Asha Bhonsle| ಸಂಗೀತದ ಶಿಖರ ಏರಿದ್ದರೂ ಗಾನ ಕೋಗಿಲೆಗೆ ತಪ್ಪಿರಲಿಲ್ಲ ಸಂಘರ್ಷ
x
ಆಶಾ ಭೋಂಸ್ಲೆ

Asha Bhonsle| ಸಂಗೀತದ ಶಿಖರ ಏರಿದ್ದರೂ ಗಾನ ಕೋಗಿಲೆಗೆ ತಪ್ಪಿರಲಿಲ್ಲ ಸಂಘರ್ಷ

ಗಾಯಕಿ ಲತಾ ಮಂಗೇಶ್ಕರ್‌ ಅವರ ಕಾರ್ಯದರ್ಶಿಯಾಗಿದ್ದ 31 ವರ್ಷದ ಗಣಪತ್‌ರಾವ್‌ ಭೋಂಸ್ಲೆ ಅವರನ್ನು 16 ವರ್ಷದ ಆಶಾ ಮಂಗೇಶ್ಕರ್‌ ಅವರು ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಈ ದಾಂಪತ್ಯವು ಹೆಚ್ಚು ವರ್ಷ ಉಳಿಯಲಿಲ್ಲ.


Click the Play button to hear this message in audio format

ಭಾರತೀಯ ಚಿತ್ರರಂಗದಲ್ಲಿ ಹಿಂದಿ ಸೇರಿ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಗಾನ ಲಹರಿ ಹರಿಸಿದ್ದ ಗಾಯಕಿ ಆಶಾ ಭೋಂಸ್ಲೆ ಅವರ ಜೀವನ, ಹಾಡಿನಷ್ಟೇನೂ ಮಧುರವಾಗಿರಲಿಲ್ಲ. ಇಡೀ ಜೀವನ ನೋವು-ನಲಿವಿನ ಕುಲುಮೆಯಲ್ಲಿ ಬೆಂದರೂ ಸುಶ್ರಾವ್ಯ ಹಾಡಿನ ಮೂಲಕ ಅಭಿಮಾನಿಗಳಿಗೆ ರಸದೌತಣ ಬಡಿಸಿದ್ದವರು ಗಾನಕೋಗಿಲೆ ಲತಾ ಮಂಗೇಶ್ಕರ್‌ ಅವರ ಸೋದರಿ ಆಶಾ ಭೋಂಸ್ಲೆ.

ಮರಾಠಿ ಕುಟುಂಬದಲ್ಲಿ ಜನಿಸಿದ ಆಶಾ ಅವರ ಮೊದಲ ಹೆಸರು ಆಶಾ ಮಂಗೇಶ್ಕರ್‌. ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರ ಸಹೋದರಿ (ತಂಗಿ). ಸಾಂಪ್ರದಾಯಿಕವಾಗಿ ಶಿಸ್ತುಬದ್ಧವಾಗಿ ಬೆಳೆದರೂ ಚಿಕ್ಕಂದಿನಿಂದಲೇ ಬಡತನ ಆವರಿಸಿತ್ತು. ಸಣ್ಣ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಆಶಾ ಅವರು, ಜೀವನ ನಿರ್ವಹಣೆಗಾಗಿ ಗಾಯನ ಆರಂಭಿಸಿದ್ದರು. ಕೊನೆಗೆ ಆ ಕಂಠಸಿರಿಯೇ ಅವರನ್ನು ಉತ್ತುಂಗಕ್ಕೇರಿಸಿತ್ತು. ಲತಾ ಹಾಗೂ ಆಶಾ ಅವರ ಜೋಡಿಗೆ ಸರಿಯಾಟಿಯೇ ಇರಲಿಲ್ಲ.

ತನ್ನ ಸಹೋದರಿ ಲತಾ ಮಂಗೇಶ್ಕರ್‌ ಅವರೊಂದಿಗೆ ಗಾಯಕಿ ಆಶಾ ಭೋಂಸ್ಲೆ

16ನೇ ವಯಸ್ಸಿಗೆ ಮದುವೆ

ಗಾಯಕಿ ಲತಾ ಮಂಗೇಶ್ಕರ್‌ ಅವರ ಆಪ್ತ ಕಾರ್ಯದರ್ಶಿಯಾಗಿದ್ದ 31 ವರ್ಷದ ಗಣಪತ್‌ರಾವ್‌ ಭೋಂಸ್ಲೆ ಅವರನ್ನು 16 ವರ್ಷದ ಆಶಾ ಮಂಗೇಶ್ಕರ್‌ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಈ ದಾಂಪತ್ಯವು ಹೆಚ್ಚು ವರ್ಷ ಉಳಿಯಲಿಲ್ಲ. ಈ ಜೋಡಿ 1960 ರಲ್ಲಿ ಬೇರ್ಪಟ್ಟಿತು. ಆದರೂ ತನ್ನ ಪತಿಯ ನೆನಪಿಗಾಗಿಯೇ ಆಶಾ ಮಂಗೇಶ್ಕರ್‌ ಅವರು ತಮ್ಮ ಹೆಸರಿನ ನಂತರ ಪತಿಯ ಹೆಸರು ಸೇರಿಸಿಕೊಂಡರು. ಆ ಮೂಲಕ ಆಶಾ ಭೋಂಸ್ಲೆ ಎಂದೇ ಜನಪ್ರಿಯರಾದರು. ನಂತರ 20 ವರ್ಷಗಳ ನಂತರ 1980 ರಲ್ಲಿ ತನಗಿಂತ ಆರು ವರ್ಷದ ಕಿರಿಯ ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್‌ ಅವರನ್ನು ಮದುವೆಯಾದರು. ಈ ಜೋಡಿ ಬಾಲಿವುಡ್‌ಗೆ ಅತ್ಯಂತ ಯಶಸ್ವಿ ಗೀತೆಗಳನ್ನು ನೀಡಿತು. 1994 ರಲ್ಲಿ ಆಶಾ ಅವರ ಎರಡನೇ ಪತಿ ಮೃತಪಟ್ಟರು.

