ರಶ್ಮಿಕಾ ವಿಡಿಯೋ ಅಣಕಿಸಿದ ಶಹೀದ್ ಕಪೂರ್: ಹಳೇ ವಿವಾದಕ್ಕೆ ಬಿದ್ದಿತು ತೆರೆ
x

ರಶ್ಮಿಕಾ ಮಂದಣ್ಣ

ರಶ್ಮಿಕಾ ವಿಡಿಯೋ ಅಣಕಿಸಿದ ಶಹೀದ್ ಕಪೂರ್: ಹಳೇ ವಿವಾದಕ್ಕೆ ಬಿದ್ದಿತು ತೆರೆ

ಕಾಕ್‌ಟೇಲ್ 2 ಚಿತ್ರದ ಪ್ರಚಾರದ ವೇಳೆ ಹಳೆಯ ವಿಡಿಯೋ ವಿವಾದಕ್ಕೆ ನಟ ಶಹೀದ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ತಮಾಷೆಯಾಗಿ ಕಾಲೆಳೆಯುವ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ.


Click the Play button to hear this message in audio format

ಮುಂಬೈನಲ್ಲಿ ನಡೆದ ಮುಂಬರುವ 'ಕಾಕ್‌ಟೇಲ್ 2' ಚಿತ್ರದ ಪ್ರಚಾರದ ವೇಳೆ ಬಾಲಿವುಡ್ ನಟ ಶಹೀದ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವಿನ ಹಳೆಯ ವಿಡಿಯೋ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಇಬ್ಬರು ತಾರೆಯರ ತಮಾಷೆಯ ವರ್ತನೆ ಮತ್ತು ಕಾಲೆಳೆಯುವ ಆಟ ಪ್ರಚಾರ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದೆ.

ಕೆಲ ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಶಹೀದ್ ಕಪೂರ್ ಅವರು ರಶ್ಮಿಕಾ ಹೆಗಲ ಮೇಲೆ ಕೈ ಹಾಕಲು ಬಂದಾಗ, ರಶ್ಮಿಕಾ ಥಟ್ಟನೆ ಹಿಂದಕ್ಕೆ ಸರಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಅವರು ಶಹೀದ್ ಕಪೂರ್ ವರ್ತನೆಯಿಂದ ಅಸಹಜರಾಗಿದ್ದರು ಮತ್ತು ಮುಜುಗರ ಅನುಭವಿಸಿದ್ದರು ಎಂದು ನೆಟ್ಟಿಗರು ಭಾರಿ ಚರ್ಚೆ ನಡೆಸಿದ್ದರು. ಇಷ್ಟೆಲ್ಲಾ ಸೋಷಿಯಲ್ ಮೀಡಿಯಾ ರಾದ್ಧಾಂತ ನಡೆಯುತ್ತಿದ್ದರೂ ಇಬ್ಬರೂ ನಟರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದರು.

ಆದರೆ ಮೇ 29 ರಂದು ನಡೆದ ಮತ್ತೊಂದು ಪ್ರಚಾರ ಕಾರ್ಯಕ್ರಮದಲ್ಲಿ ಶಹೀದ್ ಕಪೂರ್ ಈ ಹಳೆಯ ವಿವಾದವನ್ನು ಇಟ್ಟುಕೊಂಡು ರಶ್ಮಿಕಾ ಕಾಲೆಳೆದಿದ್ದಾರೆ. ವೇದಿಕೆ ಮೇಲೆ ಇಬ್ಬರೂ ಜೊತೆಯಾಗಿ ಪೋಸ್ ನೀಡುವಾಗ ಶಹೀದ್ ಕಪೂರ್ ಅವರು ರಶ್ಮಿಕಾ ಅವರನ್ನು ಅಣಕಿಸುವಂತೆ ತಾವೇ ನಗುತ್ತಾ ಹಿಂದಕ್ಕೆ ಹೆಜ್ಜೆ ಇಟ್ಟಿದ್ದಾರೆ. ಇದನ್ನು ನೋಡಿ ಜೊತೆಯಲ್ಲಿದ್ದ ಮತ್ತೊಬ್ಬ ನಟಿ ಕೃತಿ ಸನನ್ ಜೋರಾಗಿ ನಕ್ಕಿದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಈ ಪರಿಸ್ಥಿತಿಯನ್ನು ಅತ್ಯಂತ ಪ್ರಬುದ್ಧತೆಯಿಂದ ನಿಭಾಯಿಸಿದ್ದು, ಮುಗುಳ್ನಗುತ್ತಲೇ ಶಹೀದ್ ಕಪೂರ್ ಅವರಿಗೆ ಅಂದು ತಾನು ಯಾವುದೇ ತಪ್ಪು ಉದ್ದೇಶದಿಂದ ಹಾಗೆ ಮಾಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರೊಂದಿಗೆ ಇಬ್ಬರ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂಬುದು ಜಗಜ್ಜಾಹೀರಾಗಿದೆ.

ಇದೇ ಚಿತ್ರಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿವಾದವೂ ಸೃಷ್ಟಿಯಾಗಿದ್ದು, ಚಿತ್ರದ 'ಮಶೂಕಾ' ಹಾಡಿನ ರಾಗವನ್ನು 1993 ರ ಇಟಾಲಿಯನ್ ಹಾಡಿನಿಂದ ಕದಿಯಲಾಗಿದೆ ಎಂದು ಕೇಳಿಬಂದಿರುವ ಆರೋಪಕ್ಕೆ ಸಂಗೀತ ನಿರ್ದೇಶಕ ಪ್ರೀತಮ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ಟೀಕಿಸುವವರನ್ನು ತಾವೇ ನೇಮಿಸಿಕೊಂಡಿರುವ 'ಉಚಿತ ಪಿಆರ್ ತಂಡ' ಎಂದು ಕರೆದಿರುವ ಪ್ರೀತಮ್, ಇಲ್ಲದ ಸಾಮ್ಯತೆಗಳನ್ನು ಹುಡುಕುವವರ ನಡೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 2012 ರ ಸೂಪರ್ ಹಿಟ್ 'ಕಾಕ್‌ಟೇಲ್' ಚಿತ್ರದ ಸೀಕ್ವೆಲ್ ಆಗಿರುವ ಈ 'ಕಾಕ್‌ಟೇಲ್ 2' ಚಿತ್ರವನ್ನು ಹೋಮಿ ಅದಾಜಾನಿಯಾ ನಿರ್ದೇಶಿಸಿದ್ದು, ಇದೇ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

Read More
Next Story