿನ ಸಮಯದಲ್ಲಿ ದುಬೈನಲ್ಲಿ ಯಾರೇ ಸಿಲುಕಿದ್ದರೂ, ಅವರು ಯಾವುದೇ ದೇಶದವರಾಗಿದ್ದರೂ ಅವರಿಗೆ ನಾವು ನೆರವು ನೀಡುತ್ತೇವೆ ಎಂದು ತಿಳಿಸಿದ್ದಾರೆ. "ಯುದ್ಧದ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ಸಿಲುಕಿ ಮನೆಗೆ ಮರಳಲು ಸಾಧ್ಯವಾಗದವರಿಗೆ ಉಳಿದುಕೊಳ್ಳಲು ನಾವು ಸುರಕ್ಷಿತ ವ್ಯವಸ್ಥೆ ಮಾಡುತ್ತೇವೆ. ಯಾವುದೇ ಷರತ್ತುಗಳಿಲ್ಲದೆ, ಕೇವಲ ಮಾನವೀಯತೆಯ ಆಧಾರದ ಮೇಲೆ ನಾವು ಈ ಸೇವೆ ನೀಡುತ್ತಿದ್ದೇವೆ," ಎಂದು ಅವರು ಹೇಳಿದ್ದಾರೆ.
ಸಂಕಷ್ಟದಲ್ಲಿರುವವರು ಸೋನು ಸೂದ್ ಅವರ ಇನ್‌ಸ್ಟಾಗ್ರಾಮ್ ಅಥವಾ 'ದುಗಾಸ್ಟಾ ಪ್ರಾಪರ್ಟೀಸ್' ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು. ಈ ಹಿಂದೆ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರಿಗೆ ನೆರವಾಗಿದ್ದ ಸೋನು ಸೂದ್ ಅವರ ಈ ಹೊಸ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಅವರನ್ನು "ಬಾಲಿವುಡ್‌ನ ನಿಜವಾದ ಹೀರೋ" ಎಂದು ಬಣ್ಣಿಸುತ್ತಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ದುಬೈ ಸೇರಿದಂತೆ ಮಧ್ಯಪ್ರಾಚ್ಯದ ಪ್ರಮುಖ ನಗರಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಸೋನಲ್ ಚೌಹಾಣ್ ಮತ್ತು ಇಶಾ ಗುಪ್ತಾ ಸೇರಿದಂತೆ ಹಲವು ಭಾರತೀಯ ನಟಿಯರು ಕೂಡ ದುಬೈನಲ್ಲಿ ಸಿಲುಕಿಕೊಂಡಿದ್ದರು. ಸದ್ಯ ಪರಿಸ್ಥಿತಿ ಸುಧಾರಿಸುತ್ತಿದ್ದು, ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಸಿನಿಮಾ ಪರದೆಯ ಮೇಲೆ ಖಳನಾಯಕನಾಗಿ ಅಬ್ಬರಿಸುವ ಸೋನು ಸೂದ್ ನಿಜ ಜೀವನದಲ್ಲಿ ಕೋಟ್ಯಂತರ ಜನರ ಪಾಲಿಗೆ ಆಪದ್ಬಾಂಧವನಾಗಿ ಕೆಲಸ ಮಾಡಿದ್ದಾರೆ. 2020ರ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ. ದೇಶದ ವಿವಿಧ ಭಾಗಗಳಲ್ಲಿ ಕೆಲಸ ಹುಡುಕಿ ಹೋಗಿದ್ದ ಸಾವಿರಾರು ವಲಸೆ ಕಾರ್ಮಿಕರು ಸಾರಿಗೆ ವ್ಯವಸ್ಥೆಯಿಲ್ಲದೆ ನೂರಾರು ಕಿಲೋಮೀಟರ್ ನಡೆದುಕೊಂಡು ತಮ್ಮ ಊರುಗಳಿಗೆ ತೆರಳುತ್ತಿದ್ದರು. ಈ ದಯನೀಯ ಸ್ಥಿತಿಯನ್ನು ಕಂಡ ಸೋನು ಸೂದ್ ಅವರು 'ಘರ್ ಭೇಜೋ' ಎಂಬ ಅಭಿಯಾನದ ಮೂಲಕ ಸ್ವಂತ ಖರ್ಚಿನಲ್ಲಿ ನೂರಾರು ಬಸ್‌ಗಳು, ರೈಲುಗಳು ಮತ್ತು ವಿಮಾನಗಳ ವ್ಯವಸ್ಥೆ ಮಾಡಿ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸಿದರು. ಅಷ್ಟೇ ಅಲ್ಲದೆ, ಲಾಕ್‌ಡೌನ್ ಅವಧಿಯಲ್ಲಿ ಲಕ್ಷಾಂತರ ಜನರಿಗೆ ಉಚಿತ ಊಟ ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹಸಿವು ನೀಗಿಸಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿಯೂ ಸೋನು ಸೂದ್ ಅವರ ಕೊಡುಗೆ ಅಪಾರವಾಗಿದೆ. ಅವರು ಸ್ಥಾಪಿಸಿದ 'ಸೂದ್ ಚಾರಿಟಿ ಫೌಂಡೇಶನ್' ಮೂಲಕ ದೇಶಾದ್ಯಂತ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ, ಕಿಡ್ನಿ ಕಸಿ ಮತ್ತು ಮೊಣಕಾಲು ಬದಲಿ ಚಿಕಿತ್ಸೆಗಳಿಗೆ ನೆರವು ನೀಡುತ್ತಿದ್ದಾರೆ. 'ಇಲಾಜ್ ಇಂಡಿಯಾ' ಎಂಬ ವೇದಿಕೆಯಡಿ ಸಾವಿರಾರು ಮಕ್ಕಳಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಿದ್ದಾರೆ. ಶಿಕ್ಷಣದ ವಿಚಾರಕ್ಕೆ ಬಂದರೆ, ಐಎಎಸ್ ಆಕಾಂಕ್ಷಿಗಳಿಗಾಗಿ 'ಸಂಭವಂ' ಎಂಬ ಉಚಿತ ತರಬೇತಿ ಯೋಜನೆ ಮತ್ತು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ಶಿಷ್ಯವೇತನದ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ಉದ್ಯೋಗ ಕಳೆದುಕೊಂಡವರಿಗಾಗಿ 'ಪ್ರವಾಸಿ ರೋಜ್‌ಗಾರ್' ಎಂಬ ಆಪ್ ಬಿಡುಗಡೆ ಮಾಡಿ ಲಕ್ಷಾಂತರ ಜನರಿಗೆ ಕೆಲಸ ಸಿಗುವಂತೆ ಮಾಡಿದ ಸೋನು ಸೂದ್, ಹಳ್ಳಿಗಳಲ್ಲಿ ಜನರು ಸ್ವಾವಲಂಬಿಗಳಾಗಲು ಹೊಲಿಗೆ ಯಂತ್ರಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ವಿತರಿಸಿದ್ದಾರೆ.