ಖ್ಯಾತ ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್‌ ಅವರೊಂದಿಗೆ ಗಾಯಕಿ ಆಶಾ ಬೋಂಸ್ಲೆ

ಕ್ಯಾನ್ಸರ್‌ನಿಂದ ಮೃತಪಟ್ಟ ಮಕ್ಕಳು

ಆಶಾ ಭೋಂಸ್ಲೆ ತಮ್ಮ ಜೀವನದುದ್ದಕ್ಕೂ ತೀವ್ರ ಕಷ್ಟಗಳನ್ನು ಎದುರಿಸಿದರು. 2012ರಲ್ಲಿ ಮಗಳು ವರ್ಷಾ ಹಾಗೂ 2015ರಲ್ಲಿ ಮಗ ಹೇಮಂತ್‌ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದು, ಆಶಾ ಜೀವನದಲ್ಲಿ ನಡೆದ ಬಹು ದೊಡ್ಡ ಆಘಾತವಾಗಿತ್ತು.

ಗಾಯನಕ್ಕೂ ಸೈ, ಉದ್ಯಮಕ್ಕೂ ಸೈ

ಆಶಾ ಭೋಂಸ್ಲೆ ಅವರು ಬಾಲಿವುಡ್‌ ಸೇರಿದಂತೆ ಎಲ್ಲಾ ಚಿತ್ರರಂಗಲ್ಲಿ ಸಾಕಷ್ಟು ಪ್ರಶಂಸೆ ಗಳಿಸಿದ್ದರು. ಅದೇ ರೀತಿ ಅವರು ಉತ್ತಮವಾಗಿ ಅಡುಗೆ ಮಾಡುತ್ತಿದ್ದರು. ಕಪೂರ್ ಕುಟುಂಬಕ್ಕೆ ಅವರು ಮಾಡಿದ ಅಡುಗೆಯೆಂದರೆ ತುಂಬಾ ಇಷ್ಟವಂತೆ. ದುಬೈ, ಕುವೈತ್ ಮುಂತಾದೆಡೆ 'ಆಶಾ'ಸ್' (Asha's) ಹೆಸರಿನ ರೆಸ್ಟೋರೆಂಟ್‌ಗಳನ್ನು ತೆರೆಯುವ ಮೂಲಕ ಉದ್ಯಮದಲ್ಲೂ ಸೈ ಎನಿಸಿಕೊಂಡಿದ್ದರು.

2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರಿಂದ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ್ದ ಗಾಯಕಿ ಆಶಾ ಭೋಂಸ್ಲೆ

ಪ್ರಶಸ್ತಿಗಳು

ಆಶಾ ಭೋಂಸ್ಲೆ ಅವರಿಗೆ 2008ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ, 2000 ರಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2 ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಒಟ್ಟು 7 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದರು. ನಂತರ ಹೊಸ ಗಾಯಕರಿಗೆ ಅವಕಾಶ ನೀಡಲು ಗಾಯನದಿಂದ ನಿವೃತ್ತಿ ಪಡೆದರು.

ವಿಶ್ವದಾಖಲೆಗೆ ಪಾತ್ರ

ಸಂಗೀತ ಇತಿಹಾಸದಲ್ಲಿ ಅತಿ ಹೆಚ್ಚು ಸ್ಟುಡಿಯೋ ರೆಕಾರ್ಡಿಂಗ್‌ಗಳನ್ನು (ಹಾಡುಗಳು) ಮಾಡಿದ ಗಾಯಕಿ ಎಂಬ ಗಿನ್ನೆಸ್ ವಿಶ್ವ ದಾಖಲೆ ಆಶಾ ಅವರ ಹೆಸರಿನಲ್ಲಿದೆ. ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದರು. ಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಫ್ರೆಡ್ಡಿ ಮರ್ಕ್ಯುರಿ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಮಹಾರಾಷ್ಟ್ರ ಸರ್ಕಾರದ ಅತ್ಯುನ್ನತ ಗೌರವವಾದ ಮಹಾರಾಷ್ಟ್ರ ಭೂಷಣ ಪ್ರಶಸ್ತಿ, ಮಧ್ಯಪ್ರದೇಶ ಸರ್ಕಾರ (1989) ಮತ್ತು ಮಹಾರಾಷ್ಟ್ರ ಸರ್ಕಾರದಿಂದ (1999) ರಲ್ಲಿ ಲತಾ ಮಂಗೇಶ್ಕರ್ ಪ್ರಶಸ್ತಿ, ಅಮರಾವತಿ ಮತ್ತು ಜಲಗಾಂವ್ ವಿಶ್ವವಿದ್ಯಾಲಯಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದರು.

Read More
Next Story