Sara Arjun| ದಂತಕಥೆ ಮಧುಬಾಲಾ ಬಯೋಪಿಕ್‌ನಲ್ಲಿ ಸಾರಾ ಅರ್ಜುನ್
x

ದಂತಕಥೆ ಮಧುಬಾಲಾ ಅವರ ಬಯೋಪಿಕ್‌ನಲ್ಲಿ ಸಾರಾ ಅರ್ಜುನ್ ನಟಿಸುತ್ತಿರುವುದು ಈಗ ಅಧಿಕೃತವಾಗಿದೆ.

Sara Arjun| ದಂತಕಥೆ ಮಧುಬಾಲಾ ಬಯೋಪಿಕ್‌ನಲ್ಲಿ ಸಾರಾ ಅರ್ಜುನ್

ಧುರಂಧರ್ ಯಶಸ್ಸಿನ ಬಳಿಕ ಸಾರಾ ಅರ್ಜುನ್ ಈಗ ಮಧುಬಾಲಾ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಈ ಚಿತ್ರವು ದಂತಕಥೆಯ ಜೀವನದ ಸವಾಲಿನ ಕಥೆಯನ್ನು ಅನಾವರಣಗೊಳಿಸಲಿದೆ.


Click the Play button to hear this message in audio format

'ಧುರಂಧರ್' ಚಿತ್ರದ ಭರ್ಜರಿ ಯಶಸ್ಸಿನ ನಂತರ ನಟಿ ಸಾರಾ ಅರ್ಜುನ್ ತಮ್ಮ ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಸುಂದರಿ ಹಾಗೂ ದಂತಕಥೆ ಮಧುಬಾಲಾ ಅವರ ಬಯೋಪಿಕ್‌ನಲ್ಲಿ ಸಾರಾ ಅರ್ಜುನ್ ನಟಿಸುತ್ತಿರುವುದು ಈಗ ಅಧಿಕೃತವಾಗಿದೆ. 'ಡಾರ್ಲಿಂಗ್ಸ್' ಖ್ಯಾತಿಯ ನಿರ್ದೇಶಕಿ ಜಸ್ಮೀತ್ ಕೆ. ರೀನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಖ್ಯಾತ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಪ್ರಸ್ತುತ ಈ ಚಿತ್ರದ ಪೂರ್ವಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಹಿಂದಿ ಚಿತ್ರರಂಗದ ಸುವರ್ಣ ಯುಗವನ್ನು ತೆರೆಯ ಮೇಲೆ ಮರುಸೃಷ್ಟಿಸಲು ಚಿತ್ರತಂಡ ಸಜ್ಜಾಗಿದೆ. ಮೂಲಗಳ ಪ್ರಕಾರ, ಮಧುಬಾಲಾ ಅವರ ಪಾತ್ರಕ್ಕಾಗಿ ಸಾರಾ ಅರ್ಜುನ್ ಭೌತಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದಾರೆ. ಮಧುಬಾಲಾ ಅವರ ಆಕರ್ಷಕ ವ್ಯಕ್ತಿತ್ವ, ವಿನೂತನ ಶೈಲಿ ಮತ್ತು ಮಾತುಗಾರಿಕೆಯನ್ನು ಕರಗತ ಮಾಡಿಕೊಳ್ಳಲು ಸಾರಾ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ವೇಷಭೂಷಣದಿಂದ ಹಿಡಿದು ಪ್ರತಿಯೊಂದು ಸಣ್ಣ ವಿಚಾರದಲ್ಲೂ ನಿಖರತೆ ಕಾಪಾಡಿಕೊಳ್ಳಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಅತಿ ಹೆಚ್ಚು ಸಂಭಾವನೆ ಪಡೆದಿದ್ದ ನಟಿ

1950ರ ದಶಕದಲ್ಲಿ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದ ಮಧುಬಾಲಾ, ಸುಮಾರು ಎರಡು ದಶಕಗಳ ಕಾಲ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರ ವೈಭವಯುತ ಮತ್ತು ಅಷ್ಟೇ ನೋವಿನಿಂದ ಕೂಡಿದ ಜೀವನಗಾಥೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಇದೊಂದು ಭಾವನಾತ್ಮಕ ಕಥೆಯಾಗಿದ್ದು, ಮಧುಬಾಲಾ ಅವರಿಗೆ ಸಲ್ಲಿಸುವ ಅತ್ಯುನ್ನತ ಗೌರವವಾಗಿ ಈ ಚಿತ್ರವನ್ನು ರೂಪಿಸಲಾಗುತ್ತಿದೆ. ಬನ್ಸಾಲಿ ಅವರ ನಿರ್ಮಾಣ ಹಾಗೂ ಜಸ್ಮೀತ್ ಅವರ ನಿರ್ದೇಶನದ ಈ ಸಿನಿಮಾ ಸದ್ಯ ಬಾಲಿವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಾರಾ ಅರ್ಜುನ್ ಅವರಿಗೆ ಇದು ವೃತ್ತಿಜೀವನದ ಬಹುದೊಡ್ಡ ತಿರುವು ನೀಡುವ ಚಿತ್ರವೆಂದು ಭಾವಿಸಲಾಗಿದೆ. ಈ ಹಿಂದೆ ಮಧುಬಾಲಾ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು.

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮಧುಬಾಲಾ ಎನ್ನುವ ಹೆಸರು ಒಂದು ಮಾಂತ್ರಿಕ ಶಕ್ತಿ. ಕೇವಲ ಸೌಂದರ್ಯದಿಂದಷ್ಟೇ ಅಲ್ಲದೆ, ತನ್ನ ಅದ್ಭುತ ನಟನೆಯ ಮೂಲಕ 1950 ಮತ್ತು 60ರ ದಶಕದಲ್ಲಿ ಬಾಲಿವುಡ್ ಆಳಿದ ಈ ನಟಿಯ ಜೀವನವು ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇರಲಿಲ್ಲ.ಕೇವಲ 9ನೇ ವಯಸ್ಸಿನಲ್ಲಿ 'ಬಸಂತ್' (1942) ಚಿತ್ರದ ಮೂಲಕ ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿದ ಇವರು, ನಂತರ ದೇವಿಕಾ ರಾಣಿ ಅವರ ಸಲಹೆಯಂತೆ ತಮ್ಮ ಹೆಸರನ್ನು 'ಮಧುಬಾಲಾ' ಎಂದು ಬದಲಾಯಿಸಿಕೊಂಡರು. 14ನೇ ವಯಸ್ಸಿನಲ್ಲಿ 'ನೀಲ್ ಕಮಲ್' ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದರು. 1949ರಲ್ಲಿ ತೆರೆಕಂಡ 'ಮಹಲ್' ಸಿನಿಮಾ ಇವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು.

ಬಳಿಕ ಮುಘಲ್-ಎ-ಅಜಮ್ ಸಿನಿಮಾದ ಅನಾರ್ಕಲಿ ಪಾತ್ರದ ಮೂಲಕ ಇಂದಿಗೂ ಇವರು ಮನೆಮಾತಾಗಿದ್ದಾರೆ. ಚಲ್ತಿ ಕಾ ನಾಮ್ ಗಾಡಿ, ಹೌರಾ ಬ್ರಿಡ್ಜ್, ಕಾಲಾ ಪಾನಿ, ಮತ್ತು ಮಿಸ್ಟರ್ ಆಂಡ್ ಮಿಸಸ್ 55 ಇವು ಇವರು ನಟಿಸಿರುವ ಅದ್ಭುತ ಸಿನಿಮಾಗಳು.

ಮಧುಬಾಲಾ ಅವರ ಜೀವನವು ಹೊರಗಿನಿಂದ ಎಷ್ಟು ಸುಂದರವಾಗಿ ಕಾಣುತ್ತಿತ್ತೋ, ಒಳಗಿನಿಂದ ಅಷ್ಟೇ ನೋವಿನಿಂದ ಕೂಡಿತ್ತು. ನಟ ದಿಲೀಪ್ ಕುಮಾರ್ ಅವರೊಂದಿಗೆ ಸುದೀರ್ಘವಾದ ಮತ್ತು ಚರ್ಚಿತವಾದ ಪ್ರೇಮ ಸಂಬಂಧ ಹೊಂದಿದ್ದ ಇವರು, ಕಾರಣಾಂತರಗಳಿಂದ ಅವರಿಂದ ದೂರಾದರು. ನಂತರ 1960 ರಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರನ್ನು ವಿವಾಹವಾದರು.

ಮಧುಬಾಲಾ ಅವರಿಗೆ ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರವಿತ್ತು.ಆ ಕಾಲದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿರಲಿಲ್ಲ. ಶೂಟಿಂಗ್ ಸೆಟ್‌ಗಳಲ್ಲಿ ರಕ್ತವಾಂತಿ ಮಾಡಿಕೊಂಡಿದ್ದರೂ, ತನ್ನ ಕುಟುಂಬವನ್ನು ಸಲಹುವ ಜವಾಬ್ದಾರಿಯಿಂದ ನಟನೆಯನ್ನು ಮುಂದುವರಿಸಿದ್ದರು. ಕೊನೆಗೆ ಕೇವಲ 36ನೇ ವಯಸ್ಸಿನಲ್ಲಿ ಮಧುಬಾಲಾ ಇಹಲೋಕ ತ್ಯಜಿಸಿದ್ದರು.

Read More
Next Story